ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಕೊಟಗಿ
ಗಜಲ್


ಸೂರ್ಯಕಾಂತಿ ಬೆಳಕಿನರಸನ ಅರಸಿ ಹೊರಳುವುದು ವಿಸ್ಮಯ
ನೈದಿಲೆಯದು ಕೌಮುದಿಯಲಿ ಮಿಂದು ಅರಳುವುದು ವಿಸ್ಮಯ
ಇನಿಯನ ಮೈಗಂಧದ ಘಮಲದುವೇ ನವಿರಾದ ರೋಮಾಂಚನ
ಪನ್ನಗವು ಕೇತಕಿಯ ಪರಿಮಳಕೆ ಸೋತು ಕೆರಳುವುದು ವಿಸ್ಮಯ
ಯುಗಳ ಗೀತೆಗೆ ಮಧುವಂತಿರಾಗದ ಸಂಯೋಜನೆಯ ಸಿಂಗಾರ
ಬಂಡುಂಬುವ ದುಂಬಿ ಸುಮವ ಮುದ್ದಿಸಿ ತೆರಳುವುದು ವಿಸ್ಮಯ
ಹೃದಯವೆರಡು ಮಿಡಿವ ಭಾವ ಒಂದಾದ ಚಿರನೂತನ ಚಣವಿದು
ವೀಚಿಯು ಅಬ್ಧಿಯ ಆಲಿಂಗನಕೆ ಮತ್ತೇ ಮರಳುವುದು ವಿಸ್ಮಯ
ರಮಣನು ಕಾಣದಿರಲು ಅರಘಳಿಗೆ ಕಾಡುವುದು ವಿರಹವೇದನೆ
ವಿಜಿಯ ಕಾತರಕೆ ಯುಗವು ಕ್ಷಣವಾಗಿ ಉರುಳುವುದು ವಿಸ್ಮಯ.
———————————————————————————–
ವಿಜಯಲಕ್ಷ್ಮಿ ಕೊಟಗಿ





Thanks sir
ಒಬ್ಬರನ್ನೊಬ್ಬರು ಮೀರಿಸುವ ಗಜಲ್ ಪ್ರತಿಭೆಗಳು