ಸುಧಾ ಪಾಟೀಲ್ ಅವರ ಕವಿತೆ-ಹುಡುಕಾಟ

ಹೊರಳು ಮರುಳಿನ
ಹಾದಿಯಲಿ
ನಾನೇನ ಕಂಡ
ಕಪ್ಪೆಚಿಪ್ಪಿನೊಳಗಣ ಮುತ್ತೇ
ಕಂಕಣರಾಶಿಯೇ
ಮನದೊಳಗಣ ಸಂತೃಪ್ತಿಯ
ಸರಮಾಲೆಯೇ
ಬದುಕಿನ ಬವಣೆಯ
ಜಾಡಿನಲ್ಲಿ ಹುಡುಕಲಿ
ಏನನ್ನು
ಹೊರಗಣ ಫಳಫಳಿಸುವ
ದೀಪಗಳ ಚಮತ್ಕಾರವೇ
ಮನದಂಗಳದಿ ಹೊಮ್ಮುವ
ಭಾವಪುಷ್ಪವೇ
ತಿಳಿಯದೆ ಅಲೆದೆ
ಗೊಂದಲದ ಗೂಡಿನಲಿ
ಅಸ್ಪಷ್ಟ ನಿಲುವಿನಲಿ
ಅಗೋಚರವಾದ ಹಾದಿಯ
ತಿರುವುಗಳಲಿ
ಹುಡುಕಿದರೂ ಸಿಗದ
ಪರಮೋಚ್ಚ ಸತ್ಯವ
ಹುಡುಕಲು ಅಲೆಯುತ್ತಿದ್ದೇನೆ
ಕ್ಷಣ ಕ್ಷಣದ ದುಗುಡದಲಿ
ಹೊತ್ತು ಗೊತ್ತಿನ
ಅರಿವಿಲ್ಲದೆ


2 thoughts on “ಸುಧಾ ಪಾಟೀಲ್ ಅವರ ಕವಿತೆ-ಹುಡುಕಾಟ

  1. ಹುಡುಕಾಟದ ಕವಿತೆ ಅರ್ಥಪೂರ್ಣವಾಗಿದೆ ಮೇಡಂ ಧನ್ಯವಾದಗಳು

  2. ಪರಮೋಚ್ಛ ಸತ್ಯ
    ಹುