ಕಾವ್ಯ ಸಂಗಾತಿ
ಮಲ್ಲಿಕಾರ್ಜುನ ಪಾಲಾಮೂರ್
ಆಧುನಿಕ ವಚನಗಳು


*ಆಧುನಿಕ ವಚನಗಳು*
ಬದುಕಿದ್ದಾಗ ಬಳಿ ಬಾರದ ಜನ ಸತ್ತಾಗ ಹಾರ ಹಾಕುವರಯ್ಯಾ
ಸೋತಾಗ ಸಾಂತ್ವಾನ ಹೇಳದವರು, ಗೆದ್ದಾಗ ಕೈ ಕಲುಕುವರಯ್ಯಾ.
ಕೆಟ್ಟಾಗ ಕೈಹಿಡಿಯದವರು
ಸತ್ತಾಗ ಹೆಗಲು ಕೊಡುವರಯ್ಯಾ.
ಸಂಕಷ್ಟದಲ್ಲಿ ಜೊತೆಯಾಗದವರು ಸ್ಮಶಾನ ಯಾತ್ರೆಯಲ್ಲಿ ಕೂಡುವರಯ್ಯಾ
ಇಂತಹ ಜಗ ಜನರ ನೀತಿಗೆ ನಗುವನಯ್ಯಾ ನಮ್ಮ ಪಾಲಾಮೂರೇಶ್ವರ.
ದ್ವೇಷದಲ್ಲಿ ಪ್ರೀತಿ ಅರಳಿಸುವ
ಕಷ್ಟದಲ್ಲಿ ಕೈ ಹಿಡಿಯುವ
ಕಲ್ಲು ಮನಸ್ಸುಗಳನ್ನು ಹೂವಾಗಿಸುವ
ಸುಳ್ಳು ನುಂಗಿ ಸತ್ಯ ಹೇಳುವ
ಮಾತಿನಂತೆ ಕೃತಿ ಇರುವ
ಒಳ-ಹೊರಗೂ ಒಂದಾಗಿರುವರನ್ನು
ಎನಗೊಮ್ಮೆ ತೋರಾ ಪಾಲಾಮೂರೇಶ್ವರ.
ಕಳೆದು ಹೋಗಬೇಕು ಪ್ರೀತಿಯಲ್ಲಿ ದ್ವೇಷದಲ್ಲಲ್ಲ.
ಉಳಿದು ಬದುಕಬೇಕು ನಂಬಿಕೆಯಲ್ಲಿ, ನಂಬಿಕೆ ದ್ರೋಹದಲ್ಲಲ್ಲ .
ಬಾಳಿ ಬದುಕಬೇಕು ಭರವಸೆಯಲ್ಲಿ, ಭ್ರಮಲೋಕದಲ್ಲಲ್ಲ. ಕೂಡಿ ಬಾಳಬೇಕು ಕುಸಲೋಪರಿಯಲ್ಲಿ, ಕಲ್ಮಸದಿಂದಲ್ಲ.
ಕಾಡದೇ, ಬೇಡದೇ ಬದುಕುವವನು
ನಿಜ ಶರಣ ಎಂದ ನಮ್ಮ ಬಸವಪ್ರೀಯ ಪಾಲಾಮೂರೇಶ್ವರ.
ಆಪತ್ತಿಗೆ ನೆರವಾಗದ ನೆಂಟರು,
ಕಷ್ಟಕ್ಕೆ ಆಗದ ಮಕ್ಕಳು,
ಬಡತನ ಹಂಚಿಕೊಳ್ಳದ ಪ್ರೀತಿ,
ತಮಾಷೆ ಸಹಿಸದ ಸ್ನೇಹ,
ಬೆಳವಣಿಗೆ ಬಯಸದ ಬಂಧುಗಳು,
ಗೆದ್ದರೆ ಅಸೂಹೆ ಪಡುವ ವೈರಿಗಳು,
ಬಿದ್ದಾಗ ನಗುವ ನೆರೆಹೊರೆಯವರು ಇದ್ದರೆಷ್ಟು ಹೋದರೆಷ್ಟು ಎಂದ ನಮ್ಮ ಬಸವಪ್ರಿಯ ಪಾಲಾಮೂರೇಶ್ವರ
ಊರಲ್ಲಿ ಬೇವಿನ ಮರಗಳು ಕಡಿಮೆಯಾಗಿವೆ, ಮನಸ್ಸಿನಲ್ಲಿ ಕಹಿ ಭಾವನೆಗಳು ಹೆಚ್ಚಾಗಿವೆ.
ಸಿಹಿ ಮಾತು ಕಡಿಮೆಯಾಗಿದೆ, ಸಕ್ಕರೆ ಕಾಯಿಲೆ ಹೆಚ್ಚಾಗಿದೆ.
ಕಷ್ಟಗಳಲ್ಲಿ ಬೆನ್ನಿಗೆ ಬೆನ್ನು ಕೊಡುವರು ಕಡಿಮೆಯಾಗಿದ್ದಾರೆ,
ಚೂರಿ ಹಾಕುವವರು ಹೆಚ್ಚಾಗಿದ್ದಾರೆ.
ಹುಂಜದ ಕೂಗು ಕಡಿಮೆಯಾಗಿದೆ, ಜಂಬದ ಕೋಳಿಗಳ ಮಾತೇ ಹೆಚ್ಚಾಗಿದೆ.
ಕೆಡುಕಿನ ಗಾಳಿ ಬೀಸುತ್ತಿದೆ,
ಒಲವಿನ ಅಲೆ ಏಳಬೇಕಾಗಿದೆ ಎಂದ ನಮ್ಮ ಬಸವಪ್ರಿಯ ಪಾಲಾಮೂರೇಶ್ವರ.
ಮಲ್ಲಿಕಾರ್ಜುನ ಪಾಲಾಮೂರ್




Superb