ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್.ಸಿದ್ಧರಾಜು ಆ ಭಾಗದಲ್ಲಿ ಹೆಸರುವಾಸಿಯಾಗಿರುವ ತಂಬೂರಿಪದ ಕಲಾವಿದರು. ಜನಪದ ಕಾವ್ಯವನ್ನು ರಾತ್ರಿಯಿಡಿ ತಂಬೂರಿ ನುಡಿಸಿಕೊಂಡು ಹಾಡುವ ಪ್ರತಿಭಾವಂತರು.  ಇವರ ತಂದೆ ದಿವಂಗತ ಕೆ.ಬಿ.ರಾಚಯ್ಯ ಕೂಡ ಜನಪದ ಹಾಡುಗಾರರಾಗಿ ಆಕಾಶವಾಣಿಯ ಎ-ಗ್ರೇಡ್ ಕಲಾವಿದರಾಗಿದ್ದರು. ಹಾಡುಗಾರಿಕೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದಿರುವ ಸಿದ್ಧರಾಜು ಕೂಡ ಆಕಾಶವಾಣಿ ಎ-ಗ್ರೇಡ್ ಕಲಾವಿದರು. ಕಳೆದ ೪೨ ವರ್ಷಗಳಿಂದ ಮೃತರ ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ ಉತ್ಸವಗಳಲ್ಲಿ ಜನಪದ ಕತೆ ಕಾವ್ಯಗಳನ್ನು ಹಾಡಲು ಹೋಗುತ್ತಾರೆ.  ೩ನೇ ತರಗತಿ ಅಷ್ಟೇ ಓದಿದ್ದರೂ ತಮ್ಮ ಮಸ್ತಕದಲ್ಲಿ ಪುಸ್ತಕಕ್ಕಿಂತಲೂ ಹೆಚ್ಚಾದ ಜನಪದ ಸಾಹಿತ್ಯ ತುಂಬಿಕೊಂಡಿದ್ದಾರೆ.  ಇವರು ಸುಮಾರು ೧೫ಕ್ಕೂ ಹೆಚ್ಚಿನ ಕತೆಗಳನ್ನು ತಾಳ ತಂಬೂರಿಗೆ ತಕ್ಕಂತೆ ಹಾಡುವರು. ಇವರು ಹಾಡಿಕೊಂಡು ಬಂದಿರುವ ಕಥೆಗಳು ಮಂಟೇಸ್ವಾಮಿ ತಂಬೂರಿ ಕಥೆ, ರಾಜ ಸತ್ಯವ್ರತ, ಬಣಜಿ ಹೊನ್ನಮ್ಮ,  ದೊಡ್ಡಬಸವಣ್ಣನ ಕತೆ, ಅಣ್ಣತಂಗಿ ಕಥೆ, ನಲ್ಲತಂಗಿ ಕಥೆ, ಕುಂತಿ ಪದ, ಮುಡುಕುತೊರೆ ಮಲ್ಲಪ್ಪ, ಅರ್ಜುನ ಜೋಗಿ, ಬಾಲ್ನಾಗಮ್ಮ,  ಮೈದಾಲರಾಮ, ನಿಂಗರಾಜಮ್ಮ. ಚೆನ್ನಿಗರಾಯ, ಕಾಳಿಂಗರಾಜನ ಕಥೆ  ಪಿರಿಯಾಪಟ್ಟಣ ಕಾಳಗ.. ಹೀಗೆ ಜನಪದ ಕಥೆ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ಮೈಗೂಡಿಸಿಕೊಂಡಿದ್ದಾರೆ.

