ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಕ್ಷ್ಮೀಶನ ‘ಜೈಮಿನಿ ಭಾರತ’ ಕಾವ್ಯವು ಕುರುಕ್ಷೇತ್ರ ಯುದ್ಧಾನಂತರದಲ್ಲಿ ಉಂಟಾದ ಮನದ ವ್ಯಾಕುಲತೆಯನ್ನು ಹೋಗಲಾಡಿಸಲು ಭಕ್ತಿ- ಶಕ್ತಿಗಳ ಮೊರೆಹೋದವರ ಕಥಾನಕ. ಈ ಕಥೆಯನ್ನು ಅಕ್ಷರ ರೂಪದಲ್ಲಿ ಕಡೆದು ನಿಲ್ಲಿಸುವ ಘನ ಪ್ರಯತ್ನ ಈಗಾಗಲೇ ಹಲವು ಮಹನೀಯರಿಂದ, ವಿದ್ವಾಂಸರಿಂದ ಸಾಧಿತವಾಗಿದೆ. ಆದರೆ ಅಶ್ವಮೇಧ ಯಾಗದ ಬಹುಪ್ರಮುಖ ಭಾಗವಾಗಿದ್ದ ಅರ್ಜುನನ ದೃಷ್ಟಿಕೋನದಿಂದ ಸಂಪೂರ್ಣ ಕಥಾನಕವನ್ನು ಈಕ್ಷಿಸುವ ಪ್ರಯತ್ನ ಹೊಸತು. ಇದುವೇ ‘ಅರ್ಜುನ ಉವಾಚ’ ಸರಣಿ. ಇದು ಒಂದರ್ಥದಲ್ಲಿ ಅರ್ಜುನನೇ ಹೇಳಹೊರಟಿರುವ ಅರ್ಜುನನ ಕಥೆ. ಅವನ ಬದುಕಿನ ಒಂದು ಹಂತದ ಆತ್ಮವೃತ್ತಾಂತವಾಗಿಯೂ ಇದನ್ನು ಗಮನಿಸಿಕೊಳ್ಳುವುದಕ್ಕೆ ಅವಕಾಶವಿದೆ.   

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ    ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ ಕಲಹ. ಸರಿ ತಪ್ಪುಗಳ ಕಲಹ. ಯುದ್ಧದ ನೆಪದಲ್ಲಿ ಸೋದರರು ಸಂಬಂಧಿಗಳನ್ನು ಕೊಂದು ತಾನೆಲ್ಲಿ ತಪ್ಪು ಎಸಗಿದೆನೋ ಎಂಬ ಪಶ್ಚಾತ್ತಾಪ ಭಾವ ಅವನನ್ನು ಕಾಡತೊಡಗಿತ್ತು. ವಾಸ್ತವವಾಗಿ ಅವನ ಆಳ್ವಿಕೆಯಲ್ಲಿ ಪ್ರಜೆಗಳಿಗೆ ಯಾವ ತೊಂದರೆಯೂ ಇರಲಿಲ್ಲ. ರಾಜ್ಯ ಸುಭಿಕ್ಷವಾಗಿತ್ತು. ಚೋರರ ಚತುರತೆಗೆ ಆಸ್ಪದವಿರಲಿಲ್ಲ. ಕೊಲೆಗಡುಕರ ಕ್ರೂರತೆಗೆ ಅವಕಾಶವಿರಲಿಲ್ಲ. ಹಸ್ತಿನಾವತಿಯ ಯಾವ ದೆಶೆಗೆ ದೃಷ್ಟಿ ಹರಿಸಿದರೂ ಅಲ್ಲಿ ಸಂಪದದ ಕಾಣ್ಕೆ. ಯಾವ ದಿಕ್ಕಿಗೆ ನೋಟ ಬೀರಿದರೂ ಅಲ್ಲಿ ಸೊಗದ ದರ್ಶನ. ಇಂದ್ರನ ಅಮರಾವತಿಗೆ ಸ್ಪರ್ಧೆಯನ್ನೊಡ್ಡುವಂತಿತ್ತು ಹಸ್ತಿನಾವತಿ. ಇಂತಹ ಸುಖದ ಅತಿರೇಕಾವಸ್ಥೆಯಲ್ಲಿಯೂ ನನ್ನಣ್ಣನ ಧರ್ಮೋದಾತ್ತ ಚಿತ್ತ ಚಲಿಸಿದ್ದು ಗತಕಾಲದಲ್ಲಿ ನಡೆದುಹೋದ ಮನುಜ ಆಹುತಿಯೆಡೆಗೆ. ಕುರುಕ್ಷೇತ್ರ ರಣಭೂಮಿಯಲ್ಲಿ ಸತ್ತುಹೋಗಿದ್ದವರೆಲ್ಲರೂ ಅವನ ಮನದಲ್ಲಿ ಮರುಜನ್ಮ ಪಡೆದೂ ಪಡೆದೂ ಅವನನ್ನು ಸತಾಯಿಸತೊಡಗಿದ್ದರು. ಎಲ್ಲರ ಸಾವಿಗೂ ತಾನು ಕಾರಣನಾದೆನಲ್ಲಾ ಎಂಬ ಯೋಚನೆ ಧರ್ಮಶ್ರೇಷ್ಠನೆನಿಸಿಕೊಂಡ ಅವನನ್ನು ಕಾಡಿದ್ದು ಕೆಣಕಿದ್ದು ಅಸಹಜ ಸಂಗತಿಯೇನಲ್ಲ.                                   ಹೀಗೆ ಖಿನ್ನತೆಯಲ್ಲಿ ಬಾಡಿ, ಸುಖಿಸುವವರ ಗುಂಪಿನಲ್ಲಿ ಭಿನ್ನನಾಗಿ ಮುದುಡಿಹೋಗಿದ್ದ ಧರ್ಮವೀರನನ್ನು ಕಂಡವರು ವ್ಯಾಸರು. ಮುನಿಶ್ರೇಷ್ಠರೆನಿಸಿಕೊಂಡಿದ್ದ ಅವರಿಗೆ ನನ್ನಣ್ಣನ ಭಿನ್ನಬಗೆಯನ್ನು ಗುರುತಿಸುವುದೇನೂ ಕಷ್ಟವಾಗಲಿಲ್ಲ. ಕೇಳಿಯೇಬಿಟ್ಟರು, “ಏಕೆ ಹೀಗಿಹೆ ಧರ್ಮಜ? ನಿನ್ನ ಮೊಗಭಾವವಿದು ಅಸಹಜ!” ಇರುವ ಹತ್ತು ಜನರ ಗುಂಪಿನಲ್ಲಿ ಒಂಭತ್ತು ಮಂದಿ ನಗುತ್ತಿದ್ದು, ಒಬ್ಬ ಮಾತ್ರವೇ ಸುಮ್ಮನೆ ಕುಳಿತಿದ್ದರೆ ಇಂತಹದ್ದೊಂದು ಪ್ರಶ್ನೆ ಉದ್ಭವಿಸುವುದು ಸಹಜವೇ. ಅದನ್ನೇ ಕೇಳಿದ್ದರು ವ್ಯಾಸರು. ಹೇಳಬೇಕೋ ಬೇಡವೋ ಎಂಬ ಗೊಂದಲ ನನ್ನಣ್ಣನಲ್ಲಿ. ಸಂಕೋಚದಿAದಲೇ, ತನ್ನ ಮನವನ್ನಾವರಿಸಿದ್ದ ನೋವಿನ ಮೋಡದೆಡೆಗೆ ಬೆರಳು ತೋರಿಸಿ ಕಣ್ಣೀರಿನ ವರ್ಷಧಾರೆಯನ್ನು ಹರಿಸಿದ. ಸ್ವಗೋತ್ರವಧೆಯ ಕಳಂಕ ತನ್ನನ್ನು ತಟ್ಟಿತಲ್ಲಾ ಎಂದು ಹಲುಬಿದ. ಅರಸುತನವಿದು ಸಾಕು ನನಗೆ. ಅರಣ್ಯಮುಖಿಯಾಗಿ ವೈರಾಗ್ಯ ಭಾವದಲ್ಲಿಯೇ ಉಳಿದ ಜೀವನವನ್ನು ಕಳೆಯುತ್ತೇನೆ ಎಂದು ಪ್ರಲಾಪಿಸಿದ. ಧರ್ಮಜನ ದುಃಖವನ್ನು ಕೇಳಿಸಿಕೊಂಡ ವ್ಯಾಸರ ಕಿವಿ ಕವಿಹೃದಯಕ್ಕೆ ಸಮಾನವಾಯಿತು. ನಿಗಮಾಗಮ ಶಾಸ್ತç ಪುರಾಣಗಳನ್ನು ಅರಿತಿದ್ದರೂ ಆ ಬಗೆಯಲ್ಲಿ ನುಡಿಯುತ್ತಿರುವ ಧರ್ಮರಾಯನ ನಿಲುವು ಅವರಿಗೆ ನೂತನವೆನಿಸಿತು. ಚಕಿತಚಿತ್ತರಾದರು ವ್ಯಾಸರು. “ದುಃಖವೇಕೆ? ಸಾಮ್ರಾಜ್ಯವನ್ನು ಪರಿಪಾಲಿಸದೆ ಅರಣ್ಯ ಸೇರಿಕೊಳ್ಳುವುದರಲ್ಲಿ ಅದೇನು ಸಾರ್ಥಕತೆಯಿದೆ ನಿನಗೆ?” ಎಂದು ಕೇಳಿ, ಅವನ ನಿರ್ಣಯವನ್ನು ಬದಲಿಸುವ ಯತ್ನ ಮಾಡಿದರು. ನನ್ನಣ್ಣನ ಚಿತ್ತ ಬದಲಾಗಲಿಲ್ಲ. ಅಖಿಲ ಸಾಮ್ರಾಜ್ಯವೀಗ ತನ್ನ ಕೈಯ್ಯಡಿಯಲ್ಲಿದೆ ಎಂದು ಸಂಭ್ರಮಿಸುವ ಮನಃಸ್ಥಿತಿ ಅವನದ್ದಾಗಿರಲಿಲ್ಲ. ಅದನ್ನೇ ಹೇಳಿದ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕರ್ಣ, ಶಲ್ಯ, ದುರ್ಯೋಧನ ಮೊದಲಾದವರಿಲ್ಲದ ಭೂಮಿಯನ್ನು ಆಳುವ ಇಚ್ಛೆಯನ್ನವನು ಅದಾಗಲೇ ಕಳೆದುಕೊಂಡಿದ್ದ. ಸಕಲ ಮೇಧಿನಿಯ ಅಧಿಕಾರವನ್ನು ಭೀಮಸೇನನಿಗೆ ಕೊಟ್ಟು ವನವನ್ನು ಸೇರಿಕೊಳ್ಳುತ್ತೇನೆ ಎಂಬ ಮಾತು ಮತ್ತೆ ಅವನಿಂದ ಬಂತು.  ಈಗ ಮತ್ತೊಮ್ಮೆ ಯುದಿಷ್ಠಿರನ ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆಯನ್ನು ತೋರಿದರು ವ್ಯಾಸಶ್ರೇಷ್ಠರು. “ಕ್ಷಾತ್ರಧರ್ಮಕ್ಕೆ ಅನುಸಾರವಾಗಿ ನೀನು ನಡೆದುಕೊಂಡಿರುವೆ. ಇದರಲ್ಲಿ ನಿನ್ನದೇನಿದೆ ತಪ್ಪು! ಧರ್ಮವನ್ನು ಪರಿಪಾಲಿಸಿರುವ ನೀನು ಅಧರ್ಮಿಯೆನಿಸಿಕೊಳ್ಳಲಾರೆ. ಗೋತ್ರವಧೆಯ ಪಾಪ ನಿನ್ನನ್ನು ತಟ್ಟಲಾರದು” ಎಂಬ ಸಾಂತ್ವನದ ನುಡಿಮುತ್ತುಗಳು ಅವರಿಂದ ಬಂತು. ಜೊತೆಗೆ “ನೀನು ಅರಣ್ಯ ಸೇರಿಕೊಳ್ಳುವುದೇ ಒಳ್ಳೆಯದು. ವಾಯುಪುತ್ರ ಭೀಮನಿಗೆ ನಾವು ಪಟ್ಟವನ್ನು ಕಟ್ಟುತ್ತೇವೆ” ಎಂಬ ವ್ಯಂಗ್ಯದ ಮಾತನ್ನೂ ಆಡಿದರು. ವ್ಯಾಸರ ನುಡಿ ಧರ್ಮಜನನ್ನು ಕಾಡಿತು. ಭೂಮಿಯನ್ನು ತಾನೇ ಆಳುವುದಾಗಿ ಒಪ್ಪಿಕೊಂಡ. ಗೋತ್ರಹತ್ಯೆಯ ದೋಷ ಇನ್ನಿಲ್ಲವಾಗುವ ಪರಿಯೆಂತು ಎಂದು ಅವರನ್ನೇ ಕೇಳಿದ. ಆಗಲೇ ವ್ಯಾಸರು ಧರ್ಮಜನ ಮನದ ಖಿನ್ನತೆಯನ್ನು ಶೂನ್ಯವಾಗಿಸುವ ಮಹಾಧ್ವರವೊಂದರ ಪ್ರಸ್ತಾಪವನ್ನೆತ್ತಿದ್ದು. ಅದು ಅಶ್ವಮೇಧ ಯಾಗದ ಬಗೆಗಿನ ಪ್ರಸ್ತಾಪ. ಹಿಂದೆ ಸೋಮಕುಲದ ಮಹಾರಾಜರುಗಳೆಲ್ಲಾ ಮಹಾಯಾಗಗಳನ್ನು ಮಾಡಿ ತಮ್ಮ ದೋಷಗಳನ್ನು ನೀಗಿಕೊಂಡಿದ್ದರAತೆ. ಈಗ ಧರ್ಮಜನೂ ಅದೇ ರೀತಿಯಲ್ಲಿ ಅಶ್ವಮೇಧ ಯಾಗವನ್ನು ಕೈಗೊಂಡರೆ ಅವನ ದೋಷವೆಲ್ಲಾ ಕಳೆದುಹೋಗಿ ಶುಚಿತ್ವ ಅವನದಾಗುತ್ತದೆ ಎಂದರು ವ್ಯಾಸರು. ತನ್ನ ವಂಶದ ರಾಜರುಗಳು ಸಾಧುತ್ವವನ್ನು ಕಳೆದುಕೊಂಡಿಲ್ಲ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವ ಆಕಾಂಕ್ಷೆಯಿತ್ತು ಧರ್ಮಜನಿಗೆ. ವ್ಯಾಸರ ಕರುಣೆಯಿಂದಲೇ ತನ್ನ ಬದುಕಿಗೊಂದು ಹೊಸ ಆರಂಭ ಎಂಬ ಆಶಾವಾದವಿತ್ತು ಅವನಲ್ಲಿ. ತನ್ನ ಕಡೆಗೆ ಕರುಣಾಜನಕ ಕಣ್ಣೋಟ ಹರಿಸಿದ ಯುದಿಷ್ಠಿರನಿಗೆ ಅಶ್ವಮೇಧ ಯಾಗದ ಹಿನ್ನೆಲೆಯನ್ನು ಚೆನ್ನಾಗಿಯೇ ಮನವರಿಕೆ ಮಾಡಿದರು ವ್ಯಾಸರು. ಅವರು ಹೇಳಿದ್ದು ತ್ರೇತಾಯುಗದ ಬಗ್ಗೆ. ರಘುವಂಶಜನಾದ ಶ್ರೀರಾಮಚಂದ್ರ ಲಂಕಾಧಿಪತಿ ರಾವಣನನ್ನು ಕೊಂದ ಬಳಿಕ ಅಶ್ವಮೇಧ ಯಾಗವನ್ನು ಕೈಗೊಂಡಿದ್ದನAತೆ. ಆ ಮೂಲಕ ಬ್ರಾಹ್ಮಣರನ್ನು ತೃಪ್ತಿಗೊಳಿಸಿದ್ದನಂತೆ. ಕೌಸಲ್ಯಾತನಯ ಶ್ರೀರಾಮನಂತೆಯೇ ಅಶ್ವಮೇಧ ಯಾಗವನ್ನೀಗ ಕುಂತೀಪುತ್ರ ಧರ್ಮರಾಯ ಮಾಡಬೇಕು ಎನ್ನುವುದು ವ್ಯಾಸರಿತ್ತ ಸಲಹೆ. ಮಾಡುವುದೆಂತು ಆ ಯಾಗವನ್ನು? ಎಂತಹ ಕುದುರೆ ಇದ್ದರೆ ಒಳಿತು? ಎನ್ನುವುದು ಧರ್ಮಜ ತಕ್ಷಣವೇ ಎದುರಿಗಿಟ್ಟ ಪ್ರಶ್ನೆಗಳು. ಅದಕ್ಕೆ ಉಚಿತವಾದ ಉತ್ತರವಿತ್ತು ವ್ಯಾಸರಲ್ಲಿ. ಹೇಳತೊಡಗಿದರು…


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆಯವರಾದ ಡಾ. ವಿಶ್ವನಾಥ ಎನ್ ನೇರಳಕಟ್ಟೆ ಇವರು ವೃತ್ತಿಪರ ಬರಹಗಾರರಾಗಿದ್ದಾರೆ. ಒಂದು ಕವನ ಸಂಕಲನ, ಒಂದು ನಾಟಕ ಕೃತಿ, ಒಂದು ಹನಿಗವಿತೆಗಳ ಸಂಕಲನ, ಎರಡು ಕಥಾ ಸಂಕಲನಗಳು ಸೇರಿದಂತೆ ಇವರ ಒಟ್ಟು ಐದು ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ‘ತುಸು ತಿಳಿದವನ ಪಿಸುಮಾತು’ ಎನ್ನುವುದು ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣ ಬರಹ. ‘ಕೆಂಡಸAಪಿಗೆ’ ಸಾಹಿತ್ಯಕ ಬ್ಲಾಗ್‌ನಲ್ಲಿ ‘ವಿಶ್ವ ಪರ್ಯಟನೆ’ ಸರಣಿ ಪ್ರಕಟಗೊಂಡಿದೆ. ‘ಡಾ| ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ಎನ್ನುವ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಗಳಿಸಿಕೊಂಡಿದ್ದಾರೆ. ಸುದ್ದಿ ಬಿಡುಗಡೆ, ಉದಯವಾಣಿ, ಹೊಸ ದಿಗಂತ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ವಾರ್ತಾ ಭಾರತಿ, ಕನ್ನಡಮ್ಮ, ಜನಮಿಡಿತ, ಯಂಗ್ ಇಂಡಿಯಾ, ತರಂಗ, ವಿಕ್ರಮ, ಕರ್ಮವೀರ, ಮಂಗಳ, ತುಷಾರ, ಹೊಸತು, ಗೋಕುಲವಾಣಿ, ನೇಸರು, ಅಡ್ವೆöÊಸರ್, ಜೀವನಾಡಿ, ಲಹರಿ ಮುಂತಾದ ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ, ಸಂಗಾತಿ, ಕೆಂಡಸAಪಿಗೆ, ಬುಕ್ ಬ್ರಹ್ಮ, ಚಿಲುಮೆ, ಮಿಂಚುಳ್ಳಿ, ಸಂಪದ, ವಿಶ್ವಧ್ವನಿ, ಅವಧಿ, ಹೊನಲು, ಪಂಜು, ಚೆಂಗದಿರು ಮೊದಲಾದ ಸಾಹಿತ್ಯಕ ಜಾಲತಾಣ- ಬ್ಲಾಗ್‌ಗಳಲ್ಲಿ ಇವರ ಸಣ್ಣಕಥೆ, ಕವನ, ವೈಚಾರಿಕ ಲೇಖನ, ವಿಮರ್ಶೆ, ಮುಖಪುಟ ಲೇಖನಗಳು ಪ್ರಕಟಗೊಂಡಿವೆ. ಜಿಲ್ಲೆ ಹಾಗೂ ರಾಜ್ಯಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಹಲವು ಸಲ ಕಾರ್ಯಕ್ರಮ ಪ್ರಸ್ತುತಿಪಡಿಸಿದ್ದಾರೆ. ಪ್ರೇಮಕವಿ ಪ್ರಶಸ್ತಿ, ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪುರಸ್ಕಾರ, ಸಾಹಿತ್ಯ ರತ್ನ ಪ್ರಶಸ್ತಿ ಮತ್ತು ಯೆನಪೋಯ ಎಕ್ಸಲೆನ್ಸಿ ಅವಾರ್ಡ್ ದೊರೆತಿರುವ ಪ್ರಶಸ್ತಿ ಗೌರವಗಳು.                                                                                                                                                                                                                                                                                  

About The Author

Leave a Reply

You cannot copy content of this page

Scroll to Top