ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಸುಳ್ಳು ಸತ್ಯವಾಗಬಹುದು

ಅಳಿಲು ಸೇತುವೆ ಕಟ್ಟಬಹುದು,
ಕೊಳಲು ಗೋವು ಕರೆಯ ಬಹುದು,
ಮರಳಿನಿಂದ ಮಡಿಕೆ ಮಾಡಬಹುದು,
ಅಹಲ್ಯೆ ಕಲ್ಲಾಗಬಹುದು.
ಅನುಭವ ಮಂಟಪ ಚಾರಿತ್ರಿಕ ಹೇಗಾದೀತು?
ಶಂಬುಕನ ಕೊಂದವ ದೇವರಾಗಬಹುದು
ವಾಲಿ ವಧೆ ಗೈದವ ದೇವರಾಗಬಹುದು
ಸ್ತ್ರೀಯನ್ನು ಕಾಡಿಗಟ್ಟಿದವ ದೇವರಾಗಬಹುದು
ಸಾವು ಕಂಡವರು ದೇವರಾಗಬಹುದು
ಕಲ್ಲು ಕೂಡ ದೇವರಾಗಬಹುದು
ಅನುಭವ ಮಂಟಪ, ಮಂಟಪ, ಅಥವಾ ಸಂಸತ್ತು ಹೇಗಾದೀತು?
ಸಂಸ್ಕೃತ ಮಂತ್ರವಾಗಬಹುದು
ಸಂಸ್ಕೃತ ದೇವ ಭಾಷೆ ಆಗಬಹುದು
ಸಂಸ್ಕೃತ ಬಲ್ಲವ ಪಂಡಿತನಾಗಬಹುದು
ಹುಂಡಿಯಲ್ಲಿ ಹಣ ಹಾಕಿದವ ಭಕ್ತನಾಗಬಹುದು
ಕನ್ನಡ ಬಲ್ಲವ ಪಂಡಿತ ಹೇಗೆ ಆದಾನು?
ಕನ್ನಡ ಭಾಷೆಯ ವಚನ ಸ್ವಂತ ಹೇಗಾದೀತು?
ಕರಡಿ ಜಾಂಬುವಂತ ಆಗಬಹುದು
ವಾನರ ಹನುಮಂತನಾಗಬಹುದು
ಹರಿಣಿ ಮಾರೀಚನಾಗಬಹುದು
ಶಿಲೆ ಅಹಲ್ಯೆ ಆಗಬಹುದು
ಗಿಡ ಸಾದ್ವಿ ತುಳಸಿ ಆಗಬಹುದು
ಕಲ್ಯಾಣದಲ್ಲಿ ನಡೆದಿದ್ದು ಕ್ರಾಂತಿ ಹೇಗಾದೀತು?
ಬಿಡು ಮರುಳೆ
ಎತ್ತು ಎಮ್ಮೆ ಆಗಬಹುದು
ಬಿತ್ತು ಜಮೀನ್ದಾರರದ್ದಾಗಬಹುದು
ಸ್ವತ್ತು ಅರಸನದ್ದಾಗಬಹುದು
ಹುಂಡಿ ಅರ್ಚಕನದ್ದಾಗಬಹುದು
ಅಂತ್ಯಜ ಅರಸನಾಗಬಹುದೆ?
ವಿಪ್ರರಿಗಲ್ಲದೆ ಅನ್ಯರಿಗೆ ದೇವರು ಸ್ವಯವಾಗದು
ಗಂಗೆ ಮಿಂದರೆ ದೇವರು ಸಿಗಬಹುದು
ಮರ ಸುತ್ತಿ ಬಂದಲ್ಲಿ ದೇವರು ಸಿಗಬಹುದು
ಯಜ್ಞವಿಲ್ಲದೆ ಸುಜ್ಞಾನ ಸಿಗದು
ಬಲಿ ಕೊಡದವ ಭಕ್ತನಾಗಬಹುದೆ?
ಶಿವನಿರುವುದು ಕೈಲಾಸ ಆಗಬಹುದು
ವಿಷ್ಣು ವಾಸಗೈದುದು ವೈಕುಂಠ ವಾಗಬಹುದು
ಸ್ವರ್ಗ ನರಕ ಪಾಪ ಪುಣ್ಯಗಳುಂಟು ಜಗದಲಿ
ವಾಯು ವರುಣ ಮೇಘ ಇಂದ್ರ ಚಂದ್ರ ಯಮ ನಿಯಮ
ಉಂಟು ಖಾತೆಗೊಬ್ಬ ದೇವನಾಗ ಬಹುದು
ಏಕ ದೇವನೆಂಬುದು ಹೇಗಾದೀತು?.

ಸಟೆ ನುಡಿವ ನಾಲಿಗ
ನುಡಿದ ನುಡಿವ ನೃತವೆಂ
ಬಗೆದು ಬರೆಹಕ್ಕಿಳಿಸಲು
ಕೈ ಸೋಲುತ್ತಿಹುದು
ಸಟೆ ನುಡಿವ ನಾಲಿಗ ಸೋಲಬಹುದೆ?
ಶಾಂತಲಿಂಗ ಪಾಟೀಲ
ಅದ್ಭುತ ಕವಿತೆ ಗುರುಗಳೇಅತಿ ಸುಂದರವಾಗಿ ಮೂಡಿ ಬಂದಿದೆ.ಇನ್ನೂ ಹೆಚ್ಚು ಕವನಗಳು ತಮ್ಮ ಲೇಖನಿಯಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ.
ಧನ್ಯವಾದಗಳು, ತಮ್ಮ ಸಲಹೆ ಮತ್ತು ಪ್ರೇರಣಾದಾಯಕ ಕಮೆಂಟ್ ಗೆ