ಗಝಲ್
ತೇಜಾವತಿ ಹೆಚ್.ಡಿ.
ಕೊರೆಯುವ ಚಳಿಯಲ್ಲೂ ವಹ್ನಿಯೊಡಲು ದಹಿಸುತ್ತಿದೆ ಸಾಕಿ
ಬಹಿರಂಗದ ತೊಗಲು ಅಂತರಂಗದ ಜ್ವಾಲೆಯಲ್ಲಿ ಮೈ ಕಾಯಿಸುತ್ತಿದೆ ಸಾಕಿ
ಹೆಪ್ಪುಗಟ್ಟಿದ್ದ ಹೃದಯ ರಂಧ್ರ ಮುಚ್ಚಿದ್ದ ಕಾಯದ ಬಾಯಿ ತೆರೆದು
ನರನಾಡಿಯಲ್ಲೂ ಶರವೇಗದಿ ಕಾವು ಮಿಂಚಂತೆ ಸಂಚರಿಸುತ್ತಿದೆ ಸಾಕಿ
ರೆಕ್ಕೆ ಮೂಡದ ಹಕ್ಕಿಯ ಕನಸೊಳಗೆ ಮೌನದ ನೀರವತೆ ಮಡುಗಟ್ಟಿದೆ
ಹನಿವ ಮಳೆಯೊಡನೆ ಹರಿವಕಂಬನಿ ಧರೆಯಲಿ ಲೀನವಾಗುತ್ತಿದೆ ಸಾಕಿ
ಸಲಿಲದಿಂದ ಬೇರ್ಪಟ್ಟ ಮತ್ಸ್ಯದ ಒದ್ದಾಟದ ಚಡಪಡಿಕೆಯಲಿ
ಜಾತಕಪಕ್ಷಿ ಜೀವಸೆಲೆಗಾಗಿ ಕಾತರಿಸಿ ಜವವ ಕಾಯುತ್ತಿದೆ ಸಾಕಿ
ಇರುಳ ತಿಂಗಳ ತೇಜಸ್ಸನ್ನು ಭ್ರಮಿಸಿ ಸ್ಮೃತಿಪಟಲದ ಅಕ್ಷಿಗಳಲ್ಲಿ
ಜಾರಿದ ಅಶ್ರುಬಿಂದುಗಳ ಒರೆಸಿ ದಿಂಬಿನ ಮಡಿಲು ಸಂತೈಸುತ್ತಿದೆ ಸಾಕಿ
********