ಕಾವ್ಯ ಸಂಗಾತಿ
ಎಮ್ಮಾರ್ಕೆ
ಕಾವ್ಯವೆಂದರೆ..

ಕಾವ್ಯವೆಂದರೆ
ಕಂದನ ಲಾಲಿ
ವೃದ್ಧನ ಜೋಲಿ
ಕಾವ್ಯವೆಂದರೆ
ಬಸುರಿಯ ಕಾಮನೆ
ಬಂಜೆಯ ಬವಣೆ
ಕಾವ್ಯವೆಂದರೆ
ಬಡವನ ಗುಡಿಸಲು
ಧನಿಕನ ಮಹಲು
ಕಾವ್ಯವೆಂದರೆ
ತಬ್ಬಲಿಯ ತಲ್ಲಣ
ಅರಸನಿತ್ತ ಔತಣ
ಕಾವ್ಯವೆಂದರೆ
ಮುಗಿಲಿನತ್ತ ಚಿಗುರು
ನೆಲಕ್ಕಿಳಿದಿಹ ಬೇರು
ಕಾವ್ಯವೆಂದರೆ
ಗೀಚಿದೆಲ್ಲವು ಸಲ್ಲ
ತೋಚಿದ್ದೂ ಅಲ್ಲ
ಕಾವ್ಯವೆಂದರೆ
ಭೂತದ ಹೂಡಿಕೆ
ಭವಿಷ್ಯದ ಬೇಡಿಕೆ
ಕಾವ್ಯವೆಂದರೆ
ಹೇಳಲೆನಿತು ಕಷ್ಟ
ಕೇಳಲೆನಿತು ಇಷ್ಟ
ಕಾವ್ಯವೆಂದರೆ
ಮಾತಾಗುವ ಮೌನ
ಮೌನದಲ್ಲಿನ ಧ್ಯಾನ
ಕಾವ್ಯವೆಂದರೆ
ವಿರತಿಯ ವಿವಶ
ಆತ್ಮರತಿಯ ಕೈವಶ
ಕಾವ್ಯವೆಂದರೆ
ಸಂಗತಿಯ ಯೋಗ
ವಿಸಂಗತಿಯ ತ್ಯಾಗ
ಕಾವ್ಯವೆಂದರೆ
ಹಿತದ ಪ್ರವೃತ್ತಿ
ವಿಹಿತದ ನಿವೃತ್ತಿ
ಕಾವ್ಯವೆಂದರೆ
ಏನು? ಎತ್ತ? ಹೇಗೆ?
ಅದೇ,ಅತ್ತ,ಹಾಗೆಯೇ
ಎಮ್ಮಾರ್ಕೆ

ಕಾವ್ಯವೆಂದರೆ
ಬಯಲಿನ ಹರವು
ಶೂನ್ಯದ ಇರವು
ಪೂರ್ಣದ ಕುರುಹು.
_________________
ಚಿಕ್ಕ ಸಾಲುಗಳಲ್ಲೆ ಬೃಹದರ್ಥಗಳನ್ನಡಗಿಸಿದ್ದೀರಿ.ಚೊಕ್ಕ ಕವಿತೆ!