ಕಾವ್ಯ ಸಂಗಾತಿ
ಆದಪ್ಪ ಹೆಂಬಾ
ನಾನ್ಯಾರು?

ವಯಸ್ಸಾಯಿತಲ್ಲ?
ಎಲ್ಲ ಕೆಲಸಗಳಿಂದೀಗ
ಮುಕ್ತಿಯೆನಗೆ
ನಾನೀಗ ವಿಶ್ರಾಂತ
ಕೆಲಸವಿಲ್ಲ ಅವಸರವಿಲ್ಲ
ನನ್ನ ಮನೆಯೀಗ ಶಾಂತ
ನನ್ನನೇ ನಾನು ಕೇಳುತ್ತಿರುವೆ
ನಾನಾರು?
ವಿಶ್ರಾಂತ…. ನಾನು ನಾನೇ ||
ಒಂದು ಕಾಲವಿತ್ತು, ಕಸುವಿತ್ತು
ಬಂಗಲೆಗಳ ಕಟ್ಟಿದೆ ಜೊತೆಗೆ
ತೋಟದ ಮನೆಯನ್ನೂ…
ಸಣ್ಣದೋ ದೊಡ್ಡದೋ ಬೇಕಿಲ್ಲ
ನಾನೊಬ್ಬ ಆವಿಷ್ಕಾರಿ
ಆದರೀಗ ನಾಲ್ಕು ಸಣ್ಣ ಗೋಡೆಗಳ ನಡುವಿನ ಬಂಧಿ||
ಸರಳವೇನಿರಲಿಲ್ಲ ನನ್ನ ಬದುಕು
ಸೈಕಲ್ಲಿನಿಂದ ಲೂನಾ
ಲೂನಾದಿಂದ ಬೈಕು,
ಬೈಕಿನಿಂದ ಕಾರು
ಎಲ್ಲದರಲ್ಲೂ ನಾನು
ಸ್ಟೈಲ್ ಕಿಂಗೇ
ಈಗ?
ನಾಲ್ಕು ಸಣ್ಣ ಗೋಡೆಗಳ
ಮಧ್ಯೆ ನಿಧಾನ ನಡಿಗೆ||
ನಿಸರ್ಗ ನಗುತ ಕೇಳುತಿದೆ
ಗೆಳೆಯಾ ಹೇಳೀಗ ನೀನಾರು?
ನಾನೂ ನಗುತ್ತಲೇ ಉತ್ತರಿಸುತ್ತೇನೆ
ನಾನು ನಾನೇ……
ನೂರು ನಾಡುಗಳ ಸುತ್ತಿವೆ
ನನ್ನ ಕಾಲುಗಳು
ವಿದೇಶಗಳನ್ನೂ,….
ಕಸುವಿದ್ದ ಕಾಲಕ್ಕೆ
ಖಂಡಾಂತರ ನೆಗೆತಗಳು
ಈಗ?
ನನ್ನ ರೂಮಿನಿಂದ ಅಡುಗೆಮನೆ
ಅದೂ ನಿಧಾನ ನಡಿಗೆ
ಅದೇ ದೂರ||
ನೂರಾರು ಊರುಗಳ
ಕೇರಿಗಳ ಸಂಸ್ಕೃತಿ ಗೊತ್ತೆನಗೆ
ಈಗ?
ನನ್ನದೇ ಕುಟುಂಬದ
ಕರುಳ ಮಿಡಿತ ಅರ್ಥವಾಗಲೊಲ್ಲದು
ನಾನು ಭಾರವಾದೆನಾ? ಕಣ್ಣೀರು||
ಮತ್ತದೇ
ನಿಸರ್ಗ ನಗುತ ಕೇಳುತಿದೆ
ಗೆಳೆಯಾ ಹೇಳೀಗ ನೀನಾರು?
ನಾನೂ ನಗುತ್ತಲೇ ಉತ್ತರಿಸುತ್ತೇನೆ
ನಾನು ನಾನೇ……||
ಒಂದು ಕಾಲವಿತ್ತು
ಮಕ್ಕಳ ಹುಟ್ಟಿದಬ್ಬವೋ
ನಿಶ್ಚಿತಾರ್ಥವೋ, ಮದುವೆಯೋ…..
ಅದ್ಧೂರಿಗೆ ಇನ್ನೊಂದು
ಹೆಸರೇ ನಾನಾಗಿರುತ್ತಿದ್ದೆ
ಈಗ?
ತರಕಾರಿ ತರಲು
ಚಿಲ್ಲರೆಗಾಗಿ ತಡಕಾಡುತ್ತಿರುವೆ||
ಆ ಕಾಲಕ್ಕೆ ನನ್ನೆಡಬಲಕ್ಕೆ
ನಾಯಿಗಳು
ಕೊಟ್ಟಿಗೆಯ ತುಂಬ ಹಸುಗಳು
ನಾನೇ ತಿನ್ನಿಸಬೇಕಿತ್ತವಕ್ಕೆ
ಈಗ?
ನನಗೇ….ಎರಡು ತುತ್ತು ಬೇಕು
ಮೂರನೇದು ಸಾಕು||
ಮತ್ತದೇ
ನಿಸರ್ಗ ನಗುತ ಕೇಳುತಿದೆ
ಗೆಳೆಯಾ ಹೇಳೀಗ ನೀನಾರು?
