ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
“ಅಮ್ಮ”

ತನ್ನೊಳಗೆ ಸೃಷ್ಟಿಯ ಕನಸು ಬಿತ್ತುವಳು
ನನಸಿಗೆಂದು ಅಣಿಯಾಗಿ ತಾ ಬೆತ್ತಲಾಗುವಳು
ಜೀವಬೀಜವ ಪೊರೆವ ಭೂಮಿಯಾಗುವಳು
ಬಸಿರಲಿ ಉಸಿರನಿತ್ತು ಭರವಸೆಯ ಹರಸುವಳು
ಚಿಗುರಿದ ಜೀವಕ್ಕೆ ಪ್ರಪಂಚವ ಪರಿಚಯಿಸುವಳು
ತನುವಿನ ರಸವನು ಬಸಿದು ಹಾಲುಣಿಸುವಳು
ಮಗುವಿನ ನಗುವಲಿ ತಾ ಮೈಮರೆಯುವಳು
ಅಳುವ ಮಗುವಿಗೆ ಅಕ್ಕರೆಯ ಆಸರೆಯಾಗುವಳು
ಗುಮ್ಮನೊಡನೆ ಹೋರಾಡಿ ರಕ್ಷಕಿಯಾಗುವಳು
ಸೇವಕಿ ಪೋಷಕಿ ಶುಷ್ರೂಷಕಿಯಾಗಿ ಕೂಸನು
ಉದ್ದರಿಸುವಳು
ತೊಡೆಯ ತೊಟ್ಟಿಲಲ್ಲಿ ತೋಳಕಂಬಿಗಳ ಸುರಕ್ಷತೆಯಲ್ಲಿ ಮಗುವ ಪೊರೆಯುವಳು
ಆಟದ ಜೊತೆ ಪಾಠವ ಕಲಿಸಿ ಶಿಕ್ಷಕಿಯಾಗುವಳು
ಮಗುವಿನ ಬೆಳವಣಿಗೆಯನು ಸಂಭ್ರಮಿಸುವಳು
ಮಗುವಿನೊಡನೆ ತಾನೂ ಬೆಳೆಯುವಳು ಬವಣೆಗಳ ಬದಿಗೊತ್ತಿ ಕಂದನೊಡನೆ ನಲಿಯುವಳು
ಪ್ರೀತಿಯ ದೀಪ್ತಿಗೆ ಮಮತೆಯ ಎಣ್ಣೆಯ ಧಾರೆ ಹರಿಸುವಳು
ಕೈಹಿಡಿದು ನಡೆಸುತ ತಪ್ಪಿದರೆ ತೀಡುತ ಸಲಹಿ ತಾಯಿಯಾಗುವಳು
ಆಜೀವ ಪ್ರೀತಿಯ ಅಮೃತದ ಬಟ್ಟಲಾಗುವಳು
ದಣಿಯದೆ ನಿಲ್ಲದೆ ವೇಗದ ಹೆಜ್ಜೆಗಳಲ್ಲಿ ಗುರುತು ಬರೆಯುವಳು
ಜನುಮದಾತೆ ಪೊರೆವ ಮಾತೆ ಶಕ್ತಿಯುಕ್ತಿ ಸಕಲ ಸಂಪನ್ನೆ
ಸಾಟಿ ಇಲ್ಲದ ಸಂಬಂಧಿ ಸರ್ವ ಭಾವಕು ಮಿಡಿವ ಮಮತೆಯ ಖನಿ
ಅಮ್ಮ ನಾ ನಿನ್ನ ಮಹಾ ಅಭಿಮಾನಿ
ನಿನ್ನ ಕರುಣಿಸಿದಾ ಪರಮಾತ್ಮನಿಗೆ ನಾ ಚಿರ ಋಣಿ
ಶಾಲಿನಿ ಕೆಮ್ಮಣ್ಣು
