ನಾವು ಪ್ರಜ್ವಲಿಸಬೇಕು’

 

Eye, Manipulation, Tears, Art, Sad

ವಸುಂಧರಾ ಕದಲೂರು

ಸೂರ್ಯನನ್ನು ನಮ್ಮಿಂದ ಬಚ್ಚಿಟ್ಟಿದ್ದಾರೆ.
ನಾವಂತೂ ಕತ್ತಲಲ್ಲಿ ಕೂರುವ
ಜಾಯಮಾನದವರಲ್ಲ, ಹುಡುಕುತ್ತೇವೆ
ಬೆಳಕಿನ ನಾನಾಮೂಲಗಳನ್ನು
ನಮ್ಮ ಹಾದಿಗಳಲಿ. ನಮಗೆ ಬೆಳಕು ಬೇಕಿದೆ.

ಅವರು ಬಂದೂಕು ತೋರುತ್ತಾರೆ
ಉಸಿರು ಬಿಡಬಾರದೆಂದು ನಮಗೆ
ಭಯವೆಂಬುದು ನಿರ್ಧಾರಕವಲ್ಲ ಕಡೆಗೆ
ನಿರ್ಣಾಯಕವೂ ಅಲ್ಲ. ನಮಗೆ ಉತ್ತರ ಬೇಕಿದೆ.

ಹಸಿದ ಬದುಕಿಗೆ ಹಳಸಿದ ಮೇಲೋಗರವೇ
ಮೃಷ್ಟಾನ್ನ ಎಂಬ ಆಸೆಹುಟ್ಟಿಸುವ
ಕನ್ನಕೋರರು ನಮ್ಮ ಕನಸಿನ ತಿಜೋರಿಗೆ
ಹುಡುಕಾಡುತ್ತಾರೆ ಸದಾ ಎಚ್ಚರಿರುವ
ನಾವು ಮಲಗುವುದಿಲ್ಲ. ನಮಗೆ ಜಾಗೃತಿ ಬೇಕಿದೆ

ನಿಡುಗಾಲದ ಮೌನಕ್ಕೆ ದನಿಯ ತುಂಬುತ್ತಾ, ಅನುಗಾಲದ ನೋವಿಗೆ ಮುಲಾಮು ಹಚ್ಚುತ್ತಾ
ಸಂತೈಸುವ ನಮ್ಮದೇ ಕೈಗಳನ್ನು ನಾವೀಗ
ಬಲಪಡಿಸಬೇಕಿದೆ, ನಮಗೆ ನಿಯತ್ತಿನ ಹೆಗಲು ಬೇಕಿದೆ.

ಮಣಭಾರದ ದುಃಖ ಮರೆತು ತೆರೆದುಕೊಳ್ಳಲು
ನಾವು ನಿರುಮ್ಮಳಾಗಬೇಕು. ನಮಗೆ ನ್ಯಾಯ ಬೇಕು ನಮ್ಮ ದನಿಗೆ ಕಿವಿ ಬೇಕು, ನಮಗೆ ಶಕ್ತಿ ಬೇಕು.
ಸ್ವಯಂ ಪ್ರಜ್ವಲಿಸಲು ನಾವೇ ಉರಿಯಬೇಕು.
ನಮಗೆ ಹೊಳೆವ ಯುಕ್ತಿ ಬೇಕಿದೆ.

*********


.

4 thoughts on “ನಾವು ಪ್ರಜ್ವಲಿಸಬೇಕು’

Leave a Reply

Back To Top