ಅನುವಾದ ಸಂಗಾತಿ

Photo of a Turtle Underwater

ಕಡಲೊಳಗೆ ಕಡಲಾಮೆಗಳು

ಇಂಗ್ಲೀಷ್ ಮೂಲ:Melvin B Tolson

ಕನ್ನಡಕ್ಕೆ: ವಿ.ಗಣೇಶ್

ವಿಚಿತ್ರ ಆದರೂ ಸತ್ಯವಿದು ಕೇಳಿ

    ಕಡಲಿನಲಿರುವ ಕಡಲಾಮೆಗಳ ಕಥೆ

    ಕಡಲಾದರೇನು ಒಡಲಾದರೇನು?

    ಕುಣಿದು ಕುಪ್ಪಳಿಸುವುದಕೆ ಚಿಂತೆ

    ಒಮ್ಮೊಮ್ಮೆ ಅನ್ನ ಆಹಾರಗಳಿಲ್ಲದೆ

    ಶಾರ್ಕಗಳು ಕಡಲಲ್ಲಿ ಒದ್ದಾಡುವುವು

    ಬೇಟೆಯನು ಹುಡುಕುತ್ತ ಬರುವ

    ಶಾರ್ಕ್‍ಗಳಿಗೆ ಸಿಗುವುದೀಆಮೆಗಳು

    ಉದರವನು ತಣಿಳಿಸಲು ಆಕ್ರಮಿಸಿ

    ನುಂಗುವುವು ಇಡಿ ಕಡಲಾಮೆಗಳನು

    ಬೆಣ್ಣೆಯಂತಹ  ದೇಹದೊಳಗಿಳಿಯುತ್ತ

    ಜಾರುವುದು ಆಮೆಯು ಉದರದೊಳಗೆ

    ಒಳಸೇರಿದೊಡೆ ನೋವು ತಡೆಯಲಾಗದೆ

    ಬಿಡುಗಡೆಯ ಮಾರ್ಗಕ್ಕೆ ಚಡಪಡಿಸುವುದು

    ಹರಿತ ಹಲ್ಲುಗಳ  ಆ ಕಡಲಾಮೆಯು

    ಹೊರ ಮಾರ್ಗಕ್ಕಾಗಿ ಹುಡುಕಾಡುವುದು

    ತಿರುಗುತ್ತ ತಿರುಗುತ್ತ ಒದ್ದಾಡುತ್ತಲೇ

    ಕತ್ತರಿಸತೊಡಗವುದು ಒಳಗೊಳಗೆಯೆ

    ಹಿಂಸೆ ಸಹಿಸಲಾಗದೆಲೆ ಶಾರ್ಕು ಕೂಡ

    ಉರುಳುತ್ತ ನರಳುವುದು ತಳದಲ್ಲಿಯೆ

    ಗರಗಸದ ಉಗುರು ಅಗಿಯುವದವಡೆ

    ಬಂಡೆಯನೆ ಕತ್ತರಿಸುವ ಆ ಛಲ-ಬಲ

    ಇನ್ನೇನು ಬೇಕು ಹೇಳಿ, ಕಚ್ಚುತ್ತಕಚ್ಚುತ್ತ

    ಬಡಿದಾಡುವುದು ಸಾವಿಬದುಕಿನ ನಡುವೆ

   ಅಗಿಯುತ್ತ ಅಗಿಯುತ್ತ ಮತ್ತೆ ಕಚ್ಚುತ್ತ

   ಎಲ್ಲೆಡೆ ಹುಡುಕುತ್ತ ತಡಕಾಡತಿರುವುದು

   ಮಲದ ಗುದಾಮಿನಿಂದೀಚೆಗೆ ಜಾರುತಲಿ

   ಉದರದೊಳಗಿಂದ ಹೊರಕೆ ಚಿಮ್ಮುವುದು.

   ಹೀಗೆ ಹೊರಬಂದ ಈ ಕಡಲಾಮೆಯು

   ತನ್ನ ಗುಂಪನು ಸೇರಿ ನಲಿದಾಡುವುದು

   ತನ್ನ ಬೇಟೆಯ ಕಳಕೊಂಡ ಶಾರ್ಕದು

   ಮರಳಿ ಬೇಟೆಗೆ ಹುಡುಕತೊಡಗುವುದು.

***********

One thought on “ಅನುವಾದ ಸಂಗಾತಿ

Leave a Reply

Back To Top