ಸಮಾಜ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟಿಲ್
́ʼಪಾಲಕರು ತಮ್ಮ ಗಂಡು ಮಕ್ಕಳಿಗೆ
ಕಲಿಸಬಹುದಾದ
ಉಪಯುಕ್ತ ಪಾಠಗಳುʼ

ಇಂಟರ್ನೆಟ್ ನ ಈ ಯುಗದಲ್ಲಿಯೂ ಕೂಡ ತಮ್ಮ ಮಕ್ಕಳನ್ನು ಬದುಕಿನ ಸವಾಲುಗಳನ್ನು ಎದುರಿಸಲು ಸಜ್ಜಾಗಿಸುವ ಮಹತ್ತರವಾದ ಜವಾಬ್ದಾರಿ ಪಾಲಕರ ಮೇಲಿದೆ. ತಮ್ಮ ಅನುಭವಗಳಿಂದ, ಸಾಮಾಜಿಕ ನೀತಿ ನಿಯಮಾವಳಿಗಳ ಬದ್ಧತೆಯನ್ನು ಹೊಂದಿರುವ ಪಾಲಕರು ಈ ಹಿಂದೆಂದೂ ಕಂಡಿರದ ಹತ್ತು ಹಲವು ಗಂಭೀರ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳನ್ನು ಮುನ್ನಡೆಸುವ ಪಾಲಕತ್ವದ ಅರಿವನ್ನು ಹೊಂದಿರಬೇಕಾದ ಅಗತ್ಯತೆ ನಮ್ಮ ಮುಂದಿದೆ.
ಇದಮಿತ್ತ್ರ್ಥಂ ಎಂದು ಹೇಳುವ ಹಾಗಯೇ ಇಲ್ಲದ ಬದುಕಿನ ಕವಲು ದಾರಿಯಲ್ಲಿ ಪಾಲಕರು ಮತ್ತು ಮಕ್ಕಳು ನಡೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಹತ್ತು ಹಲವು ವಿಷಯಗಳನ್ನು ಬಾಲ್ಯದಿಂದಲೇ ರೂಢಿ ಮಾಡಿಸಬೇಕಾಗಿದೆ. ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೂ ಕಲಿಸಬೇಕಾಗಿದೆ. ಅಂತಹ ಕೆಲವು ಉಪಯುಕ್ತ ಪಾಠಗಳು ಇಲ್ಲಿವೆ.
*ನಮ್ಮ ನಿಜವಾದ ಶಕ್ತಿ ಇರುವುದು ನಾವು ತೋರುವ ಸಂಯಮದಲ್ಲಿ, ಸಜ್ಜನಿಕೆಯಲ್ಲಿ ಎಂಬುದನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳು ನಯ ವಿನಯದ ನಡೆ-ನುಡಿಗಳನ್ನು ಹೊಂದಿರುವಂತೆ ಅವರನ್ನು ರೂಪಿಸಬೇಕು. ಬದುಕಿನ ಎಲ್ಲಾ ಸವಾಲುಗಳನ್ನು ಜೋರಾದ ಬಾಯಿ, ಗದ್ದಲ, ಹೊಡೆದಾಟಗಳಿಂದ ಗೆಲ್ಲಲು ಸಾಧ್ಯವಿಲ್ಲ.
“ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬೇಕೆ” ಎಂಬ ಮಾತಿನಂತೆ ನಮ್ಮ ನಯ, ವಿನಯ ಮತ್ತು ಸಜ್ಜನಿಕೆಗಳಿಂದ ನಾವು ಜಗತ್ತನ್ನು ಗೆಲ್ಲಬಹುದು ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು.
* ಕೆಲವೊಮ್ಮೆ ಸ್ನೇಹಿತರೊಂದಿಗೆ ಬೇಡ,ಒಲ್ಲೆ, ಇಲ್ಲ, ಆಗುವುದಿಲ್ಲ ಎಂದು ಹೇಳಲು ಮಕ್ಕಳು ಹಿಂಜರಿಯುತ್ತಾರೆ. ಬೇಡ ಎಂಬುದಕ್ಕೆ ಮತ್ತೊಂದು ಪರ್ಯಾಯ ಪದವಿಲ್ಲ ನಕಾರವನ್ನು ಸೂಚಿಸಲು ಸಂಕೋಚವಾಗಲಿ, ಮುಜುಗರವಾಗಲಿ ಬೇಡವೇ ಬೇಡ ಎಂಬುದನ್ನು ಮಕ್ಕಳಿಗೆ ಕಲಿಸಬೇಕು.
