ಝೆನ್ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ”


ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ
ಅದೊಂದು ಝೆನ್ ಆಶ್ರಮ. ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುವ ಬುದ್ಧ ಭಿಕ್ಷುಗಳ ಈ ಆಶ್ರಮದಲ್ಲಿ ಬೌದ್ಧ ಧರ್ಮದ ಕುರಿತಾದ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರು. ಬೌದ್ಧ ಧರ್ಮದ ಮೂಲ ತತ್ವಗಳನ್ನು ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಪ್ರಚಾರಗಳು ಕೂಡ ನಡೆಯುತ್ತಿದ್ದವು.
ಬೌದ್ಧ ಧರ್ಮದ ತತ್ವಗಳ ಕುರಿತಾದ ತರಗತಿಯಲ್ಲಿ ಝೆನ್ ಗುರುಗಳು ಆ ದಿನ ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಸಮಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಲ್ಲಿ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ಶಿಷ್ಯನೊಬ್ಬ ಅತ್ಯಂತ ಬಿರುಸಿನಿಂದ ಬಂದು ನಿಂತ.
ಆತನ ನಡಿಗೆ ಅತ್ಯಂತ ವೇಗದಿಂದ ಕೂಡಿದ್ದು ಬಹು ದೂರದಿಂದ ಹೀಗೆಯೇ ಓಡು ನಡಿಗೆಯಲ್ಲಿ ಬಂದಿರಬಹುದು ಎಂಬುದು ಆತನ ಕೆಂಪಾದ ಮುಖ, ತೀವ್ರವಾದ ಉಸಿರಾಟ ಮತ್ತು ಆತ ಧರಿಸಿದ ಬಟ್ಟೆಗಳು ಬೆವರಿನಿಂದ ತೋಯ್ದು ಹೋಗಿರುವುದನ್ನು ನೋಡಿದರೆ ಗೊತ್ತಾಗುತ್ತಿತ್ತು.
ಆತನಿಗೆ ಕೈ ಮಾಡಿ ಕುಳಿತುಕೊಳ್ಳಲು ಸೂಚಿಸಿದ ಗುರುಗಳು ತಮ್ಮ ಪಾಠವನ್ನು ಮುಗಿಸಿದ ನಂತರ ಎಲ್ಲ ವಿದ್ಯಾರ್ಥಿಗಳನ್ನು ಕಳುಹಿಸಿ ನಂತರ ಆತನನ್ನು ತಮ್ಮ ಬಳಿ ಕರೆದರು.
ಇದೀಗ ಆತನ ಏದುಸಿರು ಕಡಿಮೆಯಾಗಿದ್ದರೂ ಮುಖದಲ್ಲಿನ ಸಿಟ್ಟಿನ ಭಾವ ಮಾತ್ರ ಕಡಿಮೆಯಾಗಿರಲಿಲ್ಲ. ಗುರುಗಳು ಆತನನ್ನು ತಮ್ಮ ಎಂದಿನ ಸ್ನಿಗ್ದ ಮುಗುಳ್ನಗೆಯಿಂದ ನೋಡುತ್ತಾ ಈಗ ಹೇಳು, ಏನು ನಿನ್ನ ಸಮಸ್ಯೆ? ಎಂದು ಕೇಳಿದರು.
ಗುರುಗಳೇ ಇದುವರೆಗೂ ನನ್ನ ಜೊತೆ ಅತ್ಯಂತ ಸ್ನೇಹದಿಂದ ವರ್ತಿಸುತ್ತಿದ್ದ ಆತ ನನ್ನ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದಾನೆ, ನನ್ನನ್ನು ಬೇರೆಯವರ ಮುಂದೆ ಅವಹೇಳನ ಮಾಡಿ ನಗುತ್ತಿದ್ದಾನೆ ನನಗೆ ತಡೆದುಕೊಳ್ಳಲಾಗದಷ್ಟು ಸಿಟ್ಟು ಬರುತ್ತಿದೆ ಎಂದು ಮತ್ತೊಮ್ಮೆ ಆ ಘಟನೆಯನ್ನು ನೆನೆಸಿಕೊಂಡು ಆತ ಉದ್ರಿಕ್ತನಾಗಿ ಹೇಳಿದ.
