ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ತರ್ಕವನ್ನು ತನ್ನ ತರ್ಕದಿಂದಲೇ
ವಿರೋಧಿಸಿದ ಹೆಣ್ಣು ಮಗಳು
ಮೇರಿ ಸೋಫಿ”

ವಿಭಿನ್ನ ಶೈಲಿಯಲ್ಲಿ ಇರುವ ಲೇಖನದ ಶಿರೋಬರಹವನ್ನು ನೋಡಿ ಏನಿರಬಹುದು ಎಂದು ಆಶ್ಚರ್ಯ ಪಡುತ್ತೀರಾ! ಹೌದು ಜರ್ಮನ್ ನ ಮೇರಿ ಸೊಫಿ ಎಂಬ ಹೆಣ್ಣು ಮಗಳ ಕಥಾನಕವಿದು.
1776 ರ ಏಪ್ರಿಲ್ ಒಂದರಂದು ಪ್ಯಾರಿಸ್ ನಲ್ಲಿ ಜನಿಸಿದ ಆಕೆ ಓರ್ವ ಸಾಮಾನ್ಯ ಹೆಣ್ಣು ಮಗಳು ಆದರೆ ಮುಂದೆ ಓರ್ವ ಅಸಾಮಾನ್ಯ ಗಣಿತಜ್ಞಳಾಗಿ ಅಂದಿನ ಕಾಲದ ಹೆಣ್ಣು ಮಕ್ಕಳು ಬುದ್ಧಿವಂತರಲ್ಲ ಎಂಬ ಸಾಮಾಜಿಕ ಗ್ರಹಿಕೆಯ ಸಮಾಜದಲ್ಲಿ ಬೆಳಕಿನ ಚುಕ್ಕೆಯಾಗಿ ಅವತರಿಸಿದವರು.
ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪಾಲಕರಿಂದ, ನೆರೆಹೊರೆಯವರಿಂದ ಗಣಿತ ಮತ್ತು ವಿಜ್ಞಾನ ದಂತಹ ಕ್ಲಿಷ್ಟ ವಿಷಯಗಳು ಹೆಣ್ಣು ಮಕ್ಕಳು ಕಲಿಯಬಹುದಾದ ವಿಷಯಗಳಲ್ಲ, ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದ್ದಲ್ಲ… ಅದೇನಿದ್ದರೂ ಗಂಡಸರ ಸ್ವತ್ತು ಎಂಬ ಮಾತುಗಳನ್ನು ಕೇಳಿಯೇ ಬೆಳೆದಳು. ಹೆಣ್ಣು ಮಕ್ಕಳ ಕೆಲಸವೇನಿದ್ದರೂ ಮನೆಯಲ್ಲಿ ಅಡುಗೆ ಮಾಡುವ, ಮನೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವದಕ್ಕೆ ಮಾತ್ರ ಸೀಮಿತ. ಮನೆಯಲ್ಲಿ ಕೂಡ ಕುಟುಂಬವನ್ನು ನಿರ್ವಹಿಸುವ ಗಂಡ ಮತ್ತು ಮಕ್ಕಳ ಚಾಕರಿ ಮಾಡುವುದಕ್ಕೆ ಮಾತ್ರ ಹೆಣ್ಣು ಮಕ್ಕಳು ಲಾಯಕ್ಕು ಎಂಬ ಸರ್ವೇ ಸಾಮಾನ್ಯವಾದ ಗ್ರಹಿಕೆಗೆ ಸಡ್ಡು ಹೊಡೆದು ನಿಂತವಳು. ಹೊಲಿಗೆ ಕರಕುಶಲ ವಸ್ತುಗಳನ್ನು ತಯಾರಿಸುವ ಮನೆಯನ್ನು ಅಂದವಾಗಿಟ್ಟುಕೊಳ್ಳುವ ಹೆಣಿಗೆ ಮಾಡುವುದಕ್ಕೆ ಮಾತ್ರ ಹೆಣ್ಣು ಮಕ್ಕಳು ಸೀಮಿತರು ಎಂಬ ಸೀಮಿತ ತಿಳುವಳಿಕೆಯ ಜನರ ನಡುವೆ ಸೀಮಾತೀತಳಾಗಿ ಬೆಳೆದವಳು.
