ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
ಸಾವಿರ ಸಾವಿರ ಸಲಾಂ ಸುನೀತಾ

ಹೆಣ್ಣೆಂದರೆ ಮುಟ್ಟು ಮೈಲಿಗೆ
ಬೇನೆ ಬೇಸರಿಕೆ ಹೆರಿಗೆಗೆ
ಕಸ ಮುಸುರೆಗೆ , ಭೋಗಕೆ
ಭೋಜನ ತಯಾರಿಕೆಗೆ
ಹೆಣ್ಣೆಂದರೆ ಕೆಳದರ್ಜೆಯವಳು
ಮೊಣಕಾಲು ಕೆಳಗಿನ ಬುದ್ಧಿ
ಯವಳು ಬಿಟ್ಟಿ ಕೆಲಸದವಳು
ನಾ ಹೇಳ್ದಂತೆ ಕೇಳಬೇಕಾದವಳು
ಎಂದೆಲ್ಲಾ ಸಾರಿ ಸಾರಿ ಮೂಲೆ
ಗುಂಪು ಮಾಡಿ ಕೂರಿಸಿದ
ದೇವತೆಯ ಪಟ್ಟವನೂ ಕಟ್ಟಿದ
ದೇಶದ ಮೂಲದವಳು ನೀನು!
ಇಂದು ನೀ ಏರಿದ ಎತ್ತರ ಸಾಧನೆ
ನಿನ್ನ ಧೈರ್ಯ ಸ್ಥೈರ್ಯ ನಿಲುವು
ಭರವಸೆಯ ಎಳೆ ಹಿಡಿದು
ಅಂತರಿಕ್ಷದಲ್ಲಿ ನವಮಾಸ ಕಳೆದು
ಕುಣಿ ಕುಣಿದು ಭುವಿಗಿಳಿದು ಬಂದ
ನಿನ್ನ ಜೀವನೋತ್ಸಾಹ , ಆತ್ಮವಿಶ್ವಾಸ ಅಬ್ಬಾ! ಪದಗಳೇ ಸಾಲವು .
ಮಾತುಗಳೇ ಹೊರಳವು…
ಒಮ್ಮೊಮ್ಮೆ ಹೀಗೂ ಅನ್ನಿಸುವುದು
ನೀನಿಲ್ಲೇ ಇದ್ದಿದ್ದರೆ ನನಸಾಗುತ್ತಿತ್ತೇ?! ಕನಸು? ಕತ್ತರಿಸುತ್ತಿದ್ದರು ನಿನ್ನ ರೆಕ್ಕೆ
ಪುಕ್ಕ ಮತ್ತೆ ಮತ್ತೆ ಚಿಗುರದಂತೆ !!
ಹಾಗೊಮ್ಮೆ ಇಲ್ಲಿಂದಲೇ ಹೋಗಿ
ನವಮಾಸ ಪರಪುರುಷನೊಟ್ಟಿಗೆ
ಕಳೆದು ಮರಳಿ ಬಂದ ನಿನ್ನ
ಹಿಂದೆ ಮುಂದೆ ಹೋದಲ್ಲಿ ಬಂದಲ್ಲಿ
ಹುಟ್ಟಿಕೊಳ್ಳುತ್ತಿತ್ತು ಬಣ್ಣ ಬಣ್ಣದ ರೋಚಕ ರೋಮಾಂಚಕ ಕತೆಗಳು!
ರೆಕ್ಕೆ ಪುಕ್ಕ ಕಟ್ಟಿಕೊಂಡು ನಿನ್ನಂತೆ
ಹಾರುತ್ತಿದ್ದವು ನಭಕೆ ಎಲ್ಲೆ ಮೀರಿ
ನಿನ್ನ ಸಕುಟುಂಬ ನಿನಗೆ ನೀಡಿದ
ಸಹಕಾರಕೆ ನಿನ್ನ ಮೇಲೆ ಅಮಿತ ವಿಶ್ವಾಸವಿಟ್ಟ ಆsss ನೆಲಕೆ
ನೀ ಕೊಟ್ಟೆ ಉತ್ತರ ದಿಟ್ಟತನದಿ
ಮೈ ಚಿವುಟಿ ನೋಡಿಕೊಳ್ಳುವಂತೆ
ಗಂಡೆದೆಯ ಗಟ್ಟಿಗರ ತಲೆ ಸಿಡಿಯುವಂತೆ
ನೂರ್ಕಾಲ ನೆನಪಾಗಿ ಉಳಿ
ಯುವಂತೆ ಮುಟ್ಟಿ ನೋಡುವಂತೆ!

ನಿನ್ನ ಸಾಧನೆಯೊಂದು ಮೈಲಿಗಲ್ಲು
ನೀನೇ ನಮಗಿಂದು ಅರ್ಥವಾಗದ
ಕಾಮನಬಿಲ್ಲು ಸಾವಿರ ಸಾವಿರ ಸಲಾಂ
ಸುನೀತಾ ‘ಹೆಣ್ತನದ ಹಮ್ಮಿನಿಂದ!!’
—————————————————————————————————–
ಸುವಿಧಾ ಹಡಿನಬಾಳ