ಆತನ ಮನದ ಭಾವನೆಯನ್ನು ಅರಿತು ಗುರುಗಳು ಆತನನ್ನು ಹೀಗೆಯೇ ಒಂದು ಸುತ್ತು ಬೆಟ್ಟದ ಆ ತುದಿಯ ಬಳಿ ಹೋಗಿ ಬರೋಣ ಎಂದು ಹೇಳಿದರು.
ನನ್ನ ಸಮಸ್ಯೆಗೆ ಉತ್ತರ ಹೇಳುವ ಬದಲು ಗುರುಗಳು ನನ್ನನ್ನು ಬೆಟ್ಟಕ್ಕೆ ನಡೆಯಲು ಹೇಳುತ್ತಾರಲ್ಲ ಎಂದು ತುಸು ಬೇಸರವಾದರೂ ಗುರುಗಳ ಮಾತನ್ನು ಪಾಲಿಸಿ ಆತ ಅವರೊಂದಿಗೆ ಹೆಜ್ಜೆ ಹಾಕಿದ.ಮುಂದಿನ ಕೆಲ ನಿಮಿಷಗಳ ಕಾಲ ಅವರಿಬ್ಬರ ನಡುವೆ ಮೌನ ಆವರಿಸಿತ್ತು.
ಬೆಟ್ಟದ ತುದಿಯನ್ನು ತಲುಪಿದಾಗ ಅಲ್ಲಿರುವ ವಿಶಾಲವಾದ ನೀಲಾಕಾಶ, ಆಹ್ಲಾದಕಾರ ವಾತಾವರಣದಲ್ಲಿ ಆತನ ಮನಸ್ಸು ಪ್ರಶಾಂತವಾಯಿತು. ಬೆಟ್ಟದ ಆವರಣದ ಒಂದು ತುದಿಯ ಭಾಗದಲ್ಲಿದ್ದ ದೊಡ್ಡ ಬಂಡೆಗಲ್ಲನ್ನು ತೋರಿದ ಗುರುಗಳು ಶಿಷ್ಯನನ್ನು ಕುರಿತು ಈ ಕಲ್ಲನ್ನು ಜೋರಾಗಿ ಬೆಟ್ಟದ ತುದಿಗೆ ತಳ್ಳು ಎಂದು ಹೇಳಿದರು. ಇದು ತನ್ನಿಂದ ಸಾಧ್ಯವಾಗದ ಕೆಲಸ ಎಂಬ ಅರಿವಿದ್ದರೂ ಕೂಡ ಶಿಷ್ಯ ಗುರುಗಳ ಮಾತಿಗೆ ಒಪ್ಪಿ ಬಂಡೆಗಲ್ಲನ್ನು ತಳ್ಳುವ ಪ್ರಯತ್ನ ಮಾಡಿದ. ಊಹುಂ! ಕಲ್ಲು ಒಂದೇ ಒಂದು ನೂಲಿನ ಎಳೆಯಷ್ಟು ಕೂಡ ಸ್ಥಾನಪಲ್ಲಟವಾಗಲಿಲ್ಲ.
ಗುರುಗಳತ್ತ ಮುಖ ತಿರುಗಿಸಿದ ಶಿಷ್ಯನನ್ನು ಕುರಿತು ಗುರುಗಳು ಆ ಬಂಡೆ ಕಲ್ಲನ್ನು ಜೋರಾಗಿ ಗುದ್ದು ಎಂದು ಹೇಳಿದರು. ಇದನ್ನು ಗುದ್ದಿದರೆ ನನ್ನ ಕೈಗೇ ನೋವು ಎಂದು ಮನದಲ್ಲಿಯೇ ಅಂದುಕೊಳ್ಳುತ್ತ ಶಿಷ್ಯ ಆ ಕೆಲಸವನ್ನು ಮಾಡಿದ. ಜೋರಾಗಿ ಗುದ್ದಿದ ಪರಿಣಾಮವಾಗಿ ಆತನ ಕೈಗೆ ಉಂಟಾದ
ನೋವು ಆತನ ಮುಖದಲ್ಲಿ ಅನಾವರಣವಾಯಿತು.