ಶಾಲೆಯ ಪಠ್ಯ ಪುಸ್ತಕಗಳಲ್ಲಿ ಕೊಟ್ಟ ವಿಜ್ಞಾನದ ವಿಷಯಗಳನ್ನು ಆಕೆ ಪ್ರಯೋಗಕ್ಕೆ ಒಳಪಡಿಸಿದಾಗ ಖುದ್ದು ತನ್ನ ಮನೆಯವರಿಂದ ಹಾಗೂ ಶಾಲೆಯ ಸಹಪಾಠಿಗಳಿಂದ ತಮಾಷೆಗೆ ಈಡಾದವಳು. ಆಕೆಯ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ನ್ಯೂಟನ್ ಹೇಳುವ ತತ್ವಗಳು ಎಂದು ಬೋಧಿಸಲಾಗುವ ತರಗತಿಯಲ್ಲಿ ಆಕಾಶಕಾಯಗಳು ಅತಿ ಗಣ್ಯ ವ್ಯಕ್ತಿಗಳ ಮತ್ತು ರಾಜಕುಮಾರಿಯರ ನಡುವಿನ ಸರಸ ಸಲ್ಲಾಪಗಳು ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಸೋಫಿಗೆ ಉಪಮೆಗಳು ಬೇಕಾಗಿರಲಿಲ್ಲ ಆಕೆ ಕಟು ವಾಸ್ತವವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಳು.

ಅಂತಿಮವಾಗಿ ಆಕೆ ಗಣಿತವನ್ನು, ಅದರಲ್ಲೂ ಹೆಣ್ಣು ಮಕ್ಕಳಿಗೆ ಸಲ್ಲದ ವಿಷಯ ಎಂದು ಪರಿಗಣಿತವಾದರೂ ಕೂಡ ಆಕೆ ತನ್ನ ಪ್ರಯತ್ನವನ್ನು ಕೈ ಬಿಡಲಿಲ್ಲ. ಮಾರ್ಟುಸಿಯಾ ಎಂಬ ಗಣಿತಜ್ಞ ಬರೆದ ‘ಹಿಸ್ಟರಿ ಆಫ್ ಮ್ಯಾಥಮೆಟಿಕ್ಸ್’ ಎಂಬ ಪುಸ್ತಕ ಆಕೆಗೆ ದೊರೆಯಿತು.
ಆ ಪುಸ್ತಕದಲ್ಲಿ ಆಕೆ ಆರ್ಕಿಮಿಡಿಸ್ ನ ಕುರಿತು ಓದಿದ ಲೇಖನ ಆಕೆಯ ಮನದಲ್ಲಿನ ಆಸೆಗೆ ಕಿಡಿಯನ್ನು ಹಚ್ಚಿತು. ತನ್ನ ವೈಜ್ಞಾನಿಕ ಸಂಶೋಧನಾ ಕಾರ್ಯದಲ್ಲಿ ಮುಳುಗಿದ ಆರ್ಕಿಮಿಡೀಸ್ ಯೋಧನೊಬ್ಬನ ಕೋಪಕ್ಕೆ ಬಲಿಯಾಗುವ ಮತ್ತು ಆ ಕಾರಣಕ್ಕಾಗಿಯೇ ಕೊಲೆಯಾಗುವ ಕಥೆ ಆಕೆಯಲ್ಲಿ ಶಾಶ್ವತವಾದ ಮತ್ತು ನಿಖರವಾದ ಬದ್ಧತೆಯಿಂದ ಕಾರ್ಯನಿರ್ವಹಿಸಲು ಇಂಧನವಾಯಿತು. ಏನೇ ಅಡೆತಡೆಗಳು ಬಂದರೂ ಕೂಡ ತನ್ನ ಗಣಿತದ ಪಯಣದಲ್ಲಿ ತಾನು ಮುಂದುವರೆಯುವೆ ಎಂಬ ಆತ್ಮ ವಿಶ್ವಾಸವನ್ನು ನೀಡಿತು.
