ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೃದಯಾಘಾತ

ಈ ಶಬ್ದ ಕಿವಿಗೆ ಬಿದ್ದಾಗಲಂತೂ ಒಂದು ಕ್ಷಣ ಮೌನ ಆವರಿಸುತ್ತದೆ. ನಮ್ಮ ಎದೆಯ ಗೂಡಿಗೆ ಕಣ್ಣುಗಳು ಕಣ್ಗಾವಲಾಗಿ ನಿಂತು ಬಿಡುತ್ತವೆ. ಬದುಕು ಇಷ್ಟು ಚಿಕ್ಕದಾ? ಎಂಬ ಪ್ರಶ್ನೆ ಮೂಡದಿರದು.ಜೀವನ ಪರ್ಯಂತ ಕಷ್ಟಗಳನ್ನು ಎದುರಿಸಿ,ಹೊಸ ಜಗತ್ತಿಗೆ ದಾಪುಗಾಲು ಹಾಕಿ ಯಶಸ್ಸು ಪಡೆದ ಹಿರಿಯರು ಕಣ್ಮುಂದೆ. ಅವರ ಆಯಸ್ಸು ಸರಿಸುಮಾರು ನೂರರ ಹತ್ತತ್ತಿರ ಬಂದಿರುತ್ತೆ.ಆದರೂ,ಅವರು ಜೀವನವನ್ನು ಯಾವುದೇ ಆಡಂಬರವಿಲ್ಲದೆ ಕಳೆದವರು.ದೇಹವನ್ನು ಕಬ್ಬಿಣದಂತೆ ಬಲಿಷ್ಠ ಪಡಿಸಿ, ತುಕ್ಕುಹಿಡಿಯದಂತೆ ಕಾಪಾಡಿಕೊಂಡವರು.ತೀಕ್ಷ್ಣ ದೃಷ್ಟಿಯಿಂದ ಕನ್ನಡಕದಿಂದ ದೂರಿದ್ದವರು.ಇಷ್ಟೆಲ್ಲ ನಮ್ಮ ಹಿರಿಯರು ಬಾಳಿ ಬದುಕಿದ ಇತಿಹಾಸವನ್ನು ಓದಿದಾಗಲೂ,ಆಶ್ಚರ್ಯದ ಹೊನಲು ನಮ್ಮ ನಡುವೆ ಟಾರ್ಚ ಬೆಳಕಿನಂತೆ.ಮನೆಯಲ್ಲಿ ಈಗಲೂ ಶತಕ ಬಾರಿಸಿದ ಹಿರಿಯರಿದ್ದರೆ ನಮ್ಮ ಪುಣ್ಯ.ಆದರ್ಶದ ಜೀವನ ಶೈಲಿಯಲ್ಲಿ ಜೀವಿಸುವ ಹಕ್ಕು ಎಲ್ಲರದು ಕೂಡ.
ನಮ್ಮ ಆಹಾರ ಪದ್ದತಿಯು ಆಧುನಿಕ ಕಾಲ ಘಟ್ಟಕ್ಕೆ ಬಂದು ನಿಂತಿದೆ. ಜೀವನ ಕ್ರಮವು ತೋರಿಕೆಯ ಬೆನ್ನು ಹತ್ತಿದೆ.ಕಿಸೆಯಲ್ಲಿ ಹತ್ತು ರೂಪಾಯಿ ಇರದಿದ್ದರೂ,ಸಾವಿರ ರೂಪಾಯಿಯ ಬಿಲ್ಡಪ್!. ಅದನ್ನು ಪೂರೈಸಲು ಅಡ್ಡ ದಾರಿ. ಜಂಕ್ ಫುಡ್ ಹಾವಳಿ,ಅತಿಯಾದ ಅವೈಜ್ಞಾನಿಕ ವ್ಯಾಯಾಮ.ಅನಿಯಮಿತ ನಿದ್ರೆ,ಊಟ.ಕೆಲಸದ ಒತ್ತಡ ಎಲ್ಲವೂ ಒಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಿದಾಗ,ನಿಭಾಯಿಸುವ ಕ್ಷಮತೆಯನ್ನು ಕಳೆದುಕೊಂಡು ಒದ್ದಾಡುವ ಸ್ಥಿತಿ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ದುಡ್ಡು ದುಡ್ಡು ಇದಿಷ್ಟೇ ಮಾತು.ದುಡ್ಡು ಬೇಕು ಅದರ ಹಿಂದೆ ಓಡುವ ಪ್ರತಿಯೊಬ್ಬರೂ ಹಣ ಗಳಿಸಿದ್ದಾರೆ.ನೆಮ್ಮದಿ ಕಳೆದುಕೊಂಡಿದ್ದಾರೆ.ಜೊತೆಗೆ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ. ಯಾರಿಗಾಗಿ ಈ ಧಾವಂತ!. ಸಮಾಜದಲ್ಲಿ ಮನೆ,ಅಂತಸ್ತು,ಬ್ಯಾಂಕ ಬ್ಯಾಲೆನ್ಸ ಮಾತ್ರ ಜೀವನವೆನ್ನುವ ಭ್ರಮೆಯಿಂದ ಹೊರಬರಲಾಗದ ಸ್ಥಿತಿಯಲ್ಲಿ ಬಂದು ನಿಂತಿದ್ದೆವೆ.ಇದೆಲ್ಲ ದೊಡ್ಡವರ ಜವಾಬ್ದಾರಿಗಳು.

