ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಯುಗಾದಿ

ಯುಗಾದಿ ಬಂದಿದೆ ಹರುಷ ತಂದಿದೆ
ಸೃಷ್ಟಿಯ ಎದೆಯಲಿ ಸಂತಸ ಉದಿಸಿದೆ
ವಿಶ್ವಾವಸುನಾಮ ಸಂವತ್ಸರ ವಸಂತಾಗಮನ
ನವಚೈತ್ರಮಾಸದಿ ಕೋಗಿಲೆಯ ಸವಿಗಾನ !
ನಿಸರ್ಗದಿ ಮಾವು ಬೇವಿನ ಚಿಗುರು
ಪ್ರಾಣಿಪಕ್ಷಿಗಳಿಗೆ ನವೋಲ್ಲಾಸದ ಉಸಿರು
ಪ್ರಕೃತಿ ಮಾತೆಗೆ ನವವಧುವಿನ ಹೆಸರು
ರವಿಯ ಉಸಿರಲಿ ಧರಣಿಗೆಲ್ಲ ಹಸಿರು !
ಬೇವಿನ ಸಂಕಟವು ಮೌನದಿ ಕಳೆಯಲಿ
ಬೆಲ್ಲದ ಸವಿಯು ಬದುಕನು ಆವರಿಸಲಿ
ದ್ವೇಷ ಅಸೂಯೆಗಳು ಮೋಡದಂತೆ ಕರಗಲಿ
ಸ್ನೇಹಪ್ರೀತಿಯ ಬಾಂಧವ್ಯ ಚಂದ್ರನಂತೆ ಬೆಳಗಲಿ !
ಕಷ್ಟಗಳು ಕರಗಿ ನೋವುಗಳು ಸೊರಗಿ
ಖುಷಿಯು ಇಮ್ಮಡಿಸಿ ಜೀವನ ಹಸನಾಗಲಿ
ಅವಮಾನಗಳ ಸದ್ದಡಗಿ ಬಿಗುಮಾನಗಳು ತೊಲಗಿ
ಸಹಬಾಳ್ವೆಯ ಮನದಲಿ ನವಚಿಂತನೆಯು ಮೊಳಗಲಿ !
ಕಾಡಜ್ಜಿ ಮಂಜುನಾಥ