ಅಂಕಿ ಸಂಖ್ಯೆಗಳ ಆಕರ್ಷಣೆಯ ಜಾಲದಲ್ಲಿ ಮುಳುಗಿದ ಆಕೆ ಅವುಗಳ ಇತಿಮಿತಿ ಮತ್ತು ಅನಂತತೆಗಳನ್ನು ಅರಿಯುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಸಾಮಾಜಿಕ ಮತ್ತು ಕೌಟುಂಬಿಕ ತಡೆಗಟ್ಟುವಿಕೆ ಕೂಡ ಆಕೆಯ ಕಾರ್ಯಬದ್ಧತೆಯಿಂದ ಹಿಂದೆ ಸರಿಯಲು ಬಿಡಲಿಲ್ಲ. ಆಕೆಯ ಪಾಲಕರಂತೂ ಒಂದು ಹೆಜ್ಜೆ ಮುಂದೆ ಹೋಗಿ ಗಣಿತ ವಿಷಯದೆಡಗಿನ ಆಕೆಯ ಆಸಕ್ತಿಯನ್ನು ಹಿಮ್ಮೆಟ್ಟಿಸಲು ಮತ್ತು ಆಕೆ ಅಂದು ಹೇಳಲಾಗುತ್ತಿದ್ದ ಸರಳವಾದ ನಾಗರಿಕ ಜೀವನವನ್ನು ನಡೆಸಲಿ ಎಂಬ ಆಶಯದಿಂದ ಆಕೆಯ ಬೆಚ್ಚಗಿನ ಬಟ್ಟೆಗಳನ್ನು ಅಡಗಿಸಿಟ್ಟರು. ನೀರವ ರಾತ್ರಿಗಳಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸಲು ಆಕೆ ಬಳಸುತ್ತಿದ್ದ ಮೇಣದ ಬತ್ತಿಗಳನ್ನು ಆಕೆಯ ಕೈಗೆ ಸಿಗದಂತೆ ಮಾಡಿದರು. ಪ್ಯಾರಿಸ್ ನ ಕಡುಚಳಿಯಲ್ಲಿ ಆಕೆಗೆ ಬಿಸಿ ಶಾಖದ (ಹೀಟರ್) ವ್ಯವಸ್ಥೆ ದೊರೆಯದಂತೆ ಮಾಡಿದರು. ಇದಾವುದೂ ಆಕೆಯನ್ನು ವಿಚಲಿತಗೊಳಿಸಲಿಲ್ಲ. ಯಾವುದಕ್ಕೂ ಆಕೆ ಸೊಪ್ಪು ಹಾಕಲಿಲ್ಲ.
ಆಕೆ ಸತತವಾಗಿ ನ್ಯೂಟನ್ ಮತ್ತು ಯೂಲರ್ ನ ನಿಯಮಗಳ ಕುರಿತು ಮತ್ತಷ್ಟು ವಿಸ್ತೃತ ಅಧ್ಯಯನವನ್ನು ಮಾಡಲಾರಂಬಿಸಿದಳು ಕಲಿಯುಕೆಯ ಎಲ್ಲಾ ಹಾದಿಗಳು ಮುಚ್ಚಿದಾಗ ಆಕೆ ಸ್ವಯಂ ಅಧ್ಯಯನದಲ್ಲಿ ತೊಡಗಿಕೊಂಡಳು. ತನಗಾಗಿ ತನ್ನದೇ ಮತ್ತೊಂದು ಹಾದಿಯನ್ನು ನಿರ್ಮಿಸಿ ಆ ಹಾದಿಯಲ್ಲಿ ನಡೆಯಲು ನಿರ್ಧರಿಸಿದಳು.
ಫ್ರಾನ್ಸ್ ದೇಶದ ಅತಿ ದೊಡ್ಡ ವಿಜ್ಞಾನದ ಶಾಲೆ ಇಯೋಲ್ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅನಾಮಧೇಯ ಆಂಟೋನಿ ಅಗಸ್ಟ ಲೀ ಬ್ಲಾಂಕ್ ಹೆಸರಿನಲ್ಲಿ ಆಕೆ ಪ್ರವೇಶ ಪಡೆದಳು. ಶೀಘ್ರವೇ ಆಕೆ ಖ್ಯಾತ ಸಂಶೋಧಕ ಜೋಸೆಫ್ ಲೂಯಿಸ್ ಲಾಗರೇಂಜ್ ನ ಗಮನ ಸೆಳೆದಳು. ಸ್ವಯಂ ಕಲಿಕೆಯಿಂದಲೇ ತನ್ನ ಗಣಿತದ ಆಸಕ್ತಿಯನ್ನು ಪೋಷಿಸಿದ ಆಕೆಗೆ ಪ್ರೋತ್ಸಾಹ ನೀಡಿದ ಜೋಸೆಫ್ ಮುಂದೆ ಆಕೆಯ ಗುರುವಾಗಿ ಸಂಖ್ಯಾಶಾಸ್ತ್ರದ ಕಲಿಕೆಯಲ್ಲಿ ಆಕೆಗೆ ಎಲ್ಲ ರೀತಿಯ ಸಹಾಯ ಹಸ್ತವನ್ನು ಚಾಚಿದ.