ಗುರುಗಳು ಆತನನ್ನು ಕುರಿತು ಈಗ ನಿನ್ನ ಮನಸ್ಸಿಗೆ ತೋಚಿದಂತೆ ಬಂಡೆಯನ್ನು ಬೈಯಲು ಹೇಳಿದರು. ಗುರುಗಳ ಮಾತಿನಂತೆ ಆ ಶಿಷ್ಯ ಬಂಡೆಗಲ್ಲಿನ ಮುಂದೆ ನಿಂತು ಜೋರಾಗಿ ಕಿರುಚುತ್ತ ಬಯ್ಯಲಾರಂಭಿಸಿದ ಆತ ಒಂದು ಹಂತದಲ್ಲಿ ಸಾಕಾಗಿ ಸುಮ್ಮನಾಗಿಬಿಟ್ಟ.
ಇದೀಗ ಆತನ ಹೆಗಲ ಮೇಲೆ ಕೈ ಹಾಕಿದ ಗುರುಗಳು ನೋಡಿದೆಯಾ ಮಗು! ಈ ಬಂಡೆಗಲ್ಲಿಗೆ ನೀನು ಹೊಡೆಯುವ, ಬಡಿಯುವ, ಬೈದಾಡುವ ಯಾವುದೇ ಕ್ರಿಯೆಗಳು ಪರಿಣಾಮವನ್ನು ಬೀರುವುದಿಲ್ಲ.ಅದು ನಿಶ್ಚಲವಾಗಿರುತ್ತದೆ, ಏಕೆಂದರೆ ಅದಕ್ಕೆ ತಾನೇನು ಎಂಬುದರ ಕುರಿತ ಅರಿವು ಇರುತ್ತದೆ. ನೀನು ಕೂಡ ಈ ಬಂಡೆಗಲ್ಲಿನಂತೆ ಆಗಬೇಕು, ಎಂದು ಹೇಳಿದರು.
ಆದರೆ ಗುರುಗಳೇ ಈ ಬಂಡೆಗಲ್ಲು ನಿರ್ಜೀವವಾದ್ದದ್ದು ನಾನು ಸಜೀವಿ ಶರೀರ! ನನಗೆ ನೋವಾಗುತ್ತದೆ ಅಲ್ಲವೇ? ಎಂದು ಶಿಷ್ಯ ಮುಖವನ್ನು ಕಿವುಚಿ ಕೇಳಿದ.
ನಿನಗೆ ನೋವಾಗುತ್ತದೆ ಎಂಬ ಅರಿವಿನ ಭಾವವೇ ತುಂಬಾ ಸುಂದರವಾದದ್ದು. ನಿಜ! ಆದರೆ ಅದು ಅವರು ನಿನ್ನನ್ನು ಅವಮಾನ ಮಾಡಿದರು ಎಂದೋ ಇಲ್ಲವೇ ನಿನ್ನನ್ನು ಕೆಟ್ಟದಾಗಿ ಆಡಿಕೊಂಡರು ಎಂಬ ಕಾರಣಕ್ಕಾಗಿಯೋ ಅಲ್ಲ ಎಂದು ಗುರುಗಳು ಹೇಳಿದಾಗ ಶಿಷ್ಯ ಅವರೆಡೆ ಗಲಿಬಿಲಿಯಿಂದ ನೋಡಿದ.
