ಗಜಲ್ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್

ಕಾಣದ ವಿಧಿಯೊಂದು ನೋಡುತಿದೆ ಎಲ್ಲವನು ಎಚ್ಚರಾ
ಆಡಿಸುತಿದೆ ಗುಂಡಗೆ ಕಾಲವು ನಮ್ಮೆಲ್ಲರನು ಎಚ್ಚರಾ
ಒಳಿತು ಕೆಡುಕುಗಳ ಅರಿವು ಬೇಕು ನಮಗಲ್ಲವೇ
ಬಯಕೆ ಬೀಸಿದೆ ಮುಳ್ಳಿನ ಬಲೆಯನು ಎಚ್ಚರಾ
ಬಹುರೂಪಿ ಜಗದೊಳು ಮೋಸದ ಮಂದೆ ನೋಡು
ನಗೆಯ ಮುಖವಾಡದಿ ಮಾಡಿಹರು ವಂಚನೆಯನು ಎಚ್ಚರಾ
ಆಮಿಷದ ಬಣ್ಣದ ಬಲೂನಿಗೆ ಮರುಳಾಗದಿರು ನೀನು
ನಯವಾಗಿ ಇರಿದಿಹರು ಬೆನ್ನಿಗೆ ಕತ್ತಿಯನು ಎಚ್ಚರಾ
ಮೃದು ಮಧುರ ಮೆಲುನುಡಿಯ ನಂಬದಿರು ಬೇಗಂ
ಜೇನಿಗೆ ಬೆರೆಸಿಹರು ತುಸು ಗರಳವನು ಎಚ್ಚರಾ
ಹಮೀದಾಬೇಗಂ ದೇಸಾಯಿ.





ತುಂಬಾ ಸುಂದರ ಗಝಲ್ ಮೇಡಂ
ಶ್ರೀಪಾದ ಆಲಗೂಡಕರ ✍️
ಹಮಿದಾ ಬೆಗಂ ಅವರು ಬರೆದಿರುವ ಈ ಸಾಲುಗಳು ಜೀವನದ ಕುರಿತು ಬಹಳ ಸುಂದರವಾದ ಮತ್ತು ಪ್ರಮುಖ ಸಂದೇಶವನ್ನು ನೀಡುತ್ತಿವೆ.
ಬಾಳ ದಾರಿಯಲಿ ಕಾಣದ ಪರೀಕ್ಷೆಗಳು,
ಸುತ್ತಲೂ ಸುಳಿಯುವ ಮೋಸದ ಮಂಕು ಕವಿದಿದೆ.
ನಂಬಿಕೆ ನಂಬದಿರಲು ಮನವು ಸದಾ ಗೊಂದಲದಿ,
ಇದೆಲ್ಲದರ ನಡುವೆ ಎಚ್ಚರವೇ ನಮ್ಮ ರಕ್ಷೆ..- ಪ್ರಕಾಶಚಂದ ಟಿ ಜೈನ. ಸುರಪುಕ
ಸ್ಪಂದನೆಗೆ ಧನ್ಯವಾದಗಳು ಈರ್ವರಿಗೂ
ಹಮೀದಾಬೇಗಂ ದೇಸಾಯಿ.ಸಂಕೇಶ್ವರ
ತುಂಬಾ ಸೂಪರ್ ನಿಮ್ಮ ಗಝಲ್ ಹಮೀದಾ, ಧಾರವಾಡದಲ್ಲಿ ತಮ್ಮ ಭೇಟಿ ಖುಷಿ ಎನಿಸಿದೆ.