ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ʼತಿರುವುಗಳಲ್ಲಿ ಅರಿವಿರಲಿʼ


ದೂರದ ಒಂದು ಸ್ಥಳವನ್ನು ತಲುಪಬೇಕಾದರೆ ಏರು ತಗ್ಗುಗಳನ್ನು , ಕಲ್ಲು ಮುಳ್ಳುಗಳನ್ನು, ಹಾಗು ಅನೇಕ ತಿರುವುಗಳನ್ನು ದಾಟಿ ಹತ್ತಿ ಇಳಿದು ಕಲ್ಲು – ಮುಳ್ಳುಗಳನ್ನು ಬದಿಗೆ ಸರಿಸಿ ಸಾಗಬೇಕಾಗುತ್ತದೆ. ಈ ಸಾಗುವಿಕೆ ತಾಳ್ಳೆಯಿಂದ, ಆಸಕ್ತಿಯಿಂದ, ತಲುಪಲೇಬೇಕೆಂಬ ಇಚ್ಛಾ ಶಕ್ತಿಯಿಂದ ಸಾಗಿದಾಗ ಖಂಡಿತವಾಗಿ ಗುರಿಯನ್ನು ತಲುಪುತ್ತೇವೆ. ಈ ಪ್ರಯಾಣ ಕೇವಲ ದಾರಿಯನ್ನು ಸಾಗಲು ಮಾತ್ರವಲ್ಲ ನಮ್ಮ ಬದುಕಿನ ಪ್ರಯಾಣವನ್ನು ಮಾಡಲು ಈ ಎಲ್ಲ ಅಂಶಗಳೂ ಅಗತ್ಯ. ಹುಟ್ಟಿನಿಂದ ಸಾಯುವವರೆಗಿನ ಈ ಜೀವನದ ಪ್ರಯಾಣ ಎಲ್ಲಕಡೆಯಲ್ಲಿಯೂ ಒಂದೇ ತೆರನಾಗಿರುವುದಿಲ್ಲ ಅಲ್ಲದೇ ನೇರವೇ ಆಗಿರುವುದಿಲ್ಲ. ಅಲ್ಲಲ್ಲಿ ನೇರವಾಗಿದ್ದರೂ ಅಲ್ಲಲ್ಲಿ ಅನೇಕ ತಿರುವುಗಳನ್ನು ಪಡೆಯುತ್ತದೆ. ಬದುಕಿನ ನೋವುಗಳು, ಸಮಸ್ಯೆಗಳು, ಸವಾಲುಗಳು, ಅವಮಾನಗಳು, ಚಿಂತೆಗಳು, ಸೋಲುಗಳೆಂಬ ಈ ತಿರುವುಗಳಲ್ಲಿ ಬಹಳ ಜಾಗ್ರತೆಯಿಂದ ಪಯಣಿಸಬೇಕಾದ ಜವಾಬ್ದಾರಿ ನಮ್ಮ ಮೇಲೆಯೇ ಇದೆ. ಕಿಂಚಿತ್ ಜಾಗ್ರತೆ ತಪ್ಪಿದರೂ ವಿಫಲತೆ ಯೆಂಬ ಕಂದಕಕ್ಕೆ, ಬೀಳುತ್ತೇವೆ ಅಲ್ಲದೇ ದಾರಿಯಲ್ಲಿ ಮುಂದೆ ತೊಡಕುಗಳಿವೆ ಎಂದು ಹೆದರಿ ಹಿಂದೆ ತಿರುಗಿ ಬರುವುದಾಗಲಿ,ಅಲ್ಲಿಗೇ ಪಯಣವನ್ನು ನಿಲ್ಲಿಸುವುದಾಗಲಿ, ಮಾಡಬಾರದು. ಸಹಿಸಿ ಮುನ್ನಡೆಯಬೇಕು. ಯಾಕೆಂದರೆ ಜೀವನ ಎಂದಿಗೂ ತನ್ನ ಹಿಂದಕ್ಕೆ ಸರಿಯುವುದಿಲ್ಲ. ಜೀವನ ಸಾಗುವುದು ಮುಂದಕ್ಕೆ ಮಾತ್ರ. ಅದು ಭೂತಕಾಲದೊಂದಿಗೆ ತಂಗುವುದಿಲ್ಲ. ಹಾಗಾಗಿ ಆತ್ಮವಿಶ್ವಾಸದಲ್ಲಿ ತಿರುವುಗಳನ್ನು ದಾಟಿ ಹೋಗಬೇಕು. ಆತ್ಮ ಇಚ್ಛಾಶಕ್ತಿ ಹೇಗಿರಬೇಕೆಂದರೆ, ವಿಜ್ಞಾನಿಗಳು ಕೋಟಿ ಹಣ ಖರ್ಚು ಮಾಡಿ ಉಡಾಯಿಸಿದ ರಾಕೆಟ್ ಒಂದುವೇಳೆ ವೈಫಲ್ಯ ಹೊಂದಿ ಆಕಾಶದಲ್ಲಿ ಸುಟ್ಟು ಭಸ್ಮವಾದರೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಪುನಃ ಯತ್ನಿಸುವ ವಿಜ್ಞಾನಿಗಳ ಆತ್ಮವಿಶ್ವಾಸ ಎಲ್ಲರಲ್ಲಿರಬೇಕು.