ಶಿಷ್ಯನ ಗಲಿಬಿಲಿಯನ್ನು ಅರ್ಥ ಮಾಡಿಕೊಂಡ ಗುರುಗಳು ನಿಧಾನವಾಗಿ ಕೆಳಕ್ಕೆ ಬಾಗಿ ಅಂಗೈಯಲ್ಲಿ ಹಿಡಿಯಲು ಸಾಧ್ಯವಾಗಬಹುದಾದ ತುಸು ದೊಡ್ಡ ಕಲ್ಲೊಂದನ್ನು ಎತ್ತಿ ಅವನ ಕೈಯಲ್ಲಿ ಇಟ್ಟರು. ಆ ಕಲ್ಲನ್ನು ಗಟ್ಟಿಯಾಗಿ ಹಿಡಿದುಕೋ ಎಂದು ಗುರುಗಳು ಹೇಳಿದರು.ಒರಟಾದ ಮೇಲ್ಮೈಯನ್ನು ಹೊಂದಿದ್ದ ಆ ಕಲ್ಲನ್ನು ಶಿಷ್ಯ ಹಿಡಿದುಕೊಂಡ. ಇನ್ನಷ್ಟು ಗಟ್ಟಿಯಾಗಿ ಹಿಡಿದುಕೋ ಎಂದು ಗುರುಗಳು ಹೇಳಲು ಆತ ತನ್ನ ಕೈಯ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿದ. ಹಾಗೆಯೇ ಇನ್ನಷ್ಟು ಹೊತ್ತು ಹಿಡಿದುಕೋ ಎಂದು ಗುರುಗಳು ಹೇಳಿ ಸುಮ್ಮನಾದರು. ಗುರುಗಳ ಮಾತಿನಂತೆ ಮತ್ತಷ್ಟು ಹೊತ್ತು ಕಲ್ಲನ್ನು ಹಿಡಿದುಕೊಂಡ ಶಿಷ್ಯ ಗುರುಗಳೇ ನನ್ನ ಕೈ ನೋವಾಗುತ್ತಿದೆ ಎಂದು ಮುಲುಗುಟ್ಟಿದ.
ಇದೀಗ ನಿನ್ನ ಕೈಯ ಹಿಡಿತವನ್ನು ಸಡಿಲಿಸು ಎಂದು ಗುರುಗಳು ಹೇಳಿದರು. ಹಿಡಿತವನ್ನು ಸಡಿಲಿಸಿದ ಶಿಷ್ಯನನ್ನು ಕುರಿತು ಈಗ ನಿನಗೆ ಹೇಗೆ ಅನಿಸುತ್ತಿದೆ ಎಂದು ಕೇಳಿದರು.
ಗುರುಗಳೇ ನನಗೆ ಈಗ ನೋವಾಗುತ್ತಿಲ್ಲ ಎಂದು ಇನ್ನಷ್ಟು ಸಡಿಲಿಸು ಎಂದು ಹೇಳಿದಾಗ ಗುರುಗಳ ಮಾತನ್ನು ಪಾಲಿಸಿದ ಶಿಷ್ಯ ಇದೀಗ ನನಗೆ ಕೊಂಚವೂ ನೋವಾಗುತ್ತಿಲ್ಲ ಎಂದು ಹೇಳಿದ.
ಗುರುಗಳು ನಿನ್ನ ಕೈಯಲ್ಲಿರುವ ಕಲ್ಲನ್ನು ಎಸೆದು ಬಿಡು ಎಂದು ಹೇಳಲು ಶಿಷ್ಯ ತನ್ನ ಕೈಯಲ್ಲಿರುವ ಕಲ್ಲನ್ನು ಎಸೆದು ನಿರಾಳ ಭಾವವನ್ನು ಅನುಭವಿಸಿದ.
ನೋಡಿದೆಯಾ ಮಗು, ಆ ಪುಟ್ಟ ಕಲ್ಲನ್ನು ನೀನು ಕೈಯಲ್ಲಿ ಹಿಡಿದೆ.. ನಿನಗೆ ನೋವಾದದ್ದು ಆ ಕಲ್ಲನ್ನು ನೀನು ಗಟ್ಟಿಯಾಗಿ ಹಿಡಿದಾಗ. ಆ ಬಿಗಿಯನ್ನು ನೀನು ಸಡಿಲಿಸಿದ ಕೂಡಲೇ ನಿನ್ನ ನೋವು ಕಡಿಮೆಯಾಯಿತು. ಕೈಯಲ್ಲಿದ್ದ ಕಲ್ಲನ್ನು ಎಸೆದ ನಂತರ ನೀನು ಅತ್ಯಂತ ನಿರಾಳ ಭಾವವನ್ನು ಅನುಭವಿಸಿದೆ.
