ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಿನ ಪಾತ್ರೆಯ ಹಿಡಿದ ಇಕ್ಕಳವು ಸಡಿಲಾಗದಿರಲಿ
ಎದೆಯ ದುಮ್ಮಾನದ ತಿದಿಗೆ ಬಾಳು ಮಡಿಲಾಗದಿರಲಿ

ಸಾಗರದ ಭಂಡಲೆಗಳಿಗೆ ಹೆದರಿ ಈಜನು ಮರೆತೆಯಾ
ನೋವಿನ ಅಲೆಗಳಲಿ ಮಿಂದ ಮನವು ಕಡಲಾಗದಿರಲಿ

ತೂರಿದ ಕಾಳು ಗಾಳಿಯ ಪಾಲಾದರೆ ಬಾಳುವುದೆಂತು
ಗುಟ್ಟು ಬಿಟ್ಟು ಕೊಡದ ಮೊಟ್ಟೆಯ ಒಡಲಾಗದಿರಲಿ

ಉಕ್ಕುವ ಉಮ್ಮಳಕೆ ತಾಳ್ಮೆ ಚಿಮುಕಿಸಿ ಸಹನೆಯಿರಿಸು
ಕಾಮನ ಬಿಲ್ಲನು ಕಾಣುವ ಕನಸದು ಕಡೆಯಾಗದಿರಲಿ

ನಭದ ನಕ್ಷತ್ರದ ಉಮೇದಿನಲಿ ಉದುರದಿರು ನೆಲಕೆ
ನೋಟದ ಮೊನಚಿಗೆ ಉರಿಯುವ ಕಿಡಿಯಾಗದಿರಲಿ

ನಡಗುವ ಎದೆಯಲಿ ಡಂಗುರ ಕೇಳಿದೆ ಕಿವಿನಿಮಿರಿಸು
ರಂಗಿನ ಲೋಕದ ಥಳಕು ಬಳಕದು ತಡೆಯಾಗದಿರಲಿ

ಬಿದಿರು ಬೊಂಬೆಯ ಬಾಳಿದು ಸನಿಹ ಬಂದರೆ ಸಾವು
ವಿಧಿ ಎಳೆದ ಲಕ್ಷ್ಮಣರೇಖೆ ದಾಡುವ ಅಡಿಯಾಗದಿರಲಿ

ಬಾಳು ಅದಲು ಬದಲು ಸುಖದುಃಖಗಳ ಧಡಂದುಡಕಿ
ಮಣ್ಣಿನ ಋಣವನು ಕಡೆಗಣಿಸುವ ನಡೆಯಾಗದಿರಲಿ

ಶಮೆಯಲಿ ಕಣ್ಣಿಗೆ ಕಾಣದ ನಸೀಬಿನ ಬತ್ತಿ ಬೆಳಗುತಿದೆ
ಬಣ್ಣದ ಬಯಲಲ್ಲಿ ಬದುಕು ಹಂಗಿಗೆ ಎಡೆಯಾಗದಿರಲಿ


About The Author

1 thought on “ಶಮಾ ಜಮಾದಾರ ಅವರ ಗಜಲ್”

  1. ನನ್ನ ಗಜಲ್ ಪ್ರಕಟಿಸಿದ ಸಂಗಾತಿ ಪತ್ರಿಕೆಗೆ ಹೃತ್ಪೂರ್ವಕ ಧನ್ಯವಾದಗಳು

    ಶಮಾ ಜಮಾದಾರ

Leave a Reply

You cannot copy content of this page

Scroll to Top