ನಾನು ಕೆಟ್ಟವಳು
ಶೀಲಾ ಭಂಡಾರ್ಕರ್
ನಿನ್ನ ಪ್ರೀತಿಯ ಪರಿಮಾಣದಲ್ಲಿ
ಒಂದಿಷ್ಟು ಆಚೆ ಈಚೆಯಾದಾಗ
ನಾನು ಕೆಟ್ಟವಳು.
ನನ್ನನ್ನು ಬದಿಗೆ ತಳ್ಳಿ
ಇನ್ಯಾರನ್ನೋ ತಲೆ ಮೇಲೆ
ಕೂರಿಸಿಕೊಂಡಾಗ,
ನಾನು ಕೆಟ್ಟವಳು.
ಅತಿಯಾಗಿ ಸಿಟ್ಟು ಬಂದಾಗ
ನಿನ್ನ ಚುಚ್ಚಿ ನೋಯಿಸಿ
ಖುಷಿ ಪಡುವಾಗ
ನಿಜವಾಗಲೂ
ನಾನು ಕೆಟ್ಟವಳು.
ಇಷ್ಟೇ.. ನಾನು ಕೆಟ್ಟವಳಾಗುವುದು
ಇವಿಷ್ಟೇ ಸಂದರ್ಭಗಳಲ್ಲಿ.
ನಾನು ಕೆಟ್ಟವಳಾದ
ಮರುಕ್ಷಣವೇ
ಮನವರಿಕೆಯಾಗಿ
ಮತ್ತೆ ನಿನ್ನೆಡೆಗೆ ಬಂದಾಗ,
ನೀನು ಎಂದಿನಂತೆ
ಮುದ್ದಿಸುವಿಯಲ್ಲ..!
ಆಗ ಮಾತ್ರ..
ನೀನೇ ಕೆಟ್ಟವನು.
************
ಶೀಲಾ ಮೇಡಂ ತುಂಬಾ ಚೆನ್ನಾಗಿ ಬರೆಯುತ್ತೀರಿ ನೀವು.
ಆಪ್ತವಾಗಿ ನಮ್ಮನ್ನು ಹಿಡಿದಿಡುತ್ತವೆ ಎಲ್ಲಾ ಹೆಣ್ಣುಗಳ ಭಾವನೆಗಳನ್ನು ಬರೆಯುತ್ತಿದ್ದೀರಿ ಧನ್ಯವಾದಗಳು