ನಾನೂ ನಗುತ್ತಲೇ ಉತ್ತರಿಸುತ್ತೇನೆ
ನಾನು ನಾನೇ…..||
ನಾ ಗಳಿಸಿದ ಬೆಳ್ಳಿ-ಬಂಗಾರ
ಮುತ್ತು-ರತ್ನ, ವಜ್ರ-ವೈಢೂರ್ಯ ಗಳು
ಮುದುಡಿ ಮಲಗಿವೆ ಲಾಕರಿನಲ್ಲಿ
ಚೆಂದದ ಶ್ಯೂಟು ಬೂಟು ಜಾಕೆಟ್ಟು
ವಾರ್ಡರೋಬಿನಲ್ಲಿ
ಈಗ?
ಮೃದು ಬಿಳಿ ಪೈಜಾಮ
ಮೇಲೊಂದು ಬಿಳಿಯದೆ ಅರ್ಧಂಗಿ… ||
ಒಂದು ಕಾಲವಿತ್ತು
ಇಂಗ್ಲೀಷು, ಹಿಂದಿ
ಫ್ರೆಂಚು ಸ್ಪ್ಯಾನಿಶ್ಶು….
ನಾ ಬಹು ಭಾಷಾ ಪಂಡಿತ
ಈಗ?
ತಾಯಿ ಯಿಲ್ಲದ ನನಗೆ
ತಾಯಿ ಭಾಷೆ ಮಾತ್ರ ಗತಿ||
ಒಂದೊಮ್ಮೆ ನಾ
ಕಟು ನಿಯಮ ಪಾಲಕ
ಕಲಿತ ಶಿಕ್ಷಣದ ಅನುಪಾಲಕ
ಈಗ?
ಗೊತ್ತಾಗುತ್ತಿದೆ ಸತ್ಯವೇನೆಂದು||
ಸಾಕು ಸಾಕೀಗ
ಬದುಕ ಪಯಣಿಗನೇ
ಸಿದ್ಧನಾಗು
ಅಂತಿಮ ನಮನಕ್ಕೆ
ಕಾಯುತ್ತಿದೆ ಜಗ
ನಗುತ ತಯಾರಾಗು||
ಮತ್ತದೇ
ನಿಸರ್ಗ ನಗುತ ಕೇಳುತಿದೆ
ಗೆಳೆಯ ಹೇಳೀಗ ನೀನಾರು?
ಆದರೀಬಾರಿ ನಾನಂದೆ
ನಿಸರ್ಗವೇ
ನೀನೇ ನಾನು
ನಾನೇ ನೀನು
ಮೇಲೆ ಆಕಾಶ ನೋಡಿ ಅತ್ತೆ
ಭೂತಾಯಿಯನೊಮ್ಮೆ ಮೆಲು
ಸ್ಪರ್ಶಿಸಿದೆ…ಕೇಳಿದೆ ಅವಳನ್ನು
ಅಮ್ಮಾ ಕ್ಷಮಿಸು
ಬದುಕಲು ಇನ್ನೊಂದವಕಾಶ ಕೊಡು
ಆದ್ರೆ ಹಣ ಗಳಿಸುವ ಯಂತ್ರದಂತಲ್ಲ
ಮನುಷ್ಯನಾಗಿ ಬದುಕುವುದಕ್ಕೆ
ಮೌಲ್ಯಗಳಿಂದ ಬದುಕುವುದಕ್ಕೆ
ಕುಟುಂಬದೊಂದಿಗೆ ಬದುಕುವುದಕ್ಕೆ
ಪ್ರೀತಿಯಿಂದ ಬದುಕುವುದಕ್ಕೆ
ಇನ್ನೊಂದವಕಾಶ ಕೊಡು ಎಂದೆ
ಅವಳು ಮಾತಾಡಲಿಲ್ಲ |
ಆದಪ್ಪ ಹೆಂಬಾ





Super
ನಿಜಕ್ಕೂ ಅತ್ಯದ್ಭುತ, ನಾನು ಈ ಕವಿತೆಯನ್ನು ಹಲವಾರು ಬಾರಿ ಮತ್ತೆ -ಮತ್ತೆ ಓದ ಬೇಕೇನಿಸುತ್ತದೆ. ಜೀವ ಇರುವವರೆಗೂ ——
Super sir
ವಾಸ್ತವಿಕತೆಯನ್ನು ಬಿಂಬಿಸುವ ಅದ್ಭುತ ಕವಿತೆ ಸರ್… ಜೀವನದ ಮುಸ್ಸಂಜೆಯಲ್ಲಿ ಬದುವಕಿನ ನೈಜತೆ ಅರಿವಾದಾಗ ಎಲ್ಲವೂ ಮುಗಿದು ಹೋಗಿರುತ್ತೆ.ಎಲ್ಲರ ಬದುಕಿನ ಜೀವನಾನುಭವಗಳನ್ನು ಮೆಲುಕು ಹಾಕಿಸುವ ಕಾವ್ಯ.ರಿವಿನ ಒಳಗಣ್ಣು ತೆರೆಸುವ ಕಾವ್ಯ.