ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತೋಟದ ಕೆಲಸಗಾರರ ಮಾತುಗಳನ್ನು ಕೇಳಿ ಸುಮತಿ ಚಿಂತೆಗೊಳಗಾದಳು. ಏನು ಮಾಡುವುದು ಎಂದು ಅವಳ ತಲೆಗೂ ಹೊಳೆಯಲಿಲ್ಲ. ಕೊನೆಗೆ ಬೆಳಗ್ಗೆ ತನ್ನ ಮನೆಯ ಕೆಲಸ ಎಲ್ಲವನ್ನು ಮುಗಿಸಿ ಪ್ರತಿಯೊಬ್ಬ ಕೆಲಸಗಾರರ ಮನೆಗೆ ಹೋಗಿ ಮಕ್ಕಳನ್ನು ದಿನವೂ ಕರೆದುಕೊಂಡು ಶಾಲೆಗೆ ಹೋಗುವುದು ಎಂದು ತೀರ್ಮಾನಿಸಿದಳು. ಅದು ಕೂಡ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ತೋಟದ ಕೆಲಸಗಾರರ ಒಂದು ಲೈನ್ ಮನೆಗಳು ಇರುವುದು ಹತ್ತಿರದಲ್ಲೇ ಆದರೂ ಇನ್ನೊಂದು ಸ್ವಲ್ಪ ಹೆಚ್ಚೇ ದೂರದಲ್ಲಿ ಇತ್ತು. ಮಳೆ ಇಲ್ಲದೆ ಇರುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರುವುದು ಕಷ್ಟವಿರಲಿಲ್ಲ. ಆದರೆ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ 24 ಗಂಟೆಯೂ ಸುರಿಯುವ ಮಳೆಗೆ ಲೈನ್ ಗಳಲ್ಲಿರುವ ತೋಟಗಾರರ ಮನೆಗಳಿಗೆ ಹೋಗಿ ಪುಟ್ಟ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರುವುದು ಬಹಳ ಕಷ್ಟದ ಕೆಲಸ. ಜೊತೆಗೆ ಮಳೆಗಾಲದಲ್ಲಿ ಜಿಗಣೆಗಳ ಕಾಟ ಕೂಡ ಇರುತ್ತದೆ. ದಾರಿಯಲ್ಲಿ ನಡೆಯುವಾಗ ಅವುಗಳು ತಮಗೆ ಅರಿವಿಲ್ಲದಂತೆಯೇ ಕಾಲುಗಳ ಮೇಲೆ ಹತ್ತಿಕೊಂಡು ಬಿಡುತ್ತದೆ. ರಕ್ತ ಕುಡಿದು ಕೆಳಗೆ ಬೀಳುವವರೆಗೂ ಅವುಗಳು ಬಿಗಿಯಾಗಿ ಅಂಟಿಕೊಂಡಿರುತ್ತವೆ. ಎಳೆದರೆ ಕೆಲವೊಮ್ಮೆ ಅವುಗಳ ಜೊತೆಯಲ್ಲಿ ಚರ್ಮ ಕಿತ್ತು ಬರುತ್ತದೆ. ಜಿಗಣೆ ಎಂದರೆ ಸುಮತಿಗೆ ತುಂಬಾ ಭಯ ಕೂಡ ಇತ್ತು. ಪ್ರತಿ ದಿನ ದೂರದಲ್ಲಿ ಇರುವ ಲೈನ್ ಮನೆಗಳಿಂದ ಮಕ್ಕಳನ್ನು ಕರೆದುಕೊಂಡು ನಂತರ ಹತ್ತಿರದಲ್ಲಿರುವ ಲೈನ್ ಮನೆಗಳ ಮಕ್ಕಳನ್ನು ಕರೆದುಕೊಂಡು ಬರುವುದು ಎಂದು ತೀರ್ಮಾನಿಸಿದಳು. ದಿನವೂ ಬೆಳಗ್ಗೆ ಬೇಗನೇ ಎದ್ದು ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ತನಗೂ ಹಾಗೂ ದೂರದ ಶಾಲೆಗೆ ಹೋಗುವ ಮಗಳಿಗೂ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ಕಟ್ಟಿ, ಮಗಳ ಜೊತೆ ಕುಳಿತು ತಿಂಡಿಯನ್ನು ತಿಂದು ಅವಳನ್ನು ಶಾಲೆಗೆ ಕಳುಹಿಸಿ ನಂತರ ತಾನು ಬುತ್ತಿಯನ್ನು ಅಮ್ಮ ಕೊಟ್ಟ ಚಂದದ ಬ್ಯಾಗಿನಲ್ಲಿ ತುಂಬಿಕೊಂಡು ದೂರದ ಲೈನ್ ಮನೆ ಕಡೆ ಹೊರಟಳು.

ಅಲ್ಲಿ ಹೋದರೆ ಎಂದಿನಂತೆ ಮಕ್ಕಳು ಟೀಚರಮ್ಮನನ್ನು ಕಂಡೊಡನೆ ಅಲ್ಲಲ್ಲಿ ಅವಿತು ಕುಳಿತರು. ಆ ಮಕ್ಕಳನ್ನು ಹುಡುಕಿ ಅವರನ್ನು ಪುಸಲಾಯಿಸಿ ಜೊತೆಗೆ ಕರೆದುಕೊಂಡು ಶಾಲೆಗೆ ಹತ್ತಿರದಲ್ಲಿ ಇದ್ದ ಲೈನ್ ಮನೆ ಕಡೆ ಹೆಜ್ಜೆ ಹಾಕಿದಳು.

ಅಲ್ಲಿಯೂ ಮಕ್ಕಳು ಟೀಚರಮ್ಮನನ್ನು ಕಂಡಾಗ ಮರೆಗಳಲ್ಲಿ ಅವಿತು ಕುಳಿತರು. ತನ್ನ ಜೊತೆಗೆ ಇದ್ದ ಸ್ವಲ್ಪ ದೊಡ್ಡ ಮಕ್ಕಳಿಗೆ ಹೇಳಿ ಆ ಮಕ್ಕಳನ್ನು ಹುಡುಕಿಸಿ ಕರೆದುಕೊಂಡು ಶಾಲೆಗೆ ಹೊರಟಳು. ಶಾಲೆಯ ದಾರಿಯಲ್ಲಿ ಸಾಗುತ್ತಿದ್ದಾಗ ರೈಟರ್ ಎದುರಾದರು. ಅವರಿಗೆ ತಾನು ವಂದಿಸಿ ಮಕ್ಕಳಿಗೂ ವಂದಿಸಲು ತಿಳಿಸಿದಳು. ಕಾರ್ ಶೆಡ್ಡನ್ನು ಮಾಲಿಯು ಗುಡಿಸಿ ಸ್ವಚ್ಛಗೊಳಿಸಿದ್ದರು. ಹಿಂದಿನ ದಿನ ಶಾಲೆ ಮುಗಿದ ನಂತರ ಕಪ್ಪು ಹಲಗೆಯನ್ನು ಸ್ವಚ್ಛಗೊಳಿಸಿದ್ದಳು. 

ಆದರೂ ಹಲಗೆಯ ಮೇಲೆ ದೂಳು ಇತ್ತು.

ಅದನ್ನೆಲ್ಲಾ ಒರೆಸಿ ಸ್ವಚ್ಛ ಮಾಡಿ ಪುನಹ ಮಕ್ಕಳಿಗೆ ಮೊದಲಿನಿಂದ ಅಕ್ಷರವನ್ನು ಬರೆದು ಕಲಿಸಿದಳು. ಮಕ್ಕಳು ಬರೆಯಲು ಬಹಳ ಉದಾಸೀನ ತೋರುತ್ತಿದ್ದರು. ಆಗ ಸುಮತಿ ತಾನೇ ಅವರ ಕೈಹಿಡಿದು ಬರೆಸಿದಳು. ಮಧ್ಯಾಹ್ನ ಮಕ್ಕಳ ಜೊತೆಗೆ ಕುಳಿತು ಊಟ ಮಾಡಿದಳು. ತಾನು ತಂದ ಬುತ್ತಿಯಿಂದ ಆಹಾರವನ್ನು ಹಂಚಿದಳು. ಟೀಚರ್ ಮಾಡಿದ್ದ ರುಚಿಯಾದ ಆಹಾರದ ಒಂದೊಂದು ತುತ್ತು ಎಲ್ಲರೂ ತಿಂದರು. ಆಟವನ್ನು ಆಡಿದರು. ಅಂದು ಬಹಳ ಖುಷಿಯಿಂದ ಮಕ್ಕಳು ಟೀಚರ್ ಜೊತೆ ಸಮಯ ಕಳೆದರು. ದಿನವೂ ಶಾಲೆಗೆ ಬರುವ ಮುನ್ನ ಲೈನ್ ಮನೆಗಳಿಗೆ ಹೋಗಿ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುವುದನ್ನು ಸುಮತಿ ಮುಂದುವರೆಸಿದಳು. ಈಗ ಮಕ್ಕಳು ಶಾಲೆಗೆ ಬರಲು ಮೊದಲಿನಂತೆ ಹಟ ಮಾಡುತ್ತಿರಲಿಲ್ಲ. ಅಕ್ಷರಗಳನ್ನು ಬರೆದು ಕಲಿಯಲು ಕಷ್ಟವಾಗುತ್ತಿದ್ದರೂ ಟೀಚರ್ ಹೇಳುವ ಕಥೆಗಳು ಮಕ್ಕಳಿಗೆ ಇಷ್ಟವಾಗುತ್ತಿತ್ತು.

ಹೀಗೆ ಅವಳ ದಿನಚರಿ ಮುಂದುವರೆದಿತ್ತು. ಒಂದು ದಿನ ಬೆಳಗ್ಗೆ ಎದ್ದ ಕೂಡಲೇ ರೈಟರ್ ಅವರ ಮನೆಯಿಂದ ಅಸಾಮಾನ್ಯವಾಗಿ ಗಂಟೆಯ ಸದ್ದು ಕೇಳಿಸಿತು. ಕೆಲಸಗಾರರೆಲ್ಲರೂ ರೈಟರ್ ಮನೆಯ ಎದುರಿನ ರಸ್ತೆಯಲ್ಲಿ ನಿಂತರು. ಗಂಟೆಯ ಸದ್ದು ಕೇಳಿ ಸುಮತಿ ಕೂಡಾ ಅಲ್ಲಿಗೆ ಹೋದಳು. ಆಗ ರೈಟರ್ ತಮ್ಮ ತೋಟದ ದೊಡ್ಡ ಸಾಹುಕಾರರು ದೈವಾಧೀನರಾದ ಸುದ್ದಿಯನ್ನು ಎಲ್ಲರಿಗೂ ತಿಳಿಸಿದರು. ಈ ಸುದ್ದಿಯನ್ನು ಯಾರೂ ಜೀರ್ಣಿಸಿಕೊಳ್ಳುವಂತೆ ಇರಲಿಲ್ಲ. ದೊಡ್ಡ ಸಾಹುಕಾರರು ಸದಾ ಲವಲವಿಕೆಯಿಂದ ಇರುತ್ತಿದ್ದರು. ಅವರು ಎಂದೂ ಕಾಯಿಲೆ ಎಂದು ಮಲಗಿದ್ದವರು ಅಲ್ಲ. ಯೋಗಭ್ಯಾಸ ನಡಿಗೆ ಹಾಗೂ ಉತ್ತಮ ಜೀವನ ಶೈಲಿ ಎಲ್ಲವನ್ನು ರೂಡಿಸಿಕೊಂಡಿದ್ದ ಅವರು ಬಹಳ ಆರೋಗ್ಯವಂತರಾಗಿದ್ದರು. ರೈಟರ್ ಎಲ್ಲರಿಗೂ ಸಾಹುಕಾರರು ಸಾತ್ವಿಕವಾಗಿ ಮರಣ ಹೊಂದಿದ ಬಗೆಯನ್ನು ತಿಳಿಸಿದರು. ಎಲ್ಲರೂ ಭಯ ಭಕ್ತಿಯಿಂದ ದೊಡ್ಡ ಸಾಹುಕಾರರ ಪಾರ್ಥಿವ ಶರೀರದ ದರ್ಶನವನ್ನು ಮಾಡಲು ಹೊರಟರು. ಅಂದು ತೋಟಕ್ಕೆ ರಜೆ ಇದ್ದ ಕಾರಣ ಶಾಲೆಗೂ ರಜೆ ಇತ್ತು. ತನ್ನ ಜೀವನಕ್ಕೆ ಒಂದು ದಾರಿಯನ್ನು ಮಾಡಿಕೊಟ್ಟು ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡಿ ಅವರಿಗೆ ಅನಾಥಾಶ್ರಮದಲ್ಲಿ ಬದುಕಲು ಅವಕಾಶವನ್ನು ಮಾಡಿಕೊಟ್ಟ ದೊಡ್ಡ ಸಾಹುಕಾರರ ದರ್ಶನ ಭಾಗ್ಯವನ್ನು ಪಡೆಯಲು ಸುಮತಿ ಹೊರಟಳು. ಸಾಹುಕಾರರು ಬದುಕಿದ್ದಾಗ ಎಲ್ಲರನ್ನು ಸಮಾನವಾಗಿ ಕಾಣುತ್ತಾ ಎಲ್ಲರಿಗೂ ಉಪಕಾರವನ್ನು ಮಾಡುತ್ತಿದ್ದನ್ನು ಕೆಲಸಗಾರರು ಗುಣಗಾನ ಮಾಡುತ್ತಿದ್ದರು. ಅಕ್ಕಪಕ್ಕದ ಸಣ್ಣಪುಟ್ಟ ತೋಟಗಳ ಮಾಲೀಕರುಗಳು ಹಾಗೂ ಸುತ್ತಮುತ್ತಲ ಊರಿನ ಜನರು ಸಾಹುಕಾರರ ದರ್ಶನ ಪಡೆಯಲು ಬಂದಿದ್ದರು ಬಹುದೊಡ್ಡ ಜನಸ್ತೋಮವೇ ಅಲ್ಲಿ ನೆರದಿತ್ತು. ಕಾಫಿ ಕಣಗಳು ಜನರಿಂದ ತುಂಬಿತ್ತು. ರಸ್ತೆಯಲ್ಲಿಯೂ ಜನರು ನಿಂತಿದ್ದರು.

ಎಲ್ಲರ ಬಾಯಲ್ಲೂ ಒಂದೇ ಮಾತು, “ದೇವರಂತಹ ಮನುಷ್ಯ” ಎಂಬುದಾಗಿತ್ತು. ಈ ಸುದ್ದಿ ಅನಾಥಾಶ್ರಮಕ್ಕೂ ತಲುಪಿತು. ಅಲ್ಲಿಯೂ ಅವರ ಭಾವಚಿತ್ರವನ್ನು ಇಟ್ಟು ವಾರ್ಡನ್ ಹಾಗೂ ಮಕ್ಕಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇಡೀ ಸಕಲೇಶಪುರ ಪಟ್ಟಣ ಹಾಗೂ ತಾಲ್ಲೂಕಿನ ಸುತ್ತಮುತ್ತಲ ಜನತೆಗೆ ಸಾಹುಕಾರರು ದೈವಾಧೀನರಾದ ವಾರ್ತೆ ತಲುಪಿತು. ಎಲ್ಲರ ಬಾಯಲ್ಲೂ ಅವರ ಗುಣಗಾನವೇ ತುಂಬಿತ್ತು. ಅವರು ಮಾಡುತ್ತಿದ್ದ ಒಳ್ಳೆ ಕಾರ್ಯಗಳು ಹಾಗೂ ದಾನ ಧರ್ಮಗಳು ಎಲ್ಲರ ಮನಸ್ಸನ್ನು ತುಂಬಿತ್ತು. ವಿಷಯ ತಿಳಿದವರೆಲ್ಲರೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಾಹುಕಾರರ ಮನೆಯಲ್ಲಿ ಹಾಗೂ ತೋಟದ ಎಲ್ಲರ ಮನೆಗಳಲ್ಲೂ ಶೋಕದ ಛಾಯೆ ಮೂಡಿತ್ತು. ಸಕಲ ಗೌರವಗಳೊಂದಿಗೆ ಸಾಹುಕಾರರ ಅಂತ್ಯಕ್ರಿಯೆ ನಡೆಯಿತು. ಸಾಹುಕಾರರ ಅಗಲಿಕೆಯ ನೋವನ್ನು ಮರೆಯಲು ತೋಟದ ಕೆಲಸಗಾರರಿಗೆ ಬಹಳ ದಿನಗಳೆ ಬೇಕಾಯಿತು. ಪುನಹ ಎಂದಿನಂತೆ ಕೆಲಸ ಕಾರ್ಯಗಳು ಹಾಗೂ ಶಾಲೆಯು ಪ್ರಾರಂಭವಾಯಿತು. ಮಕ್ಕಳಿಗೆ ಆಗಾಗ ಬರುತ್ತಿದ್ದ ಹಾಗೂ ಜೊತೆಗೆ ತಿಂಡಿಗಳನ್ನು ಹಣ್ಣು ಹಂಪಲುಗಳನ್ನು ತರುತ್ತಿದ್ದ ಅಜ್ಜ ಇನ್ನು ಬರುವುದಿಲ್ಲ ಎನ್ನುವುದನ್ನು ಸುಮತಿ ಅವರಿಗೆ ಅರ್ಥ ಆಗುವಂತೆ ತಿಳಿಸಿದಳು. ಅಪ್ಪ ಅಮ್ಮ ಹೇಳಿದ್ದು ಅವರಿಗೆ ತಿಳಿದಿತ್ತು ಆದರೆ ವಿಷಯ ಏನೆಂದು ಸರಿಯಾಗಿ ಅರ್ಥವಾಗಿರಲಿಲ್ಲ. ಏಕೆಂದರೆ ಅವರು ಮಕ್ಕಳು ಮರಣ ಎನ್ನುವ ಬಗ್ಗೆ ಅವರಿಗೆ ತಿಳುವಳಿಕೆ ಇರಲಿಲ್ಲ. ಟೀಚರ್ ಹೇಳಿದ ಮೇಲೆ ಸಾಹುಕಾರರು ದೇವರ ಹತ್ತಿರ ಹೋಗಿದ್ದಾರೆ ಎನ್ನುವುದು ಅವರಿಗೆ ಅರ್ಥ ಆಯ್ತು. ಆದರೂ ಸಾಹುಕಾರರು ದೇವರ ಬಳಿಯಿಂದ ಮತ್ತೆ ಯಾವಾಗ ಇಲ್ಲಿಗೆ ಬರುತ್ತಾರೆ? ನಮಗೆ ಹಣ್ಣು ಹಂಪಲನ್ನು ತಿಂಡಿ ತಿನಿಸುಗಳನ್ನು ಯಾವಾಗ ತರುತ್ತಾರೆ? ಎಂದು ಮುಗ್ಧತೆಯಿಂದ ಸುಮತಿಯನ್ನು ಪ್ರಶ್ನೆ ಮಾಡಿದಾಗ ಅವಳ ಕಣ್ಣಂಚು ಒದ್ದೆಯಾಯಿತು. 


About The Author

Leave a Reply

You cannot copy content of this page

Scroll to Top