ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್

ಮತ್ತೇ ಚಿಗುರುತ್ತವೆ ಈಗ ಗಿಡಮರಬಳ್ಳಿಗಳು
ಮತ್ತೇ ಹಾರುತ್ತವೆ ರೆಕ್ಕೆ ಹರಡಿ ಬಾನಾಡಿಗಳು
ಶಿಶಿರದ ಜಡಕೆ ಬಳಲುತ್ತಿದ್ದರು ಚರಾಚರಗಳು
ಮತ್ತೇ ಕೊನರುತ್ತವೆ ಹುದುಗಿದ ಬಯಕೆಗಳು
ಪಚ್ಚೆಯನು ಮೆತ್ತಿಕೊಂಡವು ಮುಗುಳುಗಳು
ತುಂಬುತ್ತವೆ ಹಾಳೆಯನು ಹಸಿರು ಬರಹಗಳು
ಕರೆ ಕೂಗುತ್ತವೆ ಪಂಚಮದಲಿ ಕೋಕಿಲಗಳು
ಕರೆಯುತ್ತವೆ ಉನ್ಮಾದದಿ ವಿರಹಿ ಭಾವಗಳು
ಹೇಮಂತನ ಕಟ್ಟಾಜೆ ಬಳಲುತ್ತಿದ್ದ ಜೀವಗಳು
ಸಾರುತ್ತವೆ ನೀತಿಯ ಒಂದೊಂದು ದಿನಗಳು
ಗುಬ್ಬಿ,ಗಿಳಿ ಗೊರವಂಕ ಹಾಡಿವೆ ಬಾನಾಡಿಗಳು
ನಲಿಯುತ್ತವೆ ಅಳಲು ಬದಿಗಿರಿಸಿದ ಮೊಗಗಳು
ಗಂಧ ಮರುತನಾಗಮನ ಕಂಪಿಸಿವೆ ಎಲೆಗಳು
ಪುಳಕಿಸುತ್ತವೆ ಒಲವ ನೆನಪಿಸಿದ ಈ ದಿನಗಳು
ಬೇವಿದೆ ಬೆಲ್ಲವಿದೆ ಎಲ್ಲವೂ ಸಾರಗಳು ಅನು
ಮರಳಿ ಕರೆಯುತ್ತಾರೆ ಕಾಯ್ದಿರಿಸಿದ ಸ್ವಪ್ನಗಳು

ಅನಸೂಯ ಜಹಗೀರದಾರ