ಬಂಗಾರದ ನೆನಪಿನ ಬೆಳ್ಳಿ ಗೆಜ್ಜೆ’
ವಸುಂಧರಾ ಕದಲೂರು
ಮೊನ್ನೆ ಬಯಸೀ ಬಯಸೀ
ಆಭರಣದಂಗಡಿಯಲಿ ಬಂಗಾರ
ಬಣ್ಣದ ಗೆಜ್ಜೆ ಕೊಂಡೆ. ಬೆಳ್ಳಿ ಪಾದ
ತುಳಿದು ಬಂದ ಹಾದಿ ನೆನಪು
ರಿಂಗಣಿಸಿ ಅನಾವರಣವಾಯಿತು
ಹಣೆ ಕೆನ್ನೆ ಕೈಗಳ ಮೇಲೆ ಕಾಸಗಲ
ಕಪ್ಪನು ದೃಷ್ಟಿ ಸೋಕದಂತೆ ಹಾಕಿ
ಮುದ್ದು ಮಾಡಿ, ಪುಟ್ಟ ಕಾಲಿಗೆ ಹಗೂರ
ಕಾಲ್ಮುರಿ ಕಿರುಗೆಜ್ಜೆಯನು ತೊಟ್ಟಿಲಲಿಟ್ಟು
ತೂಗಿದ ಸಂಭ್ರಮದ ನೆನಪಾಯಿತು..
ಗೋಡೆ ಹಿಡಿದು ತಟ್ಟಾಡಿಕೊಂಡು
ಹೆಜ್ಜೆಗೊಮ್ಮೆ ಝಲ್ಲೆನುವ ಪುಟ್ಚಪಾದ
ಊರಿ ಬರುವ ಸದ್ದನು ಮುಂದುಮಾಡಿದ
ಗೆಜ್ಜೆಯ ಸಮಾಚಾರ ನಾಕಾರು ಬೀದಿ
ತಟ್ಟಿ ಕೇಕೆ ಹಾಕಿದ ನೆನಪಾಯಿತು..
ಅದೇನು ಗಮ್ಮತ್ತು ! ಗತ್ತು!
ಮತ್ತು,
ಸದ್ದು ಮಾಡದ ಗೆಜ್ಜೆ ತೊಟ್ಟಿದ್ದರೆ
ದಾರಿ ಸವೆದಿರುತ್ತಿತ್ತೆ ಇಲ್ಲಿವರೆಗೆ
ಯಾರಿಗೆ ಗೊತ್ತು..
ನಡೆದ ಕಾಲ್ಬೆರಳಿನುಗುರಿಗೆ ನಾನಾ
ಬಣ್ಣಗಳ ಸಾತು. ತೊಟ್ಟ ದಪ್ಪ ಗೆಜ್ಜೆಗಳು
ಹೆಜ್ಜೆ ದನಿಯ ಮಾರ್ದನಿಸಿ
ಯೌವನ ಅನುರಣಿಸಿ, ಬಯಕೆ ಅನಾವರಣಗೊಳಿಸಿದ ನೆನಪಾಯಿತು..
ಆ
ಬಯಕೆಗೆ ಮದುವೆ, ಆ ಮದುವೆಗೆ
ಬರೀ ಗೀಟು, ಗೀರು, ಸಾದಾ ಎಳೆಯ
ಗೆಜ್ಜೆ ತೊಡಲು ಮನಸ್ಸು ಒಪ್ಪದೇ
ವರನನ್ನೂ ಜೊತೆಗೆ ಬೆಳ್ಳಿ ಗೆಜ್ಜೆಗಳನೂ
ಜಾಲಾಡಿದ ನೆನಪಾಯಿತು..
ಗಾಜಿನ ಹೊದಿಕೆ ಒಳಗೆ ಮಲಗಿದೆಲ್ಲ
ಸುಂದರಿಯರು ಮೈಕೊಡವಿ ಮೆಲ್ಲದನಿಯಲಿ ಉಲಿಯುತಾ ನಲಿಯುತಾ ಮಕಮಲ್ಲಿನ
ಬಟ್ಟೆಯ ಮೇಲೆ ಮೈಚಾಚಿದೊಡನೆ
ಕುಸುರಿ ಕೆತ್ತನೆಗೆ, ಗೆಜ್ಜೆ ಸದ್ದಿಗೆ ಕಣ್ಣರಳಿಸಿದ
ನೆನಪಾಯಿತು..
ಅವನೊಲವಿನ ಪಿಸಿಪಿಸಿಗೆ ಗೆಜ್ಜೆ ದನಿಯ
ಗುಸುಗುಸು ಬೆರೆತು, ಬೆರಗಿನಲಿ ಮನ ಒಪ್ಪಿ
ಅಂಗಡಿಯ ಗೆಜ್ಜೆಗಳು ಮದುವೆಗೆಕುಣಿದ
ಕಾಲಿಗೆ ಜೊತೆಯಾದುದು ಮತ್ತೆ ನೆನಪಾಯಿತು..
‘ಮೊದಲ ದಿನ ಮೌನ’ ವಾಗದೆ, ಇವಳ
ಗೆಜ್ಜೆಯೊಡನೆ ಅವನ ದನಿ ಸೇರಿ, ನಾದ
ಎದೆಗಿಳಿವಾಗ ಇರುಳು ತಾನು ನಿಶ್ಯಬ್ದದಲಿ
ಸ್ಥಬ್ಧವಾಗಿ; ಅನುಕೂಲಿಯಾಗಿ
ಗೆಜ್ಜೆಹೆಜ್ಜೆ ಮಿಲನವಾಗಿ, ಲಜ್ಜೆ ತುಟಿ ಮೇಲೆ
ನಲಿದು ಕಣ್ಣು ನಾಚಿಕೆಯ ಸೆರಗು
ಹೊದೆದು, ಹೆಜ್ಜೆ ಸಮವಾಗಿ ಊರಿ,
ಗೆಜ್ಜೆ ಸದ್ದು ಎದೆ ಬಡಿತದಲಿ ಲಯವಾದ ನೆನಪಾಯಿತು..
ಹೊಸ ನೋಟ ವಿನ್ಯಾಸಗಳ
ದರ್ಬಾರು ಶುರುವಾಗಿ ನಿರಾಳ ನಿಡು
ಉಸಿರೊಡನೆ ಬೆರೆತು ನಕ್ಕಿದ ಕಿರುಗೆಜ್ಜೆ,
ತೊಟ್ಟಿಲ ತೂಗುತ್ತಾ ಕೈ ಬಳೆಗೆ ಮತ್ತೆ
ಸಹವರ್ತಿಯಾದ ನೆನಪಾಯಿತು..
ಮೊನ್ನೆ ಕೊಂಡ ಬಂಗಾರದ ಗೆಜ್ಜೆ
ಸುತ್ತಮುತ್ತೆಲ್ಲಾ ಮತ್ತೆ ಬೆಳ್ಳಿ ನೆನಪಿನ
ಸದ್ದನು ಹೊತ್ತು ತಂದಿತು…
******