ಕಾವ್ಯ ಸಂಗಾತಿ
ಡಾ.ಮೀನಾಕ್ಷಿ ಪಾಟೀಲ್
“ಮಳೆ ಹುಡುಗಿ”

ಓಡುವ ಮೋಡಗಳೇ
ಓಡದಿರಿ ನಿಲ್ಲಿ ನಿಂತು
ಒಂದಿಷ್ಟು ಹನಿಸಿ ಹೋಗಿ
ಈ ಮಿಂಚಿನ ಹುಡುಗಿಗಾಗಿ
ನಿನ್ನ ಹನಿಗೆ
ಮುತ್ತಾಗುವ ಆಸೆ
ಕಾಮನಬಿಲ್ಲಿನ ಕಣ್ಣಿನ
ಈ ಹುಡುಗಿಗೆ
ಚದುರಿದ ಮೋಡಗಳೇ
ಮತ್ತೆ ಒಂದಾಗಿ
ನಿಮ್ಮ ಮಿಲನ ಸ್ಪೂರ್ತಿ
ಆಗಬಹುದು ಈ ಚಂದದ ಹುಡುಗಿಗೆ
ಹನಿಗೆ ಹಸಿಯಾಗುವಾಸೆ
ಹೃದಯದಾಳದಲ್ಲಿ
ಹವಳವಾಗುವಾಸೆ ಚೆಂದುಟಿಯ ಚಂದುಳ್ಳಿ
ಈ ಹುಡುಗಿಗೆ
ಜಿಟಿ ಜಿಟಿ ಮಳೆ
ಪುಳಕಗೊಂಡಿದೆ ಇಳೆ,
ಉನ್ಮತ್ತವಾಗಿದೆ ಮನಸ್ಸು
ಈ ಮಳೆ ಹುಡುಗಿಗೆ
ಹನಿ ಹನಿಯಾಗಿ
ಹನಿಸೋ ಸೊಲ್ಲಿಗೆ
ಜೇನಿಟ್ಟಿದೆ ಎದೆಯ ಗೂಡಲ್ಲಿ
ತೊಟ್ಟಿಕ್ಕುವಾಸೆ
ಈ ಹುಡುಗಿಗೆ
ಮುಂಗಾರಿನ ಆರ್ಭಟ
ಕೇಳಿಸಲೇ ಇಲ್ಲ
ಯಾಕೆಂದರೆ ನಿನ್ನ ಪ್ರೇಮದ
ಪಿಸು ದನಿ ಅನುರಣಿಸಿದೆ
ಈ ಮಳೆ ಹುಡುಗಿಯ ಎದೆಯಲ್ಲಿ.
ಡಾ. ಮೀನಾಕ್ಷಿ ಪಾಟೀಲ