ಸಂಖ್ಯಾ ಶಾಸ್ತ್ರದಲ್ಲಿ ಮುಳುಗೆದ್ದ ಸೋಫಿ, ಫಾರ್ಮ್ಯಾಟ್ ನ ಕೊನೆಯ ಪ್ರಮೇಯವನ್ನು ಬಿಡಿಸುವ ಮೂಲಕ ಗಣಿತಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದಳು. ಅವಿಭಾಜ್ಯ ಸಂಖ್ಯೆಗಳ ಗುಂಪೊಂದನ್ನು ಆಕೆ ಗುರುತಿಸಿದಳಲ್ಲದೇ ಎಲ್ಲ ರೀತಿಯ ಲೆಕ್ಕಾಚಾರಗಳ ಮೂಲಕ ಅವುಗಳನ್ನು ಸಾಬೀತುಪಡಿಸಿದಳು. ಇಂದಿಗೂ ಕೂಡ ಜರ್ಮನ್ ಪ್ರೈಮ್ಸ್ ಎಂಬ ಹೆಸರಿನಲ್ಲಿ ಚಲಾವಣೆಯಲ್ಲಿರುವ ಈ ಅವಿಭಾಜ್ಯ ಸಂಖ್ಯೆಗಳು ಗಣಿತ ಲೋಕವನ್ನು ಆಳುತ್ತಿವೆ ಎಂದರೆ ತಪ್ಪಿಲ್ಲ.
ತನ್ನ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಕೆ ಅಂದಿನ ಕಾಲದ ಶ್ರೇಷ್ಠ ಗಣಿತಜ್ಞರಾದ ಕಾರ್ಲ್ ಫ್ರೆಡರಿಕ್ ಗಾಸ್ಜ್ ಅವರಿಗೆ ವಿನಂತಿ ಪೂರ್ವಕ ಪತ್ರ ಬರೆದಳು…. ಅದೂ ತನ್ನ ಬದಲಾದ ಅನಾಮಧೇಯ ಹೆಸರಿನಲ್ಲಿನನ್ನ ಜಾಣ್ಮೆಯ ಆಳವು ಕೂಡ ಆಕೆಯ ಕುತೂಹಲದ ಹಸಿವನ್ನು ತಣಿಸಲಾರದು ಎಂದು ಫ್ರೆಡರಿಕ್ ಮರುತ್ತರ ಬರೆದರು. ಆಕೆಯ ಪ್ರತಿಭೆಗೆ ವಿಸ್ಮಿತರಾದ ಅವರು ಖುದ್ದು ಗಣಿತವೇ ನಿನ್ನಲ್ಲಿ ಓರ್ವ ಪ್ರತಿಭಾವಂತ ಸ್ನೇಹಿತೆಯನ್ನು ಗುರುತಿಸಿದೆ ಎಂದು ನನಗೆ ಸಂತೋಷವಾಗುತ್ತದೆ ಎಂಬ ಒಕ್ಕಣೆಯನ್ನು ಕೂಡ ಪತ್ರದಲ್ಲಿ ಅವರು ಸೇರಿಸಿದರು.
ಮುಂದೆ ಆಕೆಯ ನಿಜವಾದ ಹೆಸರು ಮತ್ತು ಗಣಿತವನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ನಡೆಸಿದ ಸಂಘರ್ಷವನ್ನು ಅರಿತ ಅವರು ಆಕೆಯ ಕುರಿತು ಬರೆದ ಮಾತುಗಳು ಕಾಲಾತೀತವಾಗಿ ಇಂದಿಗೂ ನಮ್ಮ ಕಿವಿಯಲ್ಲಿ ಗುನುಗುನಿಸುತ್ತವೆ.