* ಮಾನವೀಯ ಸಂವೇದನೆಗಳಲ್ಲಿ ಅಳುವುದು ಕೂಡ ಒಂದು. ಸಾಮಾನ್ಯ. ಗಂಡಿರಲಿ ಹೆಣ್ಣಿರಲಿ ಅಳುವ ಮೂಲಕ ತಮ್ಮ ನೋವನ್ನು ಹೊರ ಹಾಕುವುದು ಸಹಜ ಪ್ರಕ್ರಿಯೆ, ಆದರೆ ಎಷ್ಟೋ ಬಾರಿ ಪೊಳ್ಳು ಪ್ರತಿಷ್ಠೆಗಳು, ಗಂಡು ಮಕ್ಕಳು ಅಳಬಾರದು ಎಂಬ ಅಹಂಭಾವಗಳು ಮಕ್ಕಳಲ್ಲಿ ತಮ್ಮ ಸಂವೇದನೆಗಳನ್ನು ಹತ್ತಿಕುವಂತೆ ಮಾಡುತ್ತವೆ. ಅದು ತಪ್ಪು. ನೋವನ್ನು ತಡೆಹಿಡಿಯದೆ ಅಳುವಿನ ಮೂಲಕ ಹೊರಹಾಕಿ ನಂತರ ಮನಸಾರೆ ನಕ್ಕು ಬಿಡುವ ಪಾಠವನ್ನು ಮಕ್ಕಳಿಗೆ ಖಂಡಿತವಾಗಿಯೂ ಕಲಿಸಬೇಕು.
* ಮಕ್ಕಳಲ್ಲಿ ಭಯದ ಕಾರಣಕ್ಕೆ ಗೌರವ ಹುಟ್ಟಬಾರದು… . ಮಕ್ಕಳು ತಮ್ಮ ಪಾಲಕರನ್ನು, ಗುರುಗಳನ್ನು, ಹಿರಿಯರನ್ನು ಗೌರವಿಸುವುದು ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಮೂಲಕ ಆಗಿರಬೇಕೇ ಹೊರತು ಭಯ ಮತ್ತು ಹೆದರಿಕೆಗಳಿಂದ ಅಲ್ಲ.ಪ್ರೀತಿಯ ಮೂಲಕ ಗೌರವವನ್ನು ಸಂಪಾದಿಸಬೇಕು ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಲೇಬೇಕು..
*ಮಕ್ಕಳು ತಮ್ಮ ತಪ್ಪನ್ನು ತಾವೇ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ. ನಿಧಾನವಾಗಿ ಕೂಡಿಸಿ ತಿಳಿ ಹೇಳಿ ಅವರ ತಪ್ಪನ್ನು ತಿದ್ದಬೇಕು. ಗದರಿಕೆಯ ಮಾತುಗಳು ಮತ್ತು ಹೀಯಾಳಿಕೆಗಳು ಅವರನ್ನು ಮತ್ತಷ್ಟು ಹಠಮಾರಿಗಳನ್ನಾಗಿಸುತ್ತವೆಯೇ ಹೊರತು ತಪ್ಪಿನ ಅರಿವನ್ನು ಮೂಡಿಸುವುದಿಲ್ಲ.
* ತನ್ನನ್ನು ತಾನು ಜಾಣ ಎಂದು ಸಾಬೀತು ಪಡಿಸಿಕೊಳ್ಳಲು ಗದ್ದಲದ ನಡೆ ನುಡಿಗಳು ಬೇಕಾಗಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ವಿನಯ ಮತ್ತು ಸಜ್ಜನಿಕೆಗಳು ಜಾಣ್ಮೆಯ ಮೂಲ ಬೇರುಗಳಾಗಿದೆ. ತಮ್ಮ ಅರಳುವಿಕೆಯಿಂದ ಸುಗಂಧವನ್ನು ಬೀರುವ ಹೂಗಳಂತೆ ಕಲಿತ ವಿದ್ಯೆಯು ತಂತಾನೆ ಸೌಜನ್ಯದ ಪರಿಮಳವನ್ನು ಹೊಮ್ಮಿಸಬೇಕು ಎಂಬುದನ್ನು ಮಕ್ಕಳಿಗೆ ಆಗಾಗ ಹೇಳುವ ಮೂಲಕ ಸೌಜನ್ಯದ ನಡೆ-ನುಡಿಯನ್ನು ಮಕ್ಕಳಲ್ಲಿ ತುಂಬಿ.
