ಕಾವ್ಯ ಸಂಗಾತಿ
ಸುಜಾತಾ ರವೀಶ್
ಕವಿತೆ ಹುಟ್ಟಬೇಕಾದರೆ


ಮೊಗ್ಗರಳಿ ಹೂವಾಗುವ ನಯ ಬೇಕು
ಸ್ಪರ್ಶಿಸಿದರೆ ಹಾಳಾಗುವ ಭಯ ಬೇಕು
ಮಗುವಂತೆ ಅಕುಟಿಲ ಮನ ಬೇಕು
ಮುಗ್ದತೆಯ ನಿರ್ಮಲ ಭಾವ ಬೇಕು
ಅನುಭವವ ಅನುಭಾವಿಸುವ ಹೃದಯವಂತಿಕೆ ಬೇಕು
ಅಹಂಕಾರದ ಹೆಸರಿರದ ವಿನಯವಂತಿಕೆ ಬೇಕು
ಪದಗಳನು ಹಾದರಿಸದ ಮಡಿವಂತಿಕೆ ಬೇಕು
ಶಬ್ದಗಳಲಿ ಮೌನ ತುಂಬುವ ಬುದ್ದಿವಂತಿಕೆ ಬೇಕು
ಸ್ವಾತಿ ಮಳೆಯ ಕಾಯುವ ಚಿಪ್ಪಿನ ಸಹನೆ ಬೇಕು
ಪ್ರೀತಿ ಮಾಡುವ ಜೋಡಿಯ ಸಕಲ ಅರ್ಪಣೆ ಬೇಕು
ಭೀತಿ ತರುವ ಕತ್ತಲೆಯ ಗೂಢ ರಹಸ್ಯ ಬೇಕು
ನೀತಿ ಹಾದಿಯ ತುಳಿವ ಸದಾ ಎಚ್ಚರ ಬೇಕು
ಎದೆಯ ಭಾವಗಳ ಕವನವಾಗಿಸುವ ಕಾತುರ
ಆಗದಿದ್ದರೆ ಪ್ರಾಣವೇ ಹೋಗುವುದೆಂಬ ತಹತಹ
ಬೇಕೇ ಬೇಕು ಕವನ ಹುಟ್ಟಬೇಕಾದರೆ
ಭಾವಬಸಿರ ನಿರಾಳ ಪ್ರಸವವಾಗಬೇಕಾದರೆ
——————————————————————————————————
ಸುಜಾತಾ ರವೀಶ್