ಕಿರಣ ಗಣಾಚಾರಿ ಅವರ ಕವಿತೆ-ಹಸಿರ ಹಸಿ ಮಚ್ಚೆ

ಅದೆಷ್ಟು ಯುಗಾದಿಗಳು
ಬಂದು ಹೋದರೂ
ನಿನ್ನೊಳಗಿನ ಸಿಹಿ
ನನ್ನೊಳಗಿನ ಕಹಿ
ಮಿಶ್ರಣವಾಗಲೇ ಇಲ್ಲ!
ಸಿಹಿ ಕಹಿಗಳು
ಅದಲು ಬದಲಾಗಿ
ಮನಸ್ಸಿನ ನಾಲಿಗೆಗೆ
ರುಚಿಸಲೇ ಇಲ್ಲ!
ನಾನು ನೀನೆಂಬ
ಉ(ಸೊ)ಕ್ಕಿನ ಕೋಟೆಯಲಿ.

ಉಬ್ಬಿದ ಬೊಡ್ಡೆಗಳ ಚಕ್ಕಳೆಗಳು
ಒಣಕಲು ಬಕ್ಕ ಟೊಂಗೆಗಳು
ಕಿಚ್ಚು ಹೊತ್ತಿಸೋ ಒಣ ಎಲೆಗಳು
ತಬ್ಬಿಯೇ ಅಸುನೀಗಿದ ಬಳ್ಳಿಗಳು
ಅರಳಿಯೇ ನೆಲಕ್ಕುರುಳಿದ ಹೂಗಳು
ತೆವಳುವ ಹುಳುಗಳು
ಅಲ್ಲೊಂದು ಇಲ್ಲೊಂದು ಕಲೆಗಳಂತೆ
ಸುಟ್ಟ ಕಾಡುಗಳು
ನೆನಪಿಸುತ್ತಿವೆ
ವರ್ಷದ್ದುದ್ದದ ದ್ವಂದ್ವ ಯುದ್ದಗಳ

ಬೆಳ್ಳಂಬೆಳಗ್ಗೆಯೇ
ಯುಗಾದಿ ಬಂತೆಂದು
ಹಾರಾಡುತ್ತ  ಟುಮಿಕೆ  ಬಾರಿಸುತ್ತಿವೆ
ಹಕ್ಕಿ ಪಕ್ಕಿಗಳು
ಕೋಗಿಲೆಯ ಕುಹೂ  ಕುಹೂ ಇಂಪಾಗಿ
ಕಾಗೆಯ ಕಾ..ಕಾ.. ಕರ್ಕಶವಾಗಿ.
ಬೇಕಾದ್ದು ಸದಾ ಇಂಪಾಗಿ
ಬೇಡಾದ್ದು  ಅಶುಭವಾಗಿ
ಅಂತೆ ಕಂತೆಗಳಾಗಿ.
ಬೇಕು.. ಬೇಡ.. ಗಳು
ಎಂದಿನಂತೆ ಇಂದೂ ಬೆರೆಯದೇ
ಮೈ ಮನಸ್ಸಿಗೆ ಮೆತ್ತದೇ ಹೋಗುತ್ತಿವೆ
ಹಚ್ಚಿದ ಎಣ್ಣೆಯಲಿ ಜರ್ರನೆ ಜರಿದು.

ಕಳೆದ ವರ್ಷ
ಚಿಗುರು ಬಿಟ್ಟ ಜಾಗ
ಇನ್ನೂ ಕಪ್ಪಾಗಿಯೇ ಇದೆ.
ಕಣ್ಬಿಟ್ಟು ಕಾಯುತ್ತಿದ್ದೇನೆ
ಕಣ್ತಪ್ಪಿಸಿ ಹಸಿರ ಹಸಿ ಮಚ್ಚೆ
ಎಂದು ಮೂಡುವುದೋ !

——————————————————————————–

2 thoughts on “ಕಿರಣ ಗಣಾಚಾರಿ ಅವರ ಕವಿತೆ-ಹಸಿರ ಹಸಿ ಮಚ್ಚೆ

Leave a Reply

Back To Top