* ಕರುಣೆ ದಯೆ ತಾಳ್ಮೆ ಮುಂತಾದ ಗುಣಗಳು ಮಕ್ಕಳು ಹೊಂದಿರಲೇಬೇಕಾದ ಒಳ್ಳೆಯ ಮೌಲ್ಯಗಳು…. ಅತ್ಯಂತ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿಯೂ ಕೂಡ ತಾಳ್ಮೆಯಿಂದ ವರ್ತಿಸುವುದನ್ನು ರೂಡಿಸಿಕೊಳ್ಳುವಂತೆ ಮಕ್ಕಳನ್ನು ಬೆಳೆಸಿ. ತಣಿದ ನೀರನ್ನು ಕೂಡ ಆರಿಸಿ ಕುಡಿಯುವ ರೀತಿಯಲ್ಲಿ ಮಕ್ಕಳು ಶಾಂತ ಸ್ವಭಾವವನ್ನು ರೂಡಿಸಿಕೊಳ್ಳಲಿ. ಬೇರೆಯವರ ಮೇಲೆ ದಯವಿರಲಿ. ತಮಗಿಂತ ಕಡಿಮೆ ಅವಕಾಶಗಳನ್ನು ಹೊಂದಿರುವ ಜನರ ಬಗ್ಗೆ ಕರುಣೆ ಇರಲಿ.
* ತಪ್ಪು ಮಾಡುವುದು ಮನುಷ್ಯ ಸಹಜ ಗುಣ ಆದರೆ ಆ ತಪ್ಪನ್ನು ಒಪ್ಪಿಕೊಂಡು ಮತ್ತೆ ಆ ತಪ್ಪುಗಳು ಮರುಕಳಿಸದಂತೆ ಬದುಕುವುದು ಮಾನವನ ಲಕ್ಷಣ. ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಮೂಲಕ ತಿದ್ದುವಿಕೆಯ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಇಡಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಿ
* ಬೇರೊಬ್ಬರ ನೋವಿಗೆ, ತೊಂದರೆಗೆ ಅಪಹಾಸ್ಯ ಮಾಡಿ ನಗುವುದು ಬೇಡ, ಅದು ಅಮಾನವೀಯ. ನಮಗೆ ಕೆಡುಕನ್ನು ಮಾಡಿದವರಿಗೂ ಕೂಡ ಒಳಿತನ್ನು ಬಯಸುವ ಮನಸ್ಥಿತಿ ನಮ್ಮದಾಗಿರಲಿ ಎಂಬ ಭಾವವನ್ನು ಮಕ್ಕಳಲ್ಲಿ ಮೂಡಿಸಿ. ಎಲ್ಲರನ್ನೂ ಸಹೃದಯತೆಯಿಂದ ಒಪ್ಪಿಕೊಳ್ಳುವ ಅದರಲ್ಲೂ ಬೇರೆಯವರನ್ನು ಅವರಿರುವಂತೆಯೇ ಅವರನ್ನು ಒಪ್ಪಿಕೊಳ್ಳುವ ಮಾನಸಿಕತೆಯನ್ನು ಮಕ್ಕಳು ರೂಡಿಸಿಕೊಂಡಾಗ ಅಸಹನೆ ಅವರಿಂದ ದೂರವಾಗುತ್ತದೆ.
* ಕಠಿಣ ವ್ಯಕ್ತಿಯಾಗಿರುವುದಕ್ಕಿಂತ ಒಳ್ಳೆಯ ವ್ಯಕ್ತಿಯಾಗಿರುವುದು ಅತ್ಯುತ್ತಮ ಆಯ್ಕೆಯಾಗಿದ್ದು ಒಳ್ಳೆಯವರ ರಕ್ಷಣೆಗೆ ಎದ್ದು ನಿಲ್ಲುವ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಬೇಕು. ಪ್ರತಿ ಬಾರಿಯೂ ಕಾಣದ ಶಕ್ತಿಯು ನಮ್ಮನ್ನು ಕಾಪಾಡುವ ಅವಶ್ಯಕತೆ ಇಲ್ಲ
ತಮ್ಮ ಸ್ನೇಹಿತರ ಗುಂಪಿನಲ್ಲಿ ಹೆಣ್ಣು ಮಕ್ಕಳಿದ್ದರೆ ಅವರನ್ನು ವಿಶೇಷವಾಗಿ ಗೌರವಿಸುವುದನ್ನು ಕಲಿಸಿ. ಹೆಣ್ಣು ಮಕ್ಕಳನ್ನು ಕುರಿತು ಕೀಳಾಗಿ ತಮಾಷೆ ಮಾಡುವುದಾಗಲಿ ಹೀಯಾಳಿಸುವುದಾಗಲಿ ಮಕ್ಕಳು ಮಾಡಬಾರದು ಎಂಬ ನಿಟ್ಟಿನಲ್ಲಿ ಅವರಿಗೆ ಹೆಣ್ಣು ಮಕ್ಕಳ ಕುರಿತು ಗೌರವದ ಜೊತೆ ಜೊತೆಗೆ ಸಹಿಷ್ಣುತ ಭಾವನೆಯನ್ನು ಕೂಡ ಕಲಿಸಿಕೊಡಬೇಕು.
