ಕಾವ್ಯಯಾನ

ಬೋಧಿಸತ್ವನೊಂದಿಗೆ ಯಶೋಧರೆ —
(ಯಶೋಧರೆಯ ಸ್ವಗತ )

Buddha Statue Near Trees

ಲಕ್ಷ್ಮೀ ಪಾಟೀಲ್

ಅರಮನೆಯ ನೆನಪಾಗಿ ಬಂದೆಯಾ ಸಿದ್ಧಾರ್ಥ
ಹೇಳದೆ ಹೋದರೆ ಸಿಗುವುದೇ ಜ್ಞಾನೋದಯ?
ನಮಿಸಲಾರೆ ಮಂಡಿಯೂರಿ ನಿನಗೆ
ಲೋಕದ ಗುರುವೆಂದು ನನಗೀಗಲೂ ನೀ ಸಿದ್ಧಾರ್ಥ

ಗಾಢ ನಿದ್ದೆಯ ತಡವದೆ ಆ ರಾತ್ರಿ ನೀ ಹೇಳದೆ ಹೋದೆ
ನನ್ನ ಮುಂದಿನ ಕತ್ತಲೆ ಕಳೆದೆ ನಿದ್ರೆ ಜಾರಿಸಿದೆ
ಇಲ್ಲೊಂದು ಜ್ಞಾನೋದಯಕ್ಕೆ !
ಮನೆ -ಮನದಾಚೆಗೊಂದು ಮಿಣುಕು ದೀಪ ಉಳಿಸಿದೆ
ಬುದ್ದ ನಿನಗೊಂದು ಕೃತಜ್ಞತೆ

ನಾನು ಹೆಂಡತಿಯಾಗಿ ಉಳಿದಿಲ್ಲ
ರಾಹುಲ ಮಗನಾಗಿ ಉಳಿದಿಲ್ಲ
ನಿನ್ನ ಭಿಕ್ಕು ಸಂಘದಲ್ಲಿ ನಾವು ಬಿಕ್ಕುಗಳಲ್ಲ
ಈ ಅರಮನೆಯಲ್ಲಿ ಹುಟ್ಟಿ ಬೆಳೆದ ನೀನೀಗ
ಅರಮನೆಯ ಮುಂದೆ ಬೌದ್ಧ ಭಿಕ್ಷು

ಕರ್ಮ ಚಕ್ರ ಕಳಚಿ ಧರ್ಮ ಚಕ್ರ ಹಿಡಿದೆ
ಬುದ್ದತ್ವ ಸುಲಭ ಸಿದ್ದ !
ಲೋಕದ ತನು ಮನ ಶೋಧಕ್ಕೆ ನೀ ಹೊರಟಂದೇ
ನಿತ್ಯ ನಡೆದಿದೆ ಇಲ್ಲಿ ನನ್ನ ತನು ಮನದ ಶೋಧ
ಶೋದೋನ್ಮಾದದ ರಂಗ ಶಾಲೆಯಲ್ಲಿ
ಬುದ್ದತ್ವದ ಪಾಠ ಕೇಳಿಸಬೇಡ

ಮಲಗಿ ಬಿಟ್ಟಿದೆ ಅಮೋಘ ಸುಖವಿಲ್ಲಿ
ಅಜ್ಞಾನ -ಮುಗ್ಧತೆ ಗಳ ತಲೆದಿಂಬಿನಲಿ
ಧೈನ್ಯತೆ ಹತಾಶೆ ವಿಕ್ಷಿಪ್ತತೆಗಳ ಚಂದಕ್ಕೆ
ಹೇರದಿರು ಮತ್ತೊಂದು ಭಾರ
ಕರ್ಮಚಕ್ರದ ಮೇಲೊಂದು ಧರ್ಮಚಕ್ರ
ಮುಕ್ತ ಸಂವಾದಗಳು ಬುದ್ಧತ್ವ ಒಪ್ಪುವುದಿಲ್ಲ ಸಿದ್ದಾರ್ಥ

ಕೇಳಿದೆ ಸುಜಾತಾ ಕೊಟ್ಟ ಪಾಯಸ ತಿಂದ ಮೇಲೆಯೇ
ಅರಳಿಯ ನೆರಳಲ್ಲಿ
ನಿಮಗೆ ಜ್ಞಾನೋದಯವಾಯಿತಂತೆ !
ಉತ್ತರವಿದೆಯಾ ಸಿದ್ದಾರ್ಥ?
ಯಾಕೆ ಹೆಣ್ಮಕ್ಕಳು ಬದುಕಿಸುವ ಸತ್ವದಿಂದ
ನಿಮ್ಮಂತವರು ಬೋಧಿಸತ್ವ ರಾಗುತ್ತಾರೆ?
ಅದೇ ಜನನಿಬಿಡ ಲೋಕದ ಮುಂದೆ
ನಿಮ್ಮ ಬುದ್ದತ್ವ ಭಿಕ್ಷೆ ಬೇಡುತ್ತದೆ?
ಪ್ರಾರ್ಥಿಸುವೆನಿಷ್ಟೆ ಸಿದ್ದಾರ್ಥ
ಬೀಳದಿರಲಿ ನನ್ನ ಮಗ ನಿನ್ನ ಜೋಳಿಗೆಯಲಿ
ಕಸಿಯದಿರು ಕರ್ಮಚಕ್ರ : ಈ ಕೊನೆ ಗಳಿಗೆಯ ಜೀವಸತ್ವ

******

Leave a Reply

Back To Top