ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಮಕ್ಕಳಿದ್ದ ಮನೆಗೆ ಬೀಸಣಿಕೆ ಯಾತಕ
 ಮಕ್ಕಳು ಮನೆ ಒಳಹೊರಗ| ಆಡಿದರ |
ಬೀಸಣಿಕೆ ಗಾಳಿ ಸುಳಿದಾವ”

ಎಂಬ ಜಾನಪದ ಹಾಡಿನ ಸಾಲು
ಮನೆಯಲ್ಲಿ ಮಕ್ಕಳು ಇರಬೇಕಾದ ಮಹತ್ವವನ್ನು ಹೇಳುತ್ತದೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಆ ಮಕ್ಕಳ ಮುಗ್ಧ ಮನಸ್ಸಿನ ನಿಷ್ಕಲ್ಮಶವಾದ ಪ್ರೀತಿಗೆ,ಮುದ್ದು ಮಾತಿಗೆ, ಕಿಲಕಿಲ ನಗುವಿಗೆ ಮನೆಯವರೆಲ್ಲ ಖುಷಿಖುಷಿಯಾಗಿ ಇರಬಹುದು.

         ಮಕ್ಕಳೇ ಮುದ್ದು. ಅಂತದ್ರಲ್ಲಿ ಮಕ್ಕಳ ಮನಸ್ಸು ಮತ್ತಷ್ಟು ಮೃದು. ಮುದ್ದು ಮಕ್ಕಳ ಮುಗ್ಧವಾದ ಮನಸ್ಸು ಪ್ರಾಂಜಲವಾಗಿರುತ್ತದೆ. ಮೋಸ, ಕಪಟ, ವಂಚನೆ ಯಾವುದನ್ನೂ ತಿಳಿಯದ ಪರಿಶುದ್ಧವಾದ ಮನ‌ಸ್ಸಿರುವ ಮಕ್ಕಳನ್ನು ದೇವರಿಗೆ ಹೋಲಿಸುತ್ತೇವೆ. ಕೆಟ್ಟದೆಂದರೆ ಏನೆಂಬುದನ್ನು ಅರಿಯದ ಮುಗ್ಧ ಮಕ್ಕಳು ದೇವರಿಗೆ ಸಮಾನ .ಅಂತೆಯೇ ಅಂತಹ ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು.

ಮಕ್ಕಳ ಮನಸ್ಸು ಮಣ್ಣಿನ ಮುದ್ದೆಯಂತೆ.ಅದಕ್ಕೆ ಸುಂದರ ರೂಪ ಕೊಡಬೇಕಾದವರು ತಂದೆ ತಾಯಿಗಳು ಹಾಗೂ ಹಿರಿಯರು.ಸಣ್ಣ ವಯಸ್ಸಿನಲ್ಲಿ ನಮ್ಮ ಮಕ್ಕಳಿಗೆ ನಾವು ಯಾವ ರೀತಿಯ ಸಂಸ್ಕಾರವನ್ನು ಕೊಡುತ್ತೇವೆಯೋ, ಮಗು ಅದೇ ಸಂಸ್ಕಾರವನ್ನು ಮೈಗೂಡಿಸಿಕೊಂಡು, ಮನಸ್ಸನ್ನು ಪಕ್ವಗೊಳಿಸುತ್ತಾ ಸಮಾಜದಲ್ಲಿ ತನ್ನ  ಅಸ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಮಗು ಹಿರಿಯರು ಆಡಿದಂತೆ ಮಾತನಾಡುತ್ತದೆ, ಹಿರಿಯರು ಮಾಡುವುದನ್ನು ತಾನು ನೋಡಿ ಕಲಿತುಕೊಳ್ಳುತ್ತದೆ, ಅನುಕರಣೆ ಮಾಡುತ್ತದೆ ಏಕೆಂದರೆ ಆ ಮಗುವಿಗೆ ಯಾವುದು ತಪ್ಪು ಯಾವುದು ಸರಿ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ತನ್ನ ಕಣ್ಣೆದುರು ಏನು ಕಾಣುತ್ತದೊ ಅದನ್ನೇ ತನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು, ಹಾಗೆ ಮಾಡುತ್ತಾ ಹಾಗೆ ಬೆಳೆಯುತ್ತದೆ. ಹಾಗಾಗಿ ಸಣ್ಣ ಮಕ್ಕಳ ಮನಸ್ಸಿಗೆ ಸುಂದರ ರೂಪವನ್ನು ಕೊಡಬೇಕಾದರೆ ಮಕ್ಕಳು ಬೆಳೆಯುವ ಪರಿಸರ,ಕಣ್ಣಿಗೆ ಕಾಣುವ ದೃಶ್ಯ,ಕಿವಿಗೆ ಕೇಳುವ ವಿಷಯ,ಮನಸ್ಸು ಅರಿಯುವ ಭಾವನೆ ಇದೆಲ್ಲವೂ ಉತ್ತಮವಾಗಿರಬೇಕು.

