ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಲ್ಯ ಯೌವ್ವನವ ಸವೆಸವೆಸುತ್ತ
ಶಿಕ್ಷಣದ ಕಠಿಣತೆಯ ಅನುಭವಿಸುತ್ತ
ಕಾಣದ ಭವಿಷ್ಯವ ಬರೆಯಲು ಹೊರಟ
ಇವರು ಕಾರ್ಪೊರೇಟ್ ಹಮಾಲಿಗಳು !

ಕೊನೆಗೆ ಹೇಗೋ ಸಿಕ್ಕ ನೌಕರಿಯಲ್ಲಿ ಪರದಾಟ
ಅಷ್ಟಕಷ್ಟೆ ಸರಿದೂಗುವ ಸಂಬಳದ ತೊಳಲಾಟ
ವರ್ಷಕ್ಕೊಮ್ಮೆ ಸಿಗುವ ಒಂದು ವಾರದ ರಜೆಗಾಗಿ
ವರ್ಷಪೂರ್ತಿ ಕೈ-ಕೆಸರಾಗಿಸಿ ದುಡಿಯುವ
ಇವರು ಕಾರ್ಪೊರೇಟ್ ಹಮಾಲಿಗಳು !

ಎಲ್ಲವೂ ಆಫೀಸಿನಲ್ಲೇ ನಿದ್ದೆಯೊಂದನ್ನು ಬಿಟ್ಟು
ದಾರಿಯಲ್ಲೇ ಮೀಟಿಂಗು-ಚರ್ಚೆ-ಟಾರ್ಗೆಟ್ಟು
ಈಗಿನ ಆನ್ಲೈನ್ ತಂತ್ರ-ಕುತಂತ್ರದಿಂದಾಗಿ
ಹಗಲಿರುಳು ಆಫೀಸ್-ಮಂತ್ರ ಜಪಿಸುವ
ಇವರು ಕಾರ್ಪೊರೇಟ್ ಹಮಾಲಿಗಳು !

ಅಗಸನ ಕತ್ತೆಯಂತೆ ಬಲು ಭಾರ ಬದುಕು
ವಾರವೆಲ್ಲ ಸುಸ್ತೋಸುಸ್ತು ಈ ಗಾಣದ ಎತ್ತು
ಲಗಾಮಿಲ್ಲದ ಮನಸ್ಸಿನ ಪ್ರಾಣಿಯಾಗಿ
ವಾರಾಂತ್ಯದಲ್ಲಿ ಕುದುರೆಯಾಗ ಬಯಸುವ
ಇವರು ಕಾರ್ಪೊರೇಟ್ ಹಮಾಲಿಗಳು !

ಬದುಕಿಗಾಗಿ ಕೆಲಸವನ್ನು, ಕೆಲಸದಲ್ಲಿ ಬದುಕನ್ನು ಅರಸುತ್ತ
ಮದುವೆ ಸುಖಸಂಸಾರದ ಸುಂದರ ಕನಸು ಕಾಣುತ್ತ
ಇ-ಎಂ-ಐ ಕ್ರೆಡಿಟ್ ಕಾರ್ಡಗಳ ಚಕ್ರವ್ಯೂಹದಲ್ಲಿ ಸಿಲುಕಿ
ಸೋತು ನಲವತ್ತಕ್ಕೆ ರಿಟಾಯರ್ ಮೆಂಟ್ ಹಂಬಲಿಸುವ
ಇವರು ಕಾರ್ಪೊರೇಟ್ ಹಮಾಲಿಗಳು !

ಅತ್ತ ಶ್ರೀಮಂತರಾಗದೆ ಇತ್ತ ಬಡವರಾಗುಳಿಯದೆ
ಸಮಾಜ ಸುಧಾರಣೆಯ ಧ್ಯೇಯವಿದ್ದರೂ
ಸಂಸಾರ ಸಾಗರದ ಸುಳಿಯೊಳಗೆ ಸಿಕ್ಕಿ
ವಿಲವಿಲ ಒದ್ದಾಡುವ ಮಧ್ಯಮವರ್ಗಿಯರಾದ
ಇವರು ಕಾರ್ಪೊರೇಟ್ ಹಮಾಲಿಗಳು !
ಇವರು ಕಾರ್ಪೊರೇಟ್ ಹಮಾಲಿಗಳು !!


About The Author

1 thought on ““ಇವರು ಕಾರ್ಪೊರೇಟ್ ಹಮಾಲಿಗಳು !” CA ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ”

  1. ಮಧ್ಯಮ ವರ್ಗದ ಜನರ ಬದುಕಿನ ಚಿತ್ರಣ ಸೊಗಸಾಗಿ ಮೂಡಿದೆ.‌ಅಭಿನಂದನೆಗಳು

Leave a Reply

You cannot copy content of this page

Scroll to Top