ಜನರು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಅರಿತು ಕೊಳ್ಳಲು ಮಕ್ಕಳಿಗೆ ಕಲಿಸಬೇಕು. ನಮ್ಮ ಬಹುತೇಕ ಸಮಯವನ್ನು ನಾವು ಎಂತಹ ಜನರೊಂದಿಗೆ ಕಳೆಯುತ್ತೇವೆ ಎಂಬುದು ಅತ್ಯಂತ ಮಹತ್ವದ ವಿಷಯವಾಗುತ್ತದೆ. ಅತ್ಯಂತ ಕಠಿಣವಾದ ಜಗತ್ತಿನಲ್ಲಿ ಮೆದುವಾಗಿ ಇರಲು ಭಯ ಬೇಡ.
“ವಜ್ರದಪಿ ಕಠೋರಾಣಿ ಮೃದೂನೀ ಕುಸುಮಾದಪಿ” ಎಂಬ ಮಾತಿನಂತೆ ಕೆಲ ಅನಿವಾರ್ಯದ ಸಂದರ್ಭದಲ್ಲಿ ನಿಷ್ಟುರವಾಗಿಯೂ ಮತ್ತೆ ಕೆಲ ಸಂದರ್ಭಗಳಲ್ಲಿ ಮೃದುವಾಗಿಯೂ ಇರಬೇಕಾದ ಅವಶ್ಯಕತೆ ತೋರಿದಲ್ಲಿ ಮಕ್ಕಳು ಹಾಗಿದ್ದರೆ ಅವರನ್ನು ವಿರೋಧಿಸಬೇಡಿ.
ನೀವು ಕೇವಲ ಗಂಡು ಮಕ್ಕಳನ್ನು ಮಾತ್ರ ಬೆಳೆಸುತ್ತಿಲ್ಲ…. ಬದಲಾಗಿ ನೀವು ನಿಮ್ಮ ಕುಟುಂಬದಲ್ಲಿ ಒಬ್ಬರಾಗಿ ನಿಮ್ಮೆಲ್ಲ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಇನ್ನಿತರ ಹೆಣ್ಣು ಮಕ್ಕಳಿಗೆ ಒಂದು ಸುರಕ್ಷಿತ ಸ್ಥಳವನ್ನು ಕಲ್ಪಿಸಲು ನಿಮ್ಮ ಗಂಡು ಮಕ್ಕಳನ್ನು ಬೆಳೆಸುತ್ತೀರಿ. ಭವಿಷ್ಯದಲ್ಲಿ ಒಡಹುಟ್ಟಿದವರನ್ನು ಕಾಳಜಿ ಪೂರ್ವಕ ನೋಡಿಕೊಳ್ಳುವ ವ್ಯಕ್ತಿಯನ್ನು ಬೆಳೆಸುತ್ತೀರಿ
ಮತ್ತೊಬ್ಬರ ಸಂಗಾತಿಯನ್ನು ಬೆಳೆಸುತ್ತೀರಿ. ಈ ಜಗತ್ತಿನಲ್ಲಿ ತಮ್ಮ ಇರುವಿಕೆಯ ಮೂಲಕವೇ ಈ ಪ್ರಪಂಚವನ್ನು ಮತ್ತಷ್ಟು ಉತ್ತಮ ಸ್ಥಳವನ್ನಾಗಿಸುವ ವ್ಯಕ್ತಿಯನ್ನು ಬೆಳೆಸುತ್ತೀರಿ.
ಗಂಡು ಮಕ್ಕಳನ್ನು ಬೆಳೆಸುವುದು ಎಂದರೆ ಎರಡು ಅಲುಗಿನ ಕತ್ತಿಯನ್ನು ಹಿಡಿದಂತೆ ಎಂಬ ಬಹುತೇಕ ಪಾಲಕರ ಅಭಿಪ್ರಾಯವಿದ್ದು ಪುಟ್ಟ ಸಸಿಯಾಗಿದ್ದಾಗಲೇ ಉನ್ನತ ವಿಚಾರಧಾರೆಗಳ ಮೌಲ್ಯಗಳನ್ನು ಮಕ್ಕಳಿಗೆ ನೀರೆರೆದು ಪೋಷಿಸಿದಾಗ ಮಕ್ಕಳು ಸಜ್ಜನಿಕೆಯ ಸ್ವರೂಪವಾಗಿ ನಮ್ಮ ಬದುಕನ್ನು ಬೆಳಗುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ…. ಏನಂತೀರ ಪಾಲಕರೆ?
ವೀಣಾ ಹೇಮಂತ್ ಗೌಡ ಪಾಟೀಲ್




