ಧಾರಾವಾಹಿ ಸಂಗಾತಿ=98
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಾಪಾಡಿದ ಶ್ರೀ ಕೃಷ್ಣ

ದೂರದಲ್ಲಿ ಕಂಡ ಟಾರ್ಚ್ ಬೆಳಕು ಹತ್ತಿರ ಬರುತ್ತಿದ್ದಂತೆಯೇ ಸುಮತಿಗೆ ಸ್ವಲ್ಪ ಧೈರ್ಯ ಬಂತು. ಟಾರ್ಚ್ ಹಿಡಿದಾತ ಆ ಇಬ್ಬರು ಯುವಕರ ಮೇಲೆ ಬೆಳಕನ್ನು ಹರಿಸಿದ…. ಯಾಕ್ರೋ ಇಲ್ಲಿ ನಿಂತಿದ್ದೀರಿ? ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿದ. ಆತ ಹಾಗೆ ಕೇಳಿದ್ದರಿಂದ ತಬ್ಬಿಬ್ಬಾಗಿ ಅವರಿಬ್ಬರೂ ಉತ್ತರ ಕೊಡದೆ ಪರಸ್ಪರ ಪಿಸುಗುಟ್ಟುತ್ತಾ ಅಲ್ಲಿಂದ ಹೊರಟು ಹೋದರು. ಟಾರ್ಚ್ ಹಿಡಿದಾತ ಹಿಂದೆ ತಿರುಗಿ ಮತ್ತೊಮ್ಮೆ ಅವರನ್ನು ನೋಡಿ ಮುಂದೆ ಹೆಜ್ಜೆ ಹಾಕಿದ. ಅನತಿ ದೂರದಲ್ಲಿ ನೋಡಿದಾಗ ಸುಮತಿ ಟೀಚರ್ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅಲ್ಲಿಯೇ ರಸ್ತೆ ಪಕ್ಕದಲ್ಲಿ ನಿಂತಿರುವುದು ಕಾಣಿಸಿತು…. ಏನು ಟೀಚರೇ, ಈ ಕತ್ತಲಲ್ಲಿ ಇಲ್ಲೇಕೆ ನಿಂತಿರುವಿರಿ? ಎಂದು ಪ್ರಶ್ನೆ ಮಾಡಿದ. ಅದಕ್ಕೆ ಉತ್ತರವಾಗಿ ಏನು ಹೇಳುವುದು ಎಂದು ತೋಚದೆ…. ಏನಿಲ್ಲಪ್ಪಾ…ಸ್ವಲ್ಪ ಸುಸ್ತಾಯ್ತು… ಹಾಗಾಗಿ ಸುಧಾರಿಸಿಕೊಳ್ಳಲು ಇಲ್ಲಿ ನಿಂತಿದ್ದೇನೆ”… ಎಂದು ಹೇಳಿದಳು. ಆದರೆ ಸುಮತಿ ಕೊಟ್ಟ ಉತ್ತರ ಆತನಿಗೆ ಸಮರ್ಪಕವೆನಿಸಲಿಲ್ಲ….” ಟೀಚರ್ ಏನಾದರೂ ತೊಂದರೆ ಆಯ್ತೆ ನಿಮಗೆ? …. ಅದೇನಿದ್ದರೂ ನನಗೆ ತಿಳಿಸಿ….. ನಾನು ನಿಮಗೆ ಸಹಾಯ ಮಾಡುತ್ತೇನೆ”… ಎಂದನು. ಸುಮತಿ ಬಾಯಿ ಬಿಟ್ಟು ಹೇಳದಿದ್ದರೂ ಅಲ್ಲಿನ ಸಂದರ್ಭ ಕಂಡಾಗ ಆತನಿಗೆ ಪರಿಸ್ಥಿತಿ ಏಕೋ ಸರಿ ಇಲ್ಲ ಎನ್ನುವುದು ಅರ್ಥವಾಗಿತ್ತು. ಆ ಇಬ್ಬರು ಯುವಕರು ಮಾತನಾಡಿದ ಬಗ್ಗೆ ಈತನೊಂದಿಗೆ ಹೇಳಿಕೊಳ್ಳಲು ಸುಮತಿಗೆ ಭಯವಾಯಿತು. ಎಲ್ಲಿ ಈತ ಅವರನ್ನು ಪ್ರಶ್ನಿಸಿ ಇನ್ನೂ ತೊಂದರೆಗಳನ್ನು ಹೆಚ್ಚಿಸಿಬಿಟ್ಟರೆ? ಏಕೆಂದರೆ ಟಾರ್ಚ್ ಹಿಡಿದು ಬಂದಾತ ಕೂಡ ತಮಗೆ ಪರಿಚಿತನಾದವನಾಗಿದ್ದ. ಆದರೆ ಆತ ಬಹಳ ಸಭ್ಯಸ್ತ ಹಾಗೂ ಸುಮತಿಯನ್ನು ಕಂಡರೆ ಬಹಳ ಗೌರವವೂ ಅವನಿಗೆ ಇತ್ತು.
ಆತ ಹೆಣ್ಣು ಮಕ್ಕಳ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದ. ಹೆಣ್ಣು ಮಕ್ಕಳು ಕೂಡ ಸ್ವಲ್ಪ ಆತಂಕದಲ್ಲಿ ಇರುವಂತೆ ಕಂಡಿತು….”ಏನಾಯ್ತು ಮಕ್ಕಳೇ… ನೀವಾದರೂ ಹೇಳಿ”…. ಎಂದು ಮಕ್ಕಳನ್ನು ಪ್ರಶ್ನಿಸಿದಾಗ ಎರಡನೇ ಮಗಳು ಹೇಳಲು ಬಾಯಿ ತೆರೆದಳು. ಅವಳು ಸ್ವಲ್ಪ ನೇರ ಗುಣದವಳು ಏನಿದ್ದರೂ ಧೈರ್ಯವಾಗಿ ನೇರವಾಗಿ ಮಾತನಾಡುವವಗಳು. ಇನ್ನೇನು ಮಗಳು ಹೇಳಿಬಿಡುತ್ತಾಳೆ ಎನ್ನುವುದನ್ನು ಅರಿತ ಸುಮತಿ ಹೇಳಬೇಡ ಎನ್ನುವಂತೆ ಅವಳ ಕೈಯನ್ನು ಮೆದುವಾಗಿ ಒತ್ತಿದಳು. ಅಮ್ಮನ ಇಂಗಿತವನ್ನು ಅರಿತ ಮಗಳು ಸುಮ್ಮನಾದಳು. ಆತ ಮೂವರನ್ನೂ ಸೂಕ್ಷ್ಮವಾಗಿ ವೀಕ್ಷಿಸಿ…. “ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತಿದೆ…. ಈ ಕತ್ತಲ ನಿರ್ಜನವಾದ ದಾರಿಯಲ್ಲಿ ನೀವು ಹೆಚ್ಚು ಹೊತ್ತು ನಿಲ್ಬೇಡಿ…. ಕುಡುಕರು ಕುಡಿದು ಓಲಾಡ್ತಾ ಬರ್ತಿರ್ತಾರೆ …. ಕೆಲವರ ದೃಷ್ಟಿ, ಬುದ್ಧಿ, ವಿಚಾರ ಯಾವುದೂ ಸರಿ ಇಲ್ಲ… ವಯಸ್ಸಿಗೆ ಬಂದ ಹೆಣ್ಣು ಮಕ್ಕಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುವವರೇ ಹೆಚ್ಚು… ಆದ್ದರಿಂದ ಜಾಗ್ರತೆಯಾಗಿ ಕತ್ತಲ ರಸ್ತೆಯಲ್ಲಿ ಓಡಾಡಿ… ಶಾಲೆ ಕಾಲೇಜಿನಿಂದ ಬರುವಾಗ ಆದಷ್ಟು ಬೇಗ ಬನ್ನಿ….
ನಾನು ನಿಮ್ಮನ್ನು ಮನೆಯವರೆಗೆ ಬಿಟ್ಟು ಬರಲೇ ಟೀಚರ್?… ಎಂದು ಆತ ಕೇಳಿದನು….”ಬೇಡಪ್ಪ ಪರವಾಗಿಲ್ಲ… ಇನ್ನೇನೂ ಹೆದರಿಕೆಯಿಲ್ಲ… ನಾವು ಮೂವರೂ ಬೇಗ ಇಲ್ಲಿಂದ ಹೋಗುತ್ತೇವೆ… ಸಮಯಕ್ಕೆ ಸರಿಯಾಗಿ ದೇವರೇ ನಿನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ”…. ಎನ್ನುತ್ತಾ ಸುಮತಿ ಆತನಿಗೆ ಧನ್ಯವಾದಗಳನ್ನು ತಿಳಿಸಿ ಇಬ್ಬರೂ ಮಕ್ಕಳ ಕೈಯನ್ನು ಭದ್ರವಾಗಿ ಹಿಡಿದುಕೊಂಡು ಮುನ್ನಡೆದಳು. ತಾಯಿ ಮಕ್ಕಳು ಅಷ್ಟು ದೂರ ಹೋಗುವವರೆಗೂ ಟಾರ್ಚ್ ಬೆಳಕನ್ನು ಹಾಯಿಸಿ, ಛೆ!!ಈ ತಾಯಿ ಮಕ್ಕಳದು ಎಂತಹ ಕಷ್ಟದ ಜೀವನ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಆತ ಅಲ್ಲಿಂದ ಮರೆಯಾದನು.
ನೀಡಿದಾದ ಉಸಿರೊಂದನ್ನು ಬಿಟ್ಟ ಸುಮತಿ ….”ಕೃಷ್ಣಾ ಆ ದುಷ್ಟ ಯುವಕರಿಂದ ನನ್ನ ಹೆಣ್ಣು ಮಕ್ಕಳನ್ನು ಇಂದು ಯಾರದೋ ರೂಪದಲ್ಲಿ ಬಂದು ಕಾಪಾಡಿದೆ… ನನ್ನ ಮಕ್ಕಳಿಗೆ ಜನ್ಮದಾತನಾದ ಅಪ್ಪ, ಒಡಹುಟ್ಟಿದ ಸಹೋದರರು ಯಾರೂ ಇಲ್ಲ…. ಗಂಡಿನ ಆಶ್ರಯವಿಲ್ಲದ ನಮ್ಮ ಜೀವನ ಬಹಳ ದುಸ್ತರವಾಗಿದೆ…. ನಮಗೆ ಎಲ್ಲವೂ ನೀನೇ… ನಿನ್ನನ್ನು ನಂಬಿದ್ದೇನೆ…. ನಮ್ಮ ಸುತ್ತಲೂ ಇರುವ ಈ ಪ್ರಪಂಚ ಅಷ್ಟು ಸುರಕ್ಷಿತವಲ್ಲ….. ನೀನೇ ಯಾವುದಾದರೂ ಒಂದು ರೂಪದಲ್ಲಿ ಹೀಗೆ ಬಂದು ಸದಾ ನನ್ನ ಮಕ್ಕಳನ್ನು ಕಾಪಾಡು”… ಎಂದು ಸ್ವಲ್ಪ ಜೋರಾಗಿ ಹೇಳುತ್ತಾ ಕೃಷ್ಣನನ್ನು ನೆನೆದಳು. ನಂತರ ಮಕ್ಕಳನ್ನು ಕುರಿತು…” ಮಕ್ಕಳೇ ನಿಮ್ಮ ರಕ್ಷಣೆಯನ್ನು ಆದಷ್ಟು ನೀವೇ ಮಾಡಿಕೊಳ್ಳಬೇಕು…. ಯಾವ ಸಮಯದಲ್ಲಿ ಯಾವ ಆಪತ್ತು ಯಾರಿಂದ ಒದಗಿ ಬರುತ್ತದೆ ಎನ್ನುವುದು ನಮಗೆ ತಿಳಿಯದ ವಿಚಾರ…. ಹಾಗಾಗಿ ಆದಷ್ಟೂ ನೀವಿಬ್ಬರೂ ಸದಾ ಜೊತೆಗಿರಿ… ಯಾರಾದರೂ ನಿಮಗೆ ತೊಂದರೆ ಕೊಡಲು ಬಂದರೆ ಜಾಗ್ರತೆಯಿಂದ ಅಂತಹ ಪರಿಸ್ಥಿತಿಯನ್ನು ಎದುರಿಸಿ…. ಇದುವರೆಗೂ ನಮ್ಮ ಹಿಂದೆ ಜನರು ಹಲವು ರೀತಿಯಲ್ಲಿ ಮಾತನಾಡಿಕೊಂಡಿದ್ದಾರೆಯೇ ಹೊರತು ನಮ್ಮ ಎದುರಿಗೆ ಬಂದು ಈ ರೀತಿ ಮಾತನಾಡಿದ್ದು ಇದು ಮೊದಲು…. ಇವರಿಂದ ಇನ್ನೂ ನಿಮಗೆ ಖಂಡಿತ ಆಪತ್ತು ಖಂಡಿತ…. ಆದಷ್ಟು ಎಚ್ಚರಿಕೆಯಿಂದ ಓಡಾಡಿ”…. ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಗದ್ದದಿತಳಾಗಿ ಮಕ್ಕಳಿಬ್ಬರಿಗೂ ಹೇಳಿದಳು….ನೋವು ಮತ್ತು ಆತಂಕದಿಂದ ಕೂಡಿದ ಅಮ್ಮನ ಮಾತುಗಳನ್ನು ಕೇಳಿ ಮಕ್ಕಳಿಬ್ಬರೂ …”ಸರಿಯಮ್ಮ ನೀನು ಹೆದರಬೇಡ… ಶಾಲೆ ಕಾಲೇಜಿಗೆ ಹೋಗದೆ ನಮಗೆ ಬೇರೆ ದಾರಿ ಇಲ್ಲ”….
….”ನಾವು ಶಿಕ್ಷಣವನ್ನು ಪಡೆಯಲೇಬೇಕು… ಹೇಗಾದರೂ ಒಂದು ಒಳ್ಳೆಯ ಕೆಲಸವನ್ನು ಪಡೆಯಬೇಕು…ಎಂತೆಂತಹಾ ಕಷ್ಟಗಳು ಬಂದರೂ ನಮ್ಮನ್ನು ಕೈಬಿಡದೆ ಅಕ್ಕರೆಯಿಂದ ಸಾಕಿ ಸಲಹುತ್ತಿರುವ ನಿನ್ನ ಋಣವನ್ನು ಸ್ವಲ್ಪವಾದರೂ ನಾವು ತೀರಿಸಬೇಕು ಎನ್ನುವುದೇ ನಮ್ಮ ಬಯಕೆ…. ಅದೇನೇ ಕಷ್ಟ ಬರಲಿ ಧೈರ್ಯದಿಂದ ಎದುರಿಸುತ್ತೇವೆ… ನಮ್ಮೊಂದಿಗೆ ನೀನು ನಂಬಿರುವ ಶ್ರೀಕೃಷ್ಣ ಇರುವಾಗ ನಿನಗೇಕೆ ಈ ಚಿಂತೆ ಅಮ್ಮ”…. ಎಂದು ಸುಮತಿಯನ್ನು ಹೆಣ್ಣು ಮಕ್ಕಳು ಸಮಾಧಾನಪಡಿಸಿದರು. ಮಕ್ಕಳ ಮಾತಿನಿಂದ ಸುಮತಿಗೆ ಸ್ವಲ್ಪ ಸಮಾಧಾನವೆನಿಸಿದರೂ ಅವಳಿಂದ ಆತಂಕ ಮರೆಯಾಗಲಿಲ್ಲ. ಕಡು ಕತ್ತಲೆಯ ರಾತ್ರಿಯಲ್ಲಿ ಅಭ್ಯಾಸ ಬಲದಿಂದ ತಿಳಿದಿದ್ದ ದಾರಿಯನ್ನು ಕ್ರಮಿಸುತ್ತಾ, ಶ್ರೀ ಕೃಷ್ಣನ ಮೇಲಿರುವ ನಂಬಿಕೆಯೊಂದಿಗೆ ಹೆಣ್ಣು ಮಕ್ಕಳ ಕೈಹಿಡಿದು ನಡೆದಳು. ಮನೆ ತಲುಪಿದ ನಂತರ ಶ್ರೀ ಕೃಷ್ಣನ ಚಿತ್ರಪಟದ ಮುಂದೆ ದೀಪವನ್ನು ಬೆಳಗಿ ಕಣ್ಣು ಮುಚ್ಚಿ ಪ್ರಾರ್ಥಿಸಿದಳು. ಅವಳ ಕಣ್ಣುಗಳಿಂದ ಕಣ್ಣೀರು ಕೋಡಿಯಾಗಿ ಹರಿಯಿತು. ಅಮ್ಮನ ಜೊತೆಗೆ ಪ್ರಾರ್ಥನೆಯಲ್ಲಿ ಮಕ್ಕಳೂ ಜೊತೆಗೂಡಿದರು. ಅಮ್ಮನ ಪಕ್ಕದಲ್ಲಿ ನಿಂತು ಸಾಂತ್ವನವೆನ್ನುವಂತೆ ಅಮ್ಮನ ಭುಜದ ಮೇಲೆ ತಲೆ ಇಟ್ಟರು. ಇಬ್ಬರೂ ಅಮ್ಮನ ಕಣ್ಣುಗಳನ್ನು ಪ್ರೀತಿಯಿಂದ ಒರೆಸಿದರು. ಸುಮತಿಯ ದುಃಖ ಕಟ್ಟೆಯೊಡೆಯಿತು. ಮಕ್ಕಳಿಬ್ಬರನ್ನು ಅಪ್ಪಿ ಜೋರಾಗಿ ಅತ್ತು ಬಿಟ್ಟಳು…. “ಎಂತಹಾ ಪ್ರಪಂಚದಲ್ಲಿ ನಿಮ್ಮನ್ನು ನಾ ದೂಡಿರುವೆ ಮಕ್ಕಳೇ…. ನನ್ನ ಮುಂದೆ ನಡೆದ ಇದೊಂದು ಘಟನೆ ನೋಡಿದೆ… ಶಾಲೆ ಕಾಲೇಜಿಗೆ ಹೋಗಿ ಬರುವಾಗ ದಾರಿಯಲ್ಲಿ ಅದೆಷ್ಟು ಇಂತಹ ತೊಂದರೆಗಳನ್ನು ನೀವು ಅನುಭವಿಸಿರಲಿಕ್ಕಿಲ್ಲ…. ಹೆಣ್ಣು ಮಕ್ಕಳು ಎಂದರೆ ಈ ಭೂಮಿಗೆ ಹೊರೆಯೇ?… ಹೆಣ್ಣೆಂದರೆ ಏಕೆ ಈ ರೀತಿಯ ಕೆಟ್ಟ ದೃಷ್ಟಿ? ಇವರೂ ನಮ್ಮ ತಾಯಿಯಂತೆ,ಅಕ್ಕ ತಂಗಿಯರಂತೆ ಎನ್ನುವ ಮನೋಭಾವ ಏಕೆ ಯಾರಿಗೂ ಇಲ್ಲ…. ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ನೀವು ಹುಟ್ಟಬಾರದಿತ್ತು ಮಕ್ಕಳೇ”… ಎನ್ನುತ್ತಾ ಕಣ್ಣೀರು ಸುರಿಸಿದಳು.




