ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ʼತನಗ ಸಂಪುಟʼ


೧
ಅಂದುಕೊಂಡುದ ಮಾಡೆ
ದೈವ ನೀಡಿದ ವೇಳೆ
ಮತ್ತೊಂದು ಮುಂಜಾನೆಯು
ದುಡಿಯೆ ಸಾರ್ಥಕವು
೨
ಮನದಲಿ ನಿಂತಿಹ
ಚಿತ್ರವನು ನೆನೆಯೆ
ಮೂಡುವದು ನವೀನ
ಭಾವನೆಯ ಗೊನೆಯೆ
೩
ಪ್ರೀತಿಗೆ ಸೋತ ಮೇಲೆ
ಗೆಲ್ಲುವ ಮಾತೆಲ್ಲಿದೆ
ಸುಂದರ ಬಾಳಿಗದು
ಮುನ್ನುಡಿಯೆ ಆಗಿದೆ
೪
ಹಟಕ್ಕೆ ಬಿದ್ದರಲ್ಲಿ
ಪ್ರೀತಿಯ ಸೋಲಹುದು
ಅನುಸರಿಸಿ ನಡೆ
ಬದುಕೇ ಗೆಲ್ಲುವದು
೫
ನನ್ನೊಳಗಿನೊಳಗು
ಅವಳೇ ಆಗಿಹುದು
ಬಿಟ್ಟು ಇರುವೆನೆನೆ
ಜೀವವೆ ಹೋಗುವುದು
೬
ಕುದಿಯುವ ಹಾಲಿಗೆ
ನೀರು ಹಾಕಲು ಶಾಂತ
ಕುದಿವ ಮನಸಿಗೆ
ಸಮಾಧಾನ ಸುಖಾಂತ
೭
ಇತರರ ಒಳಿತ
ಹುಡುಕೊದಾಗದಿರೆ
ನಿನ್ನೊಳಗೆಲ್ಲೊ ತಪ್ಪು
ಇರಬೇಕು ಅರಸು
೮
ಮಾತುಗಳ ಸವಿಯು
ಏನೆಂದು ಅರಿತದ್ದು
ಅವಳು ಮಾತಾದಾಗ
ಮುತ್ತಿಗೂ ಮಿಗಿಲವು
೯
ದಿನದ ಕಾರ್ಯಗಳ
ಎದ್ದೊಡನೆ ಯೋಜಿಸು
ದಿನಗಳೆದ ಹಾಗೆ
ಕಾರ್ಯವನು ಹೂಣಿಸು
೧೦
ಬೆಲ್ಲವೇ ಸಿಗೊದಿಲ್ಲ
ಬೇವೆಲ್ಲಿಂದ ಸಿಕ್ಕೀತು
ಬೇವು ಬೆಲ್ಲದ ಮಾತು
ಕಾವ್ಯೋಪಮೆ ಆದೀತು
೧೧
ಯುಗಾದಿಯು ಬಂದಿದೆ
ಬೇವು ಬೆಲ್ಲ ಕೊಡೆಂದೆ
ನೀನೇ ಬೇವಂಥವನು
ನಾನು ಬೆಲ್ಲವೆಂದಳು
—————————————————————————————————————-
ವೈ.ಎಂ.ಯಾಕೊಳ್ಳಿ
