ಶೋಭಾ ನಾಗಭೂಷಣ ಅವರ ಕವಿತೆ “ಅಹಂನ ಅಟ್ಟಹಾಸ”



ಎದೆಯಲ್ಲಿ ಮಳೆಬಿಲ್ಲ ಛಾಯೆ
ಬಣ್ಣಗಳೆಲ್ಲ ಮಾಸಲು
ಚಿತ್ತಾರದೊಳು ವರ್ಣಗಳ ರಂಪಾಟ
ಮೇಲುಗೈ ಯಾರದ್ದೂ ಅಲ್ಲ

ನಾನೆಂಬ ಹಮ್ಮಿನಲ್ಲಿ ಬೀಗಿ
ಉತ್ತಮರ ಬದಿಗೆ ತಳ್ಳಲು ಸಂಚು
ಗೆಲುವು ಖಚಿತವೇನಲ್ಲ, ಆದರೂ
ಪ್ರಯತ್ನವೆಂದಿಗೂ ನಿಲ್ಲದು

ಎಂದೋ ಮುಗಿದು ಹೋದ ಹಾಡುಗಳ
ಪಲ್ಲವಿಯ ಹುಡುಕುವ ಹುಚ್ಚಾಟ
ಚರಣಗಳು ಗೋಚರಿಸಿದರು
ಎಲ್ಲವೂ ಗೋಜಲು ಗೋಳಾಟ

ಎಲ್ಲವ ಬಲ್ಲೆನೆಂಬ ಅಹಂ ಎಂದೂ
ಕೊಂಡೊಯ್ಯದು ಗಮ್ಯದಡೆಗೆ
ದೇವನೊಮ್ಮೆ ಕೊಟ್ಟು ನೋಡುವ ಸಿರಿಯ
ಕಸಿದುಕೊಳ್ಳಲು ಚಿಟಕಿ ಸಮಯ

ಯಾರನ್ನೋ ಓಲೈಸಲು ಮತ್ಯಾರದ್ದೋ ಬಲಿ 
ನ್ಯಾಯಾನ್ಯಾಯಗಳ  ತೂಕ ಸಮವಿಲ್ಲ
ಎಲ್ಲವೂ ಅಸಂಬದ್ಧ ಅಸಮರ್ಪಕ
ಮೆರುವುದು ದುಷ್ಟತನದ ಅಟ್ಟಹಾಸ


Leave a Reply