ತನ್ನ ವಿರುದ್ಧ ನಡೆದ ನಿರಂತರವಾದ ಅಡೆತಡೆಗಳನ್ನು ಸವಾಲುಗಳನ್ನು ಎದುರಿಸುತ್ತಲೇ ಆಳವಾದ ವೈಜ್ಞಾನಿಕ ಸತ್ಯಗಳನ್ನು ಅರಿಯುವ ಪ್ರಯತ್ನವನ್ನು ಯಾರಾದರೂ ಮಾಡುತ್ತಾರೆ ಎಂದರೆ ಅವರಷ್ಟು ಧೈರ್ಯಶಾಲಿಗಳು ಇನ್ನೊಬ್ಬರಿಲ್ಲ ಎಂದೇ ಅರ್ಥ. ಅಸಾಧಾರಣ ಪ್ರತಿಭೆ ಮತ್ತು ಬುದ್ಧಿಮತ್ತೆಯನ್ನು ಹೊಂದಿದ ಸೋಫಿ ಗಣಿತ ಲೋಕದ ಕುರಿತಾದ ಪ್ರಾಪಂಚಿಕ ಮೌಢ್ಯವನ್ನು ಮೀರಿ ತನ್ನ ಧ್ಯೇಯ, ನಿರಂತರ ಪರಿಶ್ರಮ ಮತ್ತು ಅಪರಿಮಿತ ಶ್ರದ್ಧೆಯ ಮೂಲಕ ಸಂಖ್ಯಾಶಾಸ್ತ್ರಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದ್ದಾಳೆ ಎಂದು ಆಕೆಯನ್ನು ಫ್ರೆಡರಿಕ್ ಹೊಗಳಿದರು.
ಇಂದಿಗೂ ಸಂಖ್ಯಾಶಾಸ್ತ್ರಕ್ಕೆ ಆಕೆ ನೀಡಿದ ಕೊಡುಗೆಯನ್ನು ಪಠ್ಯಕ್ರಮದಲ್ಲಿ ಸೇರಿಸಿಲ್ಲವಾದರೂ ಕೂಡ ಗಣಿತದ ಪ್ರಮೇಯಗಳಲ್ಲಿ ಪಠ್ಯಪುಸ್ತಕಗಳಲ್ಲಿ ಮತ್ತು ಗಣಿತದಲ್ಲಿ ಆಸಕ್ತಿಯನ್ನು ಹೊಂದಿರುವ ಎಲ್ಲಾ ಗಣಿತಜ್ಞರ ಹೃದಯಗಳಲ್ಲಿ ಆಕೆ ಮನೆ ಮಾಡಿದ್ದಾಳೆ. ಅಂಕಿ ಸಂಖ್ಯೆಗಳಂತೆ ಆಕೆಯೂ ಕೂಡ ಅನಂತಳು ಅದ್ವಿತೀಯಳು ಮತ್ತು ಯಾವುದೇ ರೀತಿಯ ಸಂಖ್ಯಾ ಲಿಂಗತ್ವವನ್ನು ಒಪ್ಪಿಕೊಳ್ಳದ ಸೀಮಾತೀತಳು.
ನಿಜ ಅಲ್ಲವೇ ಸ್ನೇಹಿತರೆ! ಸಂಖ್ಯೆಗಳಿಗೂ ಕೂಡ ಲಿಂಗತ್ವವಿಲ್ಲ, ಜಾತಿ ಮತಗಳಿಲ್ಲ, ಮಿತಿಗಳಿಲ್ಲ ಆದರೆ ಅವುಗಳಿಲ್ಲದೆ ಈ ಬ್ರಹ್ಮಾಂಡದ ಅಸ್ತಿತ್ವವೇ ಇಲ್ಲ….. ಅಂತೆಯೇ ಸೋಫಿ ಕೂಡ.
ಅಂತಹ ಮಹಾನ್ ಗಣಿತಜ್ಞಳಿಗೆ ಆಕೆಯ ಅಪಾರ ಬುದ್ಧಿಮತ್ತೆಗೆ ಮತ್ತು ಆಕೆಯ ಅದ್ವಿತೀಯ ಅಸಾಧಾರಣ ಧೈರ್ಯಕ್ಕೆ ನಮ್ಮದೊಂದು ನಮನ.
ವೀಣಾ ಹೇಮಂತ್ ಗೌಡ ಪಾಟೀಲ್