ಇಂದು ಹೃದಯ ಸ್ತಂಭನ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತದೆ ಎಂಬ ಮಾತಿಗೆ ಬ್ರೇಕ್ ಹಾಕಿದೆ. ಹುಟ್ಟಿದ ಮಗುವಿನಿಂದ ವಯಸ್ಸಾದವರ ತನಕ ಯಾರಿಗೆ ಬೇಕಾದರೂ “ಹಾರ್ಟ ಅಟ್ಯಾಕ್ ” ಆಗಬಹುದೆಂಬುದು…ಅದರಲ್ಲೂ ಬಾಳಿಬದುಕಬೇಕಾದ ಯುವಕ/ ಯುವತಿಯರು / ಚಿಕ್ಕ ಮಕ್ಕಳು ಸಾವನ್ನಪ್ಪುತ್ತಿರುವ ಸಂಗತಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಕೋವಿಡ್ ಲಸಿಕೆಯ ಪ್ರಭಾವದಿಂದಾಗಿ ಹೀಗೆಲ್ಲ ಆಗಿರಬಹುದಾ ಎಂಬ ಉಹಾಪೂಹಗಳು.ಸರಣಿ ಆಘಾತಗಳು ಲಸಿಕೆಯ ಪ್ರಭಾವ ಅಲ್ಲ ಎನ್ನುವುದನ್ನು ಆರೋಗ್ಯ ಇಲಾಖೆ ತಿಳಿಸಿದೆ.ಹಾಗಿದ್ದ ಮೇಲೆ ಇದರ ಹಿಂದಿರುವ ವಿಷಯ..ನಮ್ಮ ಪ್ರತಿನಿತ್ಯದ ದಿನಚರಿ. ಫಿಟ್ನೆಸ್ ಹುಚ್ಚು,ಮೊಬೈಲ್ ಬಳಕೆ..ಆಹಾರ ಹೀಗೆ ಹತ್ತು ಹಲವಾರು ಕಾರಣಗಳು “ಹೃದಯಾಘಾತ ” ಸಂಭವಿಸಲು ಕಾರಣವಾಗಿದೆ.ಆಧುನಿಕ ಸಾಂಗತ್ಯ ವಿನಾಶದ ಅಂಚಿನಲ್ಲಿದೆ ಎಂಬುದನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ.
ಡಯಟ್ನ ಹುಚ್ಚು ಪ್ರಾಣಕ್ಕೆ ಸಂಚಕಾರವಾಗಿದೆ.
ನಮ್ಮ ಹೆಣ್ಣಜ್ಜಿ ತೊಂಬತ್ತರ ಆಸಪಾಸು ಒಂದ ದಿನಾನು ನೆಲ ಹಿಡಿದು ಮಲಗಿದವಳಲ್ಲ.ಗಂಡ ತೀರಿಹೋದ ಮೇಲೆ ಎಲ್ಲ ಮಕ್ಕಳಿಗೆ ಮದುವೆ ಮಾಡಿ ಬಡತನದಲ್ಲೆ ಎಲ್ಲವನ್ನೂ ನಿಭಾಯಿಸಿ ಯಾವ ಗಂಡಸಿಗೂ ಕಮ್ಮಿಯಿಲ್ಲ ಎನ್ನುವಂತೆ ಬಾಳಿ ಬದುಕಿದವರನ್ನು ಮಕ್ಕಳು ಸಾಕುವಲ್ಲಿ ವಿಫಲರಾಗಿದ್ದು ದುರಂತ!. ಎಲ್ಲರಿಗೂ ತಮ್ಮ ಜೀವನದ ಚಿಂತೆ. ವಯಸ್ಸಾದವರನ್ನು ಹತ್ತಿರವಿಟ್ಟುಕೊಂಡು ಆರೈಕೆ ಮಾಡಲು ಆಸಕ್ತಿಯಿಲ್ಲದೆ…ಶಾಶ್ವತವಾಗಿ ಯಾರ ಜೊತೆಯು ಇರದೆ, ಸ್ವಾಭಿಮಾನಿಯಾಗಿ ಕೆಲಸ ಮಾಡುತ್ತಲೇ,ಯಾರಿಗೂ ಹೊರೆಯಾಗದೆ, ಆಸ್ಪತ್ರೆ ಸೇರದೆ ಉಸಿರು ನಿಲ್ಲಿಸಿದರು.ಹಿರಿಯರಿಗೆ ಭಾರವಾಗುವ ಮಕ್ಕಳು ಜಗತ್ತಿಗೆ ಬೇಕಾ? ಎಂಬ ಪ್ರಶ್ನೆ?.ಆಗೆಲ್ಲ ಒಂದೊತ್ತಿನ ಊಟ. ಕಷ್ಟ ಕೆಲಸ.ಹಣಗಳಿಸುವುದು ಕನಸಿನ ಮಾತು. ಉಳ್ಳವರ ಮಡಿಲಿಗೆ ಸಾಲಸೊಲಕ್ಕೆ ಹೊಲ ಮಾರಿ ಬೀದಿಗೆ ಬಂದ ಕುಟುಂಬಗಳು ಸಾಕಷ್ಟು. ಉಳಿಸುವುದು,ಗಳಿಸುವುದು ಅಷ್ಟು ಸುಲಭವಲ್ಲ.ಅಂತಹ ಸಮಯದಲ್ಲಿ ಗಟ್ಟಿಮುಟ್ಟಾಗಿ ಬಾಳಿದ್ದು ಆ ಶರೀರ,ಅದಕೆ ರೋಗರುಜಿನಗಳ ಕಾಟವಿರಲಿಲ್ಲ.ಮನುಷ್ಯ ಸಂಬಂಧಗಳ ಬಾಂಧವ್ಯದ ಕೊಂಡಿ ಗಟ್ಟಿಯಾಗಿಲ್ಲ. ಇಂದಿನ ಬದುಕಿನ ವೈಪರೀತ್ಯಗಳು ಅಂದರೆ ತಪ್ಪಿಲ್ಲ.

ಕೂಡು ಕುಟುಂಬಗಳು, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವವರು ಈಗಲೂ ಇದ್ದಾರೆ ಅಂದರೆ,ಎಲ್ಲೋ ಒಂದಿಷ್ಟು ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂದರ್ಥ.ನಾವೆಲ್ಲ ಮಹತ್ವ ಕೊಡುವ ಸಂಗತಿಗಳು ನಮ್ಮ ಸ್ವಾರ್ಥದ ವಿರುದ್ಧ ಧ್ವನಿಯೆತ್ತುವ ವಿಷಯ ವಸ್ತುಗಳಲ್ಲ.ಖರ್ಚು, ವೆಚ್ಚಗಳು ಮಧ್ಯಮ ವರ್ಗದ ಜನರಿಗೆ ಕಂಟಕಗಳು.ಕಾಯಿಲೆ,ಕಸಾಲೆಗಳಿಗೆ ಹಣಹೊಂದಿಸುವ ಹೊತ್ತಿನಲ್ಲಿ ಉಸಿರು ಚೆಲ್ಲುವ ಹಲವಾರು ಪ್ರಸಂಗಗಳು ಕಣ್ಮುಂದಿವೆ.ಭಾರ ಯಾರಿಗೆ ಯಾರು ಇಲ್ಲ..ವಯೋಸಹಜ ಸ್ಥಿತಿಗಳಿಗೆ ಅನುಸಾರವಾಗಿ ಕೈಜೋಡಿಸುವ ಕೆಲಸವಾಗಬೇಕಾಗಿದೆ.ಅದು ಒಂದೇ ದಿನಕ್ಕೆ ಪರಿಹಾರವಾಗುವ ಸಮಸ್ಯೆಯು ಅಲ್ಲ.ಆದರೆ ಚಿಂತೆ,ಚಿಂತನೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ವಿನಃ ಕಡಿಮೆಯಾಗಿಲ್ಲ.ತಿನ್ನುವ ಅನ್ನವೇ ಕಲಬೆರಕೆಯ ಹಾದಿ ಹಿಡಿದಿರುವಾಗ ಪರಿಶುದ್ಧವಾದ ಸಂಬಂಧ ಎಲ್ಲಿಂದ ಬರಬೇಕು?.ಎಲ್ಲರಿಗೂ ದಿಢೀರನೆ ಶ್ರೀಮಂತನಾಗಬೇಕು. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಾಗುರುವುದು ವಿಪರ್ಯಾಸ.ಕಾರು ಬಂಗಲೆ ದುಡ್ಡು ಇದ್ದರೆ ಸಾಕು ಎಂಬ ಭ್ರಮೆ ಇಂದಿನ ವಾಸ್ತವ.ಆದರೆ ಸತ್ತ ಮೇಲೆ ಯಾರ ಪಾಲಿಗೆ ಎಲ್ಲ?. ವಿಮಾನ ದುರಂತದಲ್ಲಿ ಕಣ್ಮರೆಯಾದ ಜೀವಗಳು ಎನೆಲ್ಲ ಕನಸು ಕಂಡಿದ್ದವು? ಊಟಕ್ಕೆ ಬಂದ ವಿದ್ಯಾರ್ಥಿಗಳು ಯಾವ ತಪ್ಪು ಮಾಡಿದ್ದವು? ಸಾವಿನ ಕವಚದಿಂದ ಅವರಾರು ಬದುಕುಳಿಯಲಿಲ್ಲ.ಗಳಿಸಿದ್ದು ಇನ್ನಾರಪಾಲಿಗೋ? ಇರುವಷ್ಟು ಸಮಯ ಬದುಕಿದ್ದೆ ಜೀವನ.

ಒಟ್ಟಾರೆಯಾಗಿ ಹೇಳುವುದಾದರೆ, ಜೀವನ ಕ್ರಮ ಹಳ್ಳ ಹಿಡಿದಿದೆ. ಯಾವ ಆಹಾರ ಬೇಡ ಅನ್ನುತ್ತಿದ್ದೆವೋ,ಅದನ್ನೇ ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವತ್ತ ಪುನಃ ಬದಲಾಗುತ್ತಿದ್ದೆವೆ.ಸಾವು ಯಾರ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆಯೋ ಗೊತ್ತಿಲ್ಲ..ಸಾವು ತಾನಾಗಿಯೇ ಬರುವ ಬದಲು ನಾವಾಗಿಯೇ ನಮ್ಮೆಡೆಗೆ ಬರುವಂತೆ ಮಾಡುತ್ತಿದ್ದೆವೆ. ಹಾಸನದ ಸರಣಿ ಅನಾಹುತಗಳು,ಮನಸ್ಸಿಗೆ ತೀವ್ರ ನೋವು. ಆರೋಗ್ಯ ಹಿಂದಿಗಿಂತ ಇಂದಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.ಮನುಷ್ಯನ ಜೀವಿತಾವಧಿಯ ನಿರೀಕ್ಷೆ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮಕ್ಕಳು ಅತೀವವಾಗಿ ಜೀವಹಾನಿ ಅನುಭವಿಸುತ್ತಿದ್ದಾರೆ.ಮೊಬೈಲ್ ಕೂಡ ಚಿಕ್ಕ ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ.ಮಾಧ್ಯಮಗಳು ಹಿತಮಿತವಾಗಿ ಬಳಸಿದರೆ ಮಾತ್ರ ಲಾಭ.ಆಹಾರ ಕ್ರಮ ನೈಸರ್ಗಿಕವಾಗಿ ದೊರೆಯುವ ಆಹಾರ ಧಾನ್ಯಗಳು,ತರಕಾರಿಗಳು,ಹಣ್ಣುಗಳು ಕಲಬೆರಕೆಯಾಗದೆ ದೊರೆತರೆ,ಸೇವಿಸಿದರೆ ಮಾತ್ರ ಆರೋಗ್ಯದಲ್ಲಾಗುವ ಏರಿಳಿತಗಳನ್ನು ತಡೆಗಟ್ಟಬಹುದು.ಅದು ಸಾಧ್ಯವಿಲ್ಲ ಬಿಡಿ.ಕೆಲವೇ ಕೆಲವು ಜನರು ಮಾತ್ರ ಕೈತೋಟದಲ್ಲಾಗುವ ರಾಸಾಯನಿಕ ಸಿಂಪಡಿಸದೆ ಸಾವಯುವ ಕೃಷಿ ಮಾಡಿ ಬದುಕುತ್ತಿದ್ದಾರೆ..ಉಳಿದ ತೊಂಬತ್ತು ಪ್ರತಿಶತ ಜನರು ಸೇವಿಸುವ ಆಹಾರ ನೈಸರ್ಗಿಕವಾಗಿಲ್ಲ…ಅದರಲ್ಲಿ ನಾವು ನೀವು
ಕೂಡ ಇರಬಹುದು.ಹೃದಯ ವಿದ್ರಾವಕ ಘಟನೆ ನಡೆದಾಗ ಸ್ಪಂದಿಸುವ ಹೃದಯದ ಬಡಿತ ಕಲಬೆರಕೆಯ ವಿಷವಸ್ತುವಿನಿಂದಾಗಿ ನರಳುವಂತಾಗಿದೆ.ಹೃದಯವೆಂದರೆ ಪ್ರೇಮಿಗಳ ಸೊತ್ತು.ಆದರೆ ಅದೇ ಹೃದಯ ಕಾಪಾಡಿಕೊಳ್ಳುವಲ್ಲಿ ನಾವು ಸೋತಿದ್ದೆವೆ..ನಮ್ಮ ಭಾವಿ ಭವಿಷ್ಯ ಮಕ್ಕಳು, ಅವರ ಹೃದಯ,ಇಡೀ ಶರೀರ ಆರೋಗ್ಯದಿಂದ ಇರಲು ಏನುಮಾಡಬೇಕೋ ಅದರ ಬಗ್ಗೆ ಚಿಂತಿಸುವುದು ಅನಿವಾರ್ಯ.. ಹಣ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹು ಮುಖ್ಯ.ಒಪ್ಪುತ್ತಿರಾ?.
ಶಿವಲೀಲಾ ಶಂಕರ್





ಹೌದು
ಹೌದು ಕರಾರುವಾಕ್ಕಾಗಿ ಇದೇ ಕಾರಣ ಎಂದು ಸದ್ಯಕ್ಕೆ ಕಾಣದಿದ್ದರು ನಮ್ಮ ಆಧುನಿಕ ಕಾಲದ ಜೀವನ ಶೈಲಿಯನ್ನು ಗುಣಾತ್ಮಕ ಗೊಳಿಸುವುದು,ಮಿತಿಗಳನ್ನು ಹಾಕಿ ಸ್ವಯಂ ಶಿಸ್ತಿನ ಬದುಕು ರೂಪಿಸಿಕೊಳ್ಳುವುದು ಅತಿಅವಶ್ಯಕವಾಗಿದೆ.
ಆರೋಗ್ಯ ಸಂಪತ್ತು ಬಹು ಮುಖ್ಯವೆಂದು ತಿಳಿದು ಎಲ್ಲರೂ ಸಾಗಿದರೆ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದು.
ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಉತ್ತಮ ಲೇಖನ. ಆರೋಗ್ಯ ದ ಮಹತ್ವವನ್ನು ತಿಳಿಸುವ ಪ್ರಯತ್ನ ಅಧ್ಭುತ.
ಮೇಡಂ ನಮಸ್ಕಾರಗಳು
ಲೇಖನ ತುಂಬಾ ಪ್ರಸ್ತುತವಾಗಿದೆ.
*ಶ್ರೀಮತಿ.ಮಂಜುಳಾ ರಾಮಡಗಿ*
*ಧಾರವಾಡ*
ಅತ್ಯುತ್ತಮ ಲೇಖನ
ಧನ್ಯವಾದಗಳು ಮೇಡಂ