ಮಳೆಹಾಡು-2


ಆಶಾ ಜಗದೀಶ್
ಚಿಟಪಟ ಸದ್ದಿಗೆ ಸೋಲದ ಗುಂಡಿಗೆ
ಇದೆಯೇ ಹೇಳು ಮಳೆ ಹನಿಯೇ…
ಗೂಡಿನೊಳಗೆ ಬಚ್ಚಿಟ್ಟುಕೊಂಡ
ಗುಬ್ಬಿ ಕಣ್ಣ ಬೆರಗು ನೀನು
ನೆಂದ ಗರಿಗಳ ಹರವಿ ಒಣಗಿಸಿಕೊಳ್ಳುವಾಗ
ಕಾಡಿದ ಕಾಡುವ ನೆನಪು ನೀನು
ಶಂಕು ಹೊತ್ತ ಹುಳುವಿನ
ಕೋಡು ನೀನು ಅಂಜಿಕೆ ನೀನು
ನಾಚಿಕೆ ನೀನು ಮೈಯ್ಯ ಪಸೆಯೂ ನೀನು
ನೂರು ವರ್ಷವನ್ನೇ ಕ್ಷಣಿಕ ಎಂದುಕೊಳ್ಳುವ
ನಮ್ಮೆದುರು ಮಳೆಗೆ ಹುಟ್ಟಿ ಸಾಯುವ
ಹುಳುಗಳೆಷ್ಟೋ ಎಷ್ಟೊಂದು ಪಾಠಗಳ
ಬಿಟ್ಟು ಹೋಗುತ್ತವೆ!
ಮಳೆಯೇ.. ನಿನ್ನದೊಂದು ಸ್ಪರ್ಷಕ್ಕೆ
ಬಲಿಯಾಗಲೇಂದೇ ಹುಟ್ಟು ಪಡೆಯುತ್ತವೆ
ಮತ್ತೆ ಮತ್ತೆ ಹುಟ್ಟಿ ಸಾಯುತ್ತವೆ
ನಾವು ಮಳೆಯೊಂದರ ಹನಿಯನ್ನೂ
ಒಳಗಿಟ್ಟುಕೊಳ್ಳಲಾಗದೆ ಕುಡಿದು
ಹೊರ ಚೆಲ್ಲುತ್ತೇವೆ…
ಆರದ ದಾಹವನ್ನು ಪೊರೆಯುತ್ತಾ
ಮಳೆಯ ಕರೆಯುವ ವಿಧಾನವನ್ನು
ಮರೆಯುತ್ತೇವೆ
ಮಳೆಯೇ ಈಗೊಂದು ಹಾಡನ್ನು
ಗುನುಗಬೇಕೆನಿಸುತ್ತಿದೆ
ನಿನ್ನದೇ ಪಲ್ಲವಗಳ ಹಾಡೊಂದನ್ನು ಕಟ್ಟಿ
ನಿನ್ನನ್ನು ಮುಚ್ಚಟೆಯಿಂದ
ಕರೆಯಬೇಕೆನಿಸುತ್ತಿದೆ
ಸೋ….. ಗುಟ್ಟುತ್ತಾ…
ರಿಮಝಿಮ ತಾಳಕ್ಕೆ ಸರಿಗಟ್ಟಿ….
**********