ಕಾವ್ಯ ಸಂಗಾತಿ
ಶಾರದಜೈರಾಂ.
ʼಇಂದು ರಾಧಾಷ್ಟಮಿಯಂತೆ…!ʼ


ಇಂದು ರಾಧಾಷ್ಟಮಿಯಂತ
ಆಗಾಗ ನೆನಪಾಗಿ ಕಾಡುವಳು
ಈ ಕೃಷ್ಣನ ಮನದರಸಿ ರಾಧೇ
ಯಾವುದೋ ಕವನದ ಸಾಲಿನಂತೆ
ಇನ್ಯಾವುದೋ ರಾಗದ ಹೊನಲಿನಂತೆ
ಮುಗುಳು ನಗೆಯ ಮುರಾರಿ
ಗೋಪಿಕೆಯರ ಮನವ ಕದ್ದ ಚೋರ
ತುಂಟಾಟದಿ ಮಾತೆಯರ ಗೋಳಾಡಿಸಿದ ಗೋಪಿ
ಹೀಗಿದ್ದರು ಮೋಹಿಸಿದಳು
ಮುರಳಿಧರನ
ಏನೆಲ್ಲ ಸಹಿಸಿದಳು
ಜನರ ಕೊಂಕು ನುಡಿ
ಬಿರು ನೋಟುಗಳ ದಾಟಿ
ಅವನ ಹೃದಯ ಮೀಟಿದಳು
ಮಾಧವನ ಮಾದಕತೆಗೆ ಮಾರುಹೋದಳೇ
ಸುಳಿವೆ ಇರದಾದಾಗ
ಇಹವ ಮರೆತು ಕುಳಿತಳು
ಬೃಂದಾವನದ ಬಳಿ ಬರುವನೋ
ಬಾರನೋ ಬರಲಿ
ಮಾತನಾಡಿಸೆನೋ ಎನ್ನುತ

ತರಗೆಲೆಯ ಸದ್ದಿಗೆ ತಿರುಗುವಳು
ಹೋ ಬಂದ ಮನದನ್ನ ಮದನ
ಗಾಳಿಯೇ ಹೊತ್ತೋಯ್ಯಿ ಮುಟ್ಟಿಸು
ನನ್ನ ಮಧುಸೂದನನಿಗೆ ಸಂದೇಶ
ತನ್ನ ತಾನು ಪ್ರೀತಿಸುವುದಕ್ಕು ಅತಿಯಾಗಿ ಪ್ರೀತಿಸಿದ ರಾಧೇಗೆ
ದಕ್ಕಿದ್ದು ಭಾವಪಟದಿ ಚಿತ್ರವಾಗಿ
ಹೆಸರಿಗೆ ಜೊತೆಯಾಗಿ ಆದರೆ
ಕಂಡುಂಡ ನೋವೆಷ್ಟು
ಅನುಭವಿಸಿದ ಅವಮಾನಗಳು
ಜಗದ ಗೊಡವೆ ಇರದೆ ಜೀವಿಸಿದಳೇ
ಜಗದೋದ್ಧಾರನ ಹೃದಯದರಸಿ
ರಾಧೇ..
ಶಾರದಜೈರಾಂ.ಬಿ




ರಾಧೇ..ರಾಧೇ….