ಬದುಕಿನ ಪ್ರತಿಯೊಂದು ಸೋಲಿಗೂ ಕರ್ಮವನ್ನು , ಹಣೆಬರೆಹವನ್ನು ದೂಷಿಸದೇ ಸೋಲನ್ನು ಗೆಲ್ಲುವ ಮಾನಸಿಕ ಸ್ಥೈರ್ಯ ನಮ್ಮಲ್ಲಿದ್ದಾಗ ಮಾತ್ರ ಬದುಕಿನ ತಿರುವುಗಳನ್ನು ಜಯಿಸಬಹುದು. ಈ ಎಲ್ಲ ತಿರುವುಗಳಿಗೆ ದೃಢಚಿತ್ತ ಉತ್ತರವಾಗಬಲ್ಲುದು.ತಿರುವುಗಳು, ತೊಡಕುಗಳು ಬಂದಾಗ ಅವು ನಮ್ಮನ್ನು ಜಾಗ್ರತ ಗೊಳಿಸಿ, ಬದುಕನ್ನು ಹೊಳಪಾಗಿಸುವಂತಹುವೆಂದು ತಿಳಿದಾಗ ಬದುಕಿನ ಪ್ರಯಾಣದಲ್ಲಿ ಖುಷಿ ಇರುತ್ತದೆ.
ಇಚ್ಛಾಶಕ್ತಿಯ ಕೊರತೆಯಿಂದ ಹಿಡಿದ ಕೆಲಸವನ್ನು ಅರ್ಧಕ್ಕೇ ನಿಲ್ಲಿಸುವವರನ್ನು ಕಾಣುತ್ತೇವೆ, ತಿರುಗಳಿಗಂಜಿ ಆತ್ಮಹತ್ಯೆಯನ್ನು ಮಾಡಿಕೊಂಡು ಜೀವನವನ್ನೇ ಕೊನೆಯಾಗಿಸಿಕೊಂಡವರನ್ನೂ ಕಾಣುತ್ತೇವೆ. ಆದರೆ ಸತ್ತು ಸಾಧಿಸಲು ಏನಿದೆ? ಈಸಬೇಕು ಇದ್ದು ಜಯಿಸಬೇಕು ಎಂಬ ದಾಸೋಕ್ತಿಯಂತೆ ಜಯಿಸಲು ಆತ್ಮವಿಶ್ವಾಸವೇ ತಳಹದಿ. ತಿರುವುಗಳಲ್ಲಿ ಅರಿವಿನಿಂದ ಹೆಜ್ಜೆ ಹಾಕಿದಾಗ ಜೀವನ ಸಾಫಲ್ಯವನ್ನು ಕಾಣುತ್ತದೆ.
ತಿರಸ್ಕಾರದ ಮಾತುಗಳನ್ನೇ ಯಶಸ್ಸಿಗೆ ಮೆಟ್ಟಿಲಾಗಿಸಬೇಕು:
ಜೀವನದಲ್ಲಿ ಒಳ್ಳೆಯದನ್ನು ಮಾಡುವಾಗ ಹಲವುರೀತಿಯ ಅಡ್ಡಿ ಆತಂಕಗಳು ಎದುರಾಗುತ್ತವೆ. ಅಪಥ್ಯವಾದ ಮಾತುಗಳು ನಮ್ಮ ಕಿವಿಗೆ ಬೀಳುತ್ತವೆ. ಆದರೆ ಅವುಗಳನ್ನು ಮೌನವಾಗಿಯೇ ಎದುರಿಸಿ ನಮ್ಮ ಕಾರ್ಯದಲ್ಲಿ ನಾವು ಮಗ್ನರಾಗಿರಬೇಕು. ಉದಾಹರಣೆಗೆ ಚೆಸ್ ನ ವಿಶ್ವದ ನಂಬರ್ ಒನ್ ಆಟಗಾರ ಮಾಗ್ನಸ್ ರವರನ್ನು ನಮ್ಮ ಭಾರತದವರಾದ ಅಪ್ರತಿಮ ಚೆಸ್ ಆಟಗಾರ ಗುಕೇಶ್ ರವರ ಬಗ್ಗೆ ಕೇಳಿದಾಗ “ಆತನೊಬ್ಬ ದುರ್ಬಲ ಆಟಗಾರ” ಎಂದರಂತೆ ಮಾಗ್ನಸ್ .
