ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ನಿನ್ನ ನಿರೀಕ್ಷೆಯಲ್ಲಿ

ಬಿಗಿದ ಕೈ ಬೆರಳುಗಳ
ತುಸು ಸಡಿಲಿಸು
ಬೆಸೆದು ನೋಡುವೆ
ನಿನ್ನ ಬೆರಳಿನಲಿ ನನ್ನ ಬೆರಳ
ಬೆವರು ಬೆರೆತ ಅಂಗೈಗೆ
ಹೊಸದೊಂದು ಬರಹ ಬರೆಯುವೆನು
ನೀಡಿದ ಆವಿ ಆರುವ ಮುನ್ನ
ನನ್ನುಸಿರಿಗೆ ಹನಿಯ ಬೆರೆಸುವೆಯ?
ನಿನ್ನ ಧ್ಯಾನದಿ ಮೌನವಾಗಿಹುದು ಮನ
ನನ್ನೆದೆಯ ಮಿಡಿತ ನೀ
ಮರೆಯಾದೆ ನೀ ಎಲ್ಲಿ
ನೀಲಾಗಸನೇ ಕರಿಕೂದಲ ಹರಡಿ
ಹನಿಯ ಬಚ್ಚಿಟ್ಟೆ ಏಕೆ?
ಹಸುರು ಹಸುರಾದ ಕನಸಿಗೆ
ಉಸಿರಿಲ್ಲದಾಗಿದೆ
ಹರಡಿದ ಕೂದಲ ಬಿಗಿಹಿಡಿದು
ಮುಗಿಲ ಶುಭ್ರವಾಗಿಸಿ
ಎಲ್ಲಿ ಹೊತ್ತು ಸಾಗಿಸಿದೆ ಹನಿಯ?
ದಣಿದ ಮನಸು ಸೊರಗಿಹುದು
ಬಾನ ಬಿರಿದು ನೀ ಸ್ಫುರಿಸಲು
ಯಾಕಿಷ್ಟು ಚಿಂತೆ?
ಸೋಲುತ್ತಿವೆ ನೆರಿಗೆ ಹಿಡಿಯುವ ಕೈಗಳು
ಬಲನೀಡು ಹನಿಯ ಸ್ಪರ್ಶದಿ
ಹಸುರು ಸೀರೆಯ ಉಡಲು
ನೋಡು ಮತ್ತೆ ಮುಷ್ಟಿಯಲ್ಲಿ ಬಿಗಿದಿಟ್ಟಿರುವೆ
ಬಳಲಿ ಬೆವರಿದ ಕನಸುಗಳ
ನೀ ಉಸಿರಾಗುವೆಯೆಂದು
ಮುಷ್ಟಿ ತೆಗೆದು ಒಪ್ಪಿಸುವೆ
ನನ್ನ ನೆನಪು ಮಾಸದಿರಲಿ.
ಹನಿಯೇ.. ನಾನು ನೀನು ಸೇರಲು
ಜಗಮಗಿಸುವುದು ಹಸುರಲ್ಲಿ ಹೃದಯ
ನಿರೀಕ್ಷಿಸುತ್ತಿದೆ ಒಡಲು ನಿನ್ನ ಸಖ್ಯವ
ಚಿಗುರೆಲೆಯ ಸವಿ ಉಣ್ಣಲು
ವಿಮಲಾರುಣ ಪಡ್ಡoಬೈಲು