ಇಷ್ಟೂ ಕಥೆ ಹಾಡುಗಳನ್ನು ಕಲಿತಿರುವುದು ಇವರ ತಂದೆಯವರಿಂದ. ಜನಪದ ಹಾಡುವಾಗ ಇವರು ತಾಳ ತಂಬೂರಿ ಡಿಕ್ಕಿ ದಂಬ್ಡಿ, ಕಂಬ್ಚಿ ಜಾರ್ಲಿ ಚಿಟಗದಾಳ ಬಳಸಿಕೊಂಡು ರಾಗತಾಳಗಳಿಗೆ ಹೊಂದಿಸಿ ಹಾಡುವರು. ಪಿ.ನಾಗರತ್ನಮ್ಮ ಮಳವಳ್ಳಿ ಇವರ ಸಂಪಾದಿತ  ಮಂಟೇಸ್ವಾಮಿ ಜನಪದ ಕಾವ್ಯ ಕೃತಿಗೆ ಇವರಿಂದ ಹಾಡಿಸಿ ಹೊಸ ಕಾವ್ಯ ಸಂಗ್ರಹಿಸಿದ್ದಾರೆ. ‘ಈವರೆವಿಗೆ ಇವರು ಹಾಡಿರುವ ಕಥೆಯಲ್ಲಿ ಎಲ್ಲರೂ ಹಾಡುವ ಕತೆ ಮಾತ್ರ ಇತ್ತು. ಈಗ ಮಂಟೇಸ್ವಾಮಿಯವರ ಜೀವನಯಾತ್ರೆಯ ಪ್ರತಿಯೊಂದು ಸ್ಥಳ, ಪ್ರತಿಯೊಂದು ಜನರ ಬಗ್ಗೆ ಪದ ಕಟ್ಟಿ ಹಾಡಲಾಗಿರುತ್ತದೆ. ನಾನು ಹೊಸ ಕಥೆಯನ್ನು ಹೇಳುವಾಗ ಅವರಿಗೆ ತುಂಬಾ ಕುತೂಹಲ. ಅಷ್ಟೇ ಸುಶ್ರಾವ್ಯವಾಗಿ ಹಾಡಿರುತ್ತಾರೆ. ಸಿದ್ಧರಾಜುರವರ ಜೊತೆಗೆ ಹಿಮ್ಮೇಳ ಕಲಾವಿದರು ನೀಲಿಸಿದ್ದಯ್ಯ, ರಾಚಯ್ಯ ಇವರು ಸಹ ಅಷ್ಟೇ ರಾಗವಾಗಿ ಮನತುಂಬಿ ಹಾಡಿರುತ್ತಾರೆ. ನಾನು ರಚಿಸಿರುವ ಧರೆ ಕಂಡ ಧರ‍್ಮಗುರು ಪುಸ್ತಕದಲ್ಲಿರುವ ಸ್ಥಳ ಮಾಹಿತಿಯನ್ನು ಹೇಳಿದಾಗ ಅವರು ರಾಗ ಕಟ್ಟಿ ತಮ್ಮ ತಾಳ ತಂಬೂರಿಗೆ ತಕ್ಕಂತೆ ಹಾಡಿನ ದಾಟಿಗೆ ಹೊಂದಿಕೊಂಡಂತೆ ಕೆಲವು ಕಡೆ ಉದಾಹರಣೆಗೆ ರಾಜಕ್ಕ ಕಾಳಮ್ಮ ಇಂತ ಕಾಲ್ಪನಿಕ ಹೆಸರು ಸೇರಿಸಿಕೊಂಡು ಹಾಡಿದರು.

ಇದು ನಿಜವಾಗಿಯೂ ಒಬ್ಬ ಕಲಾವಿದನ ಚತುರತೆ ಎನಿಸಿತು ಎಂದು ನಾಗರತ್ನಮ್ಮ ಶ್ಲಾಘಿಸಿದ್ದಾರೆ.  ಗುಂಡ್ಲುಪೇಟೆ ಶಿಕ್ಷಕರ ಭವನದಲ್ಲಿ ದಿ.೧೩-೩-೨೦೨೩ರಂದು ಮಂಟೆಸ್ವಾಮಿ ಜಾನಪದ ಕಾವ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ತಾ. ಕಸಾಪ ಮತ್ತು ತಾವು ಅಧ್ಯಕ್ಷರಾಗಿರುವ ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆಯಿಂದ ಸನ್ಮಾನಿಸಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು ಪುತ್ತೂರು ದ.ಕ. ೨೦೧೬ರ ಅಕ್ಟೋಬರ್ ೧೫,೧೬ರಂದು ಏರ್ಪಡಿಸಿದ ಜಾನಪದ ಉತ್ಸವದಲ್ಲಿ ಕಲಾರಶ್ಮಿ ಸಮ್ಮಾನ ನೀಡಿದೆ. ಗುಂಡ್ಲುಪೇಟೆಯಲ್ಲಿ ೨೦೨೨ರಲ್ಲಿ ಕೆಲವು ಸಂಘಸಂಸ್ಥೆಗಳು ೭೫ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಂಟೇಸ್ವಾಮಿ ನೀಲಗಾರ ಪ್ರಶಸ್ತಿ ನೀಡಿವೆ. ಇದೇ ವರ್ಷ ಮಂಠೆಸ್ವಾಮಿ ಮಠ ಮಳವಳ್ಳಿ ಅಡಿಹೊನ್ನಾಯನಕನಹಳ್ಳಿ ಶ್ರೀಕ್ಷೇತ್ರ ಕಪ್ಪಡಿ ಜಾತ್ರೆಯಲ್ಲಿ ಪ್ರಶಸ್ತಿ ಪತ್ರ ಸಂದಿದೆ.  ಇವರ ತಂಬೂರಿ ಪದ ಗಾಯನ ಸಾಧನೆ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಬೀದರ್‌ನ ಚನ್ನಬಸಪ್ಪ ಪಟ್ಟದೇವರ ರಂಗಮಂದಿರದಲ್ಲಿ ದಿ.೧೫-೩-೨೦೨೫ರಂದು ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸಿದ್ದರಾಜುರವರೇ, ನೀವು ಈವರೆಗೆ ಎಷ್ಟು ಕಾರ್ಯಕ್ರಮ ನೀಡಿರುವಿರಿ ಎಂದು ನಾನು ಕೇಳಿದೆ. ಐದು ಸಾವಿರ ಆಗಿರಬಹುದು, ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಬೇಕು ಎಂದರು. ಹಾಕಿ ಶುಭವಾಗಲಿ ಎಂದೆ.
———————————————————————————————————–

About The Author

Leave a Reply

You cannot copy content of this page

Scroll to Top