ಇಲ್ಲಿ ಮಾಗ್ನಸ್ ಕಾರ್ಲೆಸನ್ ವರು ಉತ್ತಮ ಆಟಗಾರರಾದರೂ ಬೇರೆಯವರ ಬಗ್ಗೆ ಅವರು ತಾಳಿರುವ ತಿರಸ್ಕಾರ ಬುದ್ಧಿ ಸರಿಯಲ್ಲ ಅಲ್ಲವೇ? ಆದರೆ ಅವರ ಈ ಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ನೀಡದ ಗುಕೇಶ ತಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಹಾಲಿ ವಿಶ್ವ ಚಾಂಪಿಯನ್ ರವರನ್ನು ಸೋಲಿಸಿದರು. ಇದರಿಂದ ತಿಳಿಯುವುದೇನೆಂದರೆ ಅವಮಾನವೆಂಬ ತಿರುವನ್ನು ಗುಖೇಶ್ ಸಮರ್ಥವಾಗಿ, ಮೌನದಿಂದ, ತಮ್ಮ ಇಚ್ಛಾ ಶಕ್ತಿಯಿಂದ ಎದುರಿಸಿ ವಿಜಯಿಯಾದರು. ಇಂಥ ಅದೆಷ್ಟೋ
ವಿಜಯಶಾಲಿಗಳ ಕತೆ ಕೇಳುತ್ತೇವೆ. ಪರರ ಟೀಕೆಗಳನ್ನೇ ತಮ್ಮ ಯಶಸ್ಸಿನ ಮೆಟ್ಟಿಲಾಗಿಸಿಕೊಂಡು ಸಾಧಿಸಿ ತೋರಿದ ಅವರೆಲ್ಲರಲ್ಲೂ ಪ್ರಬಲ ಆತ್ಮವಿಶ್ವಾಸವಿದೆ.
ಛಲದಲ್ಲಿ ತಿರುವುಗಳನ್ನು ದಾಟುವುದೇ ಸಾರ್ಥಕ ಬದುಕು
ಬಡತನದಲ್ಲಿ ಬೆಳೆಯುತ್ತಿದ್ದ ಸುಮಾಳಿಗೆ, ಓದಿನಲ್ಲಿ ತೀವ್ರ ಆಸಕ್ತಿ. ಓದಿ ಏನನ್ನಾದರೂ ಸಾಧಿಸಬೇಕೆಂಬ ಅವಳ ಛಲವನ್ನು ವಿಧಿ ಕೂಡ ಸಹಿಸದಾದನೋ ಎಂಬಂತೆ, ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಳು. ಇನ್ನು ಓದೆಂಬುದು ಮರೀಚಿಕೆಯಾಯಿತು. ಆದರೂ ಓದುವ ಆಸೆ ಮಣ್ಣಾಗಲಿಲ್ಲ. ಅವರಿವರ ಮನೆಗೆಲಸ
ಮಾಡಿ ಅವಳ ತಾಯಿ ಇವಳನ್ನು ಓದಿಸಿದಳು. ಆದರೆ ಪದವಿಯ ಹಂತದಲ್ಲಿ ಪರೀಕ್ಷೆಯ ಸಮಯದಲ್ಲಿ ತೀವ್ರ ಜ್ವರದಿಂದ ಬಳಲಿದಳು. ಪರೀಕ್ಷೆ ಬರೆಯಲಾಗದಿದ್ದುದಕ್ಕೆ ಮನಸ್ಸಿನಲ್ಲಿ ತುಂಬಾ ನೊಂದುಕೊಂಡಳಾದರೂ ಮತ್ತೆ ಪರೀಕ್ಷೆ ಬರೆದು ವಿಶಿಷ್ಠ ಶ್ರೇಣಿಯಲ್ಲಿ ಪಾಸಾಗಿ ಮುಂದೆ ಯುಪಿಎಸ್ ಸಿ ಪರೀಕ್ಷೆ ಬರೆದು ಉನ್ನತ ಅಧಿಕಾರಿಯಾದಳು.
ಹೀಗೆ ಸುಮಾಳು ಬದುಕಿನಲ್ಲಿ ಬಂದ ಅನೇಕ ತಿರುವುಗಳನ್ನು ದಾಟಿ ಛಲದಿಂದ ಗುರಿಯನ್ನು ಸಾಧಿಸಿದಳು.
ಆದ್ದರಿಂದ ಬಾಳಿನ ತಿರುವುಗಳನ್ನು ದೃಢಚಿತ್ತದಿಂದ ದಾಟಿ ಮುನ್ನೆಡೆದಾಗ ಮಾತ್ರ ಸಾರ್ಥಕತೆಯನ್ನು ಪಡೆಯಬಹುದು.
ಶುಭಲಕ್ಷ್ಮಿ ಆರ್ ನಾಯಕ



