ಮುಗಿಯದ ಮಾತು
ಅಕ್ಷತಾ ಕೃಷ್ಣಮೂರ್ತಿ
ಮನದ ಪ್ರಶ್ನೆಗಳಿಗೆ ಉತ್ತರವಿಲ್ಲ
ಕೇಳಿದರೆ ಸಿಟ್ಟು
ಜಮದಗ್ನಿಯಂಥವರು
ಮೌನದಲಿ ಉತ್ತರವಿದೆ ಎನಿಸಿದರೂ
ಆಲಿಸಲು ನಿಶಕ್ತಿಯಿದೆ
ಹೇಳಿದರೆ ಸಲೀಸು
ಗೊತ್ತಿದ್ದರೂ
ಗೊತ್ತಿಲ್ಲದಂತಿರುವುದೇ ಒಲವಿಗೆ
ಶ್ರೇಯಸ್ಸು
ಆದರೂ
ಹೊಟ್ಟೆಕಿಚ್ವು ಎಂದನವ
ಯಾಕಾಗಿ ಯಾರಿಗಾಗಿ
ಸ್ವಂತದ್ದು ಆಗಿದ್ದರೆ
ಒಪ್ಪುತ್ತಿದ್ದೆನೆನೋ
ರವಿ ಕಿರಣಕೆ
ಪಾಲುದಾರರೆ ಹೆಚ್ಚಿರುವಾಗ
ಈಗ ಹುಟ್ಟಿದ ನಾನು
ನೀ ನನ್ನವನೆನಲು ಒಪ್ಪಿತವೇನು?
ಅಷ್ಟಕ್ಕೂ ಅವನೊಲವು
ಅರಿವಿಗೂ ದಕ್ಕದಿರುವಾಗ
ಗೆಲ್ಲುವೆನೆಂಬ ಉಮೇದು
ತಕ್ಕಡಿಯಲ್ಲಿ ಲೆಕ್ಕ ಹಾಕುತಿದೆ
ಒಲವು ಅಂಟಿಸಿಕೊಳ್ಳುವುದಲ್ಲ.
ಅವನೇಕೆ ಒಂದು ನಮೂನಿ
ನೇರ ಇದ್ದಾನೆ ನುಡಿಯುತ್ತಾನೆ
ಎದುರಿಗಿರುವುದು ಪ್ರೀತಿಸುವ
ಮನಸು ಮರೆಯುತ್ತಾನೆ
ಹೇಳಿಯೇ ಬಿಡುತ್ತಾನೆ
ಎಲೆ ಉದುರುವ ಕಾರಣವ
ನಾ ನೀರೆರೆಯುತ್ತೇನೆ
ನಂಬಿ ನನ್ನ ವಸಂತ
ತಪ್ಪದೆ ಬರುವ ಎಲ್ಲ
ತಪ್ಪುಗಳ ಮೀರಿ
ಎಂದೆ ಅಂವ ಆಡಿದ ಮಾತು
ಮರೆತು ಮತ್ತೆ
ಹೇಳಿಯೇ ಬಿಡುತ್ತಾನೆ
ನೆಟ್ಟ ಮರ ಮುರಿಯಲು ಬಿಡೆ ಎಂದು
ಈಗ ಅನಿಸುತ್ತದೆ ಇಬ್ಬರ ದಾರಿ ಒಂದೆ
ನಡೆಯುತ್ತೇವೆ ಓಡುತ್ತೇವೆ
ಒಮ್ಮೊಮ್ಮೆ ಕುಂಟುತ್ತೇವೆ
ಇದ್ದಕ್ಕಿದ್ದಲ್ಲೇ ದಾರಿ ಎರಡಾಗುತ್ತದೆ
ಮಾತಾಡುತ್ತೇವೆ ದೊಡ್ಡದಾಗಿ
ಕೂಗುತ್ತೇವೆ ಕಿರುಚುತ್ತೇವೆ
ಅರೇ! ತಪ್ಪು ತಿಳಿಯಬೇಡಿ
ಎರಡಾದ ದಾರಿ ಒಂದಾಗುವರೆಗೆ
ಕೂ..ಅಂದಿದ್ದು
ಕೇಳಬೇಕಲ್ಲ
ಮತ್ತೇ ಎಲ್ಲೊ ಒಂದು ಕಡೆ
ದಾರಿ ಸೇರುತ್ತದೆ
ಒಂದಾದ ದಾರಿಯಲ್ಲಿ
ಸೇರುತ್ತೇವೆ ಸಾಗುತ್ತೇವೆ
ಕೊನೆ ನಿಲ್ದಾಣ
ಪರಿಚಯವಾಗುವವರೆಗೆ.
***********
ಅದ್ಭುತ ವಾದ ಕವನ ಮೇಡಂ ಬಹಳ ಇಷ್ಟ ಆಯ್ತು ನಂಗೆ ಬದುಕು ಒಂಥರ ವಿಚಿತ್ರ .ಸುಂದರವಾದ ಕವನ
ನಿಮ್ಮ ಓದಿಗೆ ವಂದನೆಗಳು
Very nice poem Akshata