ಬೇರೆಯವರು ನಮ್ಮತ್ತ ಎಸೆಯುವ ನೋವು, ಅಪಮಾನಗಳು ಎಂಬ ಕಲ್ಲುಗಳನ್ನು ನಾವು ಬಹಳ ಹೊತ್ತು ಹಿಡಿದು ನಿಂತರೆ ನೋವಾಗುವುದು ನಮಗೆಯೇ ಹೊರತು ಅವರಿಗಲ್ಲ. ಆದ್ದರಿಂದ ಬೇರೆಯವರು ನಮಗೆ ನೀಡುವ ನೋವು, ಅಪಮಾನಗಳೆಂಬ ಕೊಡುಗೆಗಳನ್ನು ನಾವು ಸ್ವೀಕರಿಸಬಾರದು. ನಾವು ಅವುಗಳನ್ನು ನಮ್ಮ ಕೈಯಾರೆ ಸ್ವೀಕರಿಸದೆ ಹೋದಾಗ ಅವು ಅವರಲ್ಲಿಯೇ ಉಳಿದು ಹೋಗುತ್ತವೆ ಎಂದು ಹೇಳಿದರು.
ಮನಸ್ಸಿಗೆ ಕೊಂಚ ನಿರಾಳವಾದರೂ ಶಿಷ್ಯನ ಮುಖದಲ್ಲಿ ತುಸು ಗಲಿಬಿಲಿ ಇದ್ದೇ ಇತ್ತು . ಇದನ್ನು ಕೇಳಿಯೇ ಬಿಡೋಣ ಎಂಬ ಭಾವದಲ್ಲಿ ಆತ ಇದಂತೂ ಅರ್ಥವಾಯಿತು ಗುರುಗಳೇ, ಆದರೆ ಬೇರೆಯವರು ನಮ್ಮ ಕುರಿತು ಕೆಟ್ಟದಾಗಿ ಮಾತನಾಡಿದಾಗಲೂ ನಾವು ಪ್ರತಿಕ್ರಿಯೆ ತೋರಬಾರದು ಎಂದರೆ ಹೇಗೆ? ಅದು ನಮ್ಮ ಬಲಹೀನತೆ ಎಂದಾಗುವುದಿಲ್ಲವೇ? ಎಂದು ಕೇಳಿದ.
ಖಂಡಿತವಾಗಿಯೂ ಅಲ್ಲ. ಬೇರೆಯವರ ಮಾತುಗಳಿಗೆ ನಮ್ಮೊಳಗಿನ ಭಾವಕ್ಕೆ ನೋವಾಗಿ ತಿರುಗಿಸಿ ಉತ್ತರ ಕೊಡುವ ಪ್ರಕ್ರಿಯೆಯಲ್ಲಿ ಯಾವುದೇ ಪುರುಷಾರ್ಥ ಇರುವುದಿಲ್ಲ, ಅಲ್ಲಿ ಇರುವುದು ಕೇವಲ ಶುದ್ಧ ಪ್ರತೀ ಕಾರ ಭಾವ. ನಮ್ಮ ನಿಜವಾದ ಸಾಮರ್ಥ್ಯ ಇರುವುದು ಬೇರೆಯವರ ಕೆಟ್ಟ ಮಾತುಗಳಿಗೆ, ಅವರು ಕೊಡುವ ನೋವುಗಳಿಗೆ ನಾವು ಪ್ರತಿಕ್ರಿಯೆ ನೀಡದೆ ಇರುವುದರಲ್ಲಿ. ನಮ್ಮ ನಿಜವಾದ ಅಂತಃಶಕ್ತಿ ಬಳಕೆಯಾಗುವುದು ಇಲ್ಲಿಯೇ. ಅದುವೇ ನಾವು ಗಳಿಸಿಕೊಳ್ಳಬೇಕಾದ ಬದುಕಿನ ಬಹುದೊಡ್ಡ ಪರಿಣತಿ.
ಶಿಷ್ಯ ಆ ಬಂಡೆಗಲ್ಲಿನತ್ತ ದೃಷ್ಟಿಹರಿಸಿದ. ಆ ಬಂಡೆಗಲ್ಲು ಮೆದುವಾಗಿರದೆ ದೃಢವಾಗಿತ್ತು ಅಚಲವಾಗಿತ್ತು ಬಲಿಷ್ಠವಾಗಿತ್ತು ಅಂತೆಯೇ ತಾನು ಕೂಡ ಆ ಬಂಡೆಗಲ್ಲಿನಂತೆ ಬೇರೆಯವರ ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯೆ ತೋರಿಸದೆ ಅಚಲವಾಗಿರಬೇಕು ಎಂದು ಆತ ನಿರ್ಧರಿಸಿದ.
ಸ್ನೇಹಿತರೇ, ಬದುಕಿನಲ್ಲಿ ಬಹಳಷ್ಟು ಬಾರಿ ನಮಗೂ ಕೂಡ ಈ ರೀತಿ ಅವಮಾನ ಆಗಿರುತ್ತದೆ ಯಾರೋ ನಮ್ಮನ್ನು ಕೆಟ್ಟದಾಗಿ ಬೈದಿರುತ್ತಾರಲ್ಲವೇ? ನಮ್ಮ ಕುರಿತು ಇತರರ ಬಳಿ ಸುಳ್ಳು ಕೂಡ ಹೇಳಿರುತ್ತಾರೆ ಅಲ್ಲವೇ? ಅವರು ನಮಗೆ ಮಾಡಿದ ಅವಮಾನದಿಂದ ನಮಗೆ ನೋವಾಗಿರುತ್ತದೆ, ಮನಸ್ಸು ಜ್ವಾಲಾಮುಖಿಯಂತೆ ಸಿಡಿಯಲು ಸಿದ್ಧವಾಗಿರುತ್ತದೆ. ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತದೆ ಅಲ್ಲವೇ?ಅಂತಹವರಿಗೆ ಉತ್ತರ ಕೊಡಬೇಕು ಎಂಬ ಹಪಹಪಿ ನಮ್ಮನ್ನು ನಿದ್ರೆಗೆಡಿಸುತ್ತದೆ ಅಲ್ಲವೇ?
ಈ ಕಥೆ ನಮಗೆ ಬದುಕಿನ ಮತ್ತೊಂದು ದೃಷ್ಟಿಕೋನದ ಅರಿವನ್ನು ಮೂಡಿಸುತ್ತದೆ. ಬೇರೆಯವರು ನಮ್ಮತ್ತ ಎಸೆಯುವ ಮಾತಿನ ಕೂರಂಬುಗಳಿಗೆ,ಅವಮಾನದ ಕಲ್ಲುಗಳಿಗೆ ಉತ್ತರ ಕೊಡುತ್ತಾ ಕೂತರೆ ನಾವು ಸಾಗಬೇಕಾದ ದಾರಿಯಲ್ಲಿ ಮುಂದೆ ಸಾಗುವುದು ಅಸಾಧ್ಯ. ಗುರಿ ತಲುಪುವುದು ಕೂಡ ದೂರವಾಗುತ್ತದೆ
ನಾವು ಕೂಡ ಅವರು ಎಸೆಯುವ ಪ್ರತಿ ಕಲ್ಲನ್ನು ಪಕ್ಕಕ್ಕೆ ಸರಿಸಿ ಮುನ್ನಡೆಯಬೇಕು…. ನಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಎಲ್ಲ ಏಟಿಗೂ ಇದಿರೇಟು ಉತ್ತರವಲ್ಲ…. ಏನಂತೀರಾ ?
ವೀಣಾ ಹೇಮಂತಗೌಡ ಪಾಟೀಲ್




ನಿಜ ಮೇಡಂ ಏಟಿಗೆ ಎಂದು ರೇಟು ಉತ್ತರವಿಲ್ಲ!