ಪರವಿನ ಬಾನು ಯಲಿಗಾರ ಅವರ ಕವಿತೆ-ʼಮುಂಗಾರು ಮಳೆʼ

ಈ ಮುಂಗಾರು ಮಳೆಗೆ ಅದೆಂಥಹ
ಮಾಯೆಯಿದೆಯೋ ?

ತುಂಬಿ ತನ್ನೋಡಲಲಿ , ಸುರಿಯುವುದು ಅನುರಾಗದ ಸುಧೆಯ ಹೊತ್ತೊಮ್ಮೆ.

ತುಂಬಿ ತನ್ನೆದೆಯಲಿ , ಸುರಿಯುವುದು
ಅಗಲಿಕೆಯ ನೋವ
ಹೊತ್ತೊಮ್ಮೆ .

ತುಂಬಿ ತನ್ನುಸಿರಿನಲಿ , ಸುರಿಯುವುದು
ನೆನಪುಗಳ ಭಾರ
ಹೊತ್ತೊಮ್ಮೆ….

ತುಂಬಿ ತನ್ನ ತನುವಿನಲ್ಲಿ
ಸುರಿಯುವುದು ವಿರಹದ ಬೇಗೆ ಹೊತ್ತೊಮ್ಮೆ….

ಈ ಮುಂಗಾರು ಮಳೆಗೆ ಅದೆಂಥಹ
ಮಾಯೆಯಿದೆಯೋ ?

ಈ ಮಳೆಯ ಸಿಂಚನಕೆ ಮೈ ಕೊಡವಿ
ಕುಡಿಯೊಡೆಯುವವು , ವನಸಿರಿಗಳು…..

ಈ ಮಳೆಯ ರಭಸಕೆ ಕೊರಗಿ ಕೊಚ್ಚಿ
ಹೋಗುವವು ,
ಭೂ ಐಸಿರಿಗಳು…..

ಈ ಮಳೆಯ ಕೊರತೆಗೆ ಕಮರಿ
ಮರೆಯಾಗುವವು , ಹೊಸ ಚಿಗುರುಗಳು…..

ಈ ಮುಂಗಾರು ಮಳೆಗೆ ಅದೆಂಥಹ
ಮಾಯೆಯಿದೆಯೋ ?

Leave a Reply

Back To Top