ಸಣ್ಣ ಮಕ್ಕಳ ಮನಸ್ಸು ಮೃದುವಾಗಿರುತ್ತದೆ ಆ ಮನಸ್ಸಿಗೆ ಜ್ಞಾನದ ದಾಹವಿರುತ್ತದೆ, ಹೊಸದನ್ನು ನೋಡುವ ಕುತೂಹಲವಿರುತ್ತದೆ. ರಹಸ್ಯವನ್ನು ಅರಿಯುವ ತವಕವಿರುತ್ತದೆ. ಅಂತಹ ಮನಸ್ಸಿಗೆ ನಾವು ಯಾವುದನ್ನು ಎರಕಹೋಯ್ಯುತ್ತೇವೆಯೋ, ಅದೇ ಆಕಾರವನ್ನು ಮಗುವಿನ ಮನಸ್ಸು ಪಡೆಯುತ್ತದೆ. ಹಾಗಾಗಿ ಸಣ್ಣ ಮಕ್ಕಳ ಪಾಲನೆ ಪೋಷಣೆಯಲ್ಲಿ, ಸ್ವಸ್ಥ ಮನಸ್ಸನ್ನು ಸೃಷ್ಟಿಸುವಲ್ಲಿ, ತಂದೆ ತಾಯಿ ಹಾಗೂ ಪೋಷಕರ ಜವಾಬ್ದಾರಿ ಬಹಳಷ್ಟು ಇರುತ್ತದೆ. “ತಂದೆಯಂತೆ ಮಗ,ಗುರುವಿನಂತೆ ಶಿಷ್ಯ” ಎಂಬಂತೆ ಮಗು ಸಣ್ಣ ವಯಸ್ಸಿನಲ್ಲಿ ತನ್ನ ತಂದೆ ತಾಯಿಗಳನ್ನು, ತಾನು ಸುತ್ತಮುತ್ತ ನೋಡುವ ವ್ಯಕ್ತಿಗಳನ್ನು, ನೋಡಿ ಕಲಿಯುತ್ತದೆ . ಮಕ್ಕಳ ಮನಸ್ಸಿಗೆ ನಾವು ಒಳ್ಳೆಯ ಸಂಸ್ಕಾರವನ್ನು ನೀಡಬೇಕಾದರೆ ಅಂತಹ ಮಾದರಿ ವ್ಯಕ್ತಿತ್ವವನ್ನು ಮೊದಲು ನಾವು ರೂಪಿಸಿಕೊಳ್ಳಬೇಕು .
ಮಕ್ಕಳ ಮನಸ್ಸು  ಗುಲಾಬಿ ಹೂವಿನ ಪಕಳೆಯಂತೆ ಮೃದು ಮಧುರವಾದದ್ದು. ಅದಕ್ಕೆ ಒಂದು ಸಣ್ಣ ನೋವಾದರೂ ಅದು ಬಹಳ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳ ಮನಸ್ಸನ್ನು ಅರಿತು, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ಹಿರಿಯರಾದ ನಮ್ಮ ಕರ್ತವ್ಯವಾಗಿದೆ.

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ರೂಪಿಸಬೇಕಾದ ಉತ್ತಮ ವ್ಯಕ್ತಿತ್ವದ ಬೀಜವನ್ನು ಸಣ್ಣ ವಯಸ್ಸಿನಲ್ಲಿಯೇ ಬಿತ್ತಬೇಕಾಗುತ್ತದೆ. ಜೀವನದಲ್ಲಿ ಶಿಸ್ತು, ಸಂಯಮ, ತಾಳ್ಮೆ,ಶ್ರದ್ಧೆ,ಭಕ್ತಿ ಇದ್ದರೆ ಮಾತ್ರ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳ ಆಂತರಿಕ ಇಂಗಿತವನ್ನು ಅರಿತು ನಡೆಯಬೇಕು. ದೇಹಕ್ಕೆ ಆದ ಗಾಯವನ್ನಾದರೂ ಶಮನಗೊಳಿಸಬಹುದು.ಆದರೆ ಮನಸ್ಸಿಗೆ ಆದ ಗಾಯವನ್ನು ಶಮನಗೊಳಿಸುವುದು ಬಹಳ ಕಷ್ಟ ಅದರಲ್ಲೂ ಮಕ್ಕಳ ಮನಸ್ಸಿಗೆ ಗಾಯಗಳಾದರೆ ಅದು ಭೀಕರ ಪರಿಣಾಮವನ್ನು ಬೀರಬಹುದು.

ಪ್ರಸ್ತುತ ಪರಿಸ್ಥಿತಿಯಲ್ಲಿ ತಂದೆ ತಾಯಿಗೆ ಉತ್ತಮ ಮಕ್ಕಳಿದ್ದರೆ ಅವರೇ ದೊಡ್ಡ ಆಸ್ತಿ ಇದ್ದ ಹಾಗೆ. ಮಕ್ಕಳ ಮನಸ್ಸನ್ನು ಅರಿತು,ಅವರ ಮನಸ್ಸಿನ ಕುತೂಹಲ ಅರಳಿಸುವ, ಕಲ್ಪನಾ ಶಕ್ತಿ ಹೆಚ್ಚಿಸುವ, ಭಾವನೆಗಳನ್ನು ಬಿರಿದರಳಿಸುವ, ಅವಕಾಶಗಳನ್ನು ನೀಡುತ್ತಾ,ಉತ್ತಮ ಸಂಸ್ಕಾರದೊಂದಿಗೆ, ಆದರ್ಶ ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬಂತೆ ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ನಮ್ಮ ಮಕ್ಕಳನ್ನು ರೂಪಿಸಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.


About The Author

Leave a Reply

You cannot copy content of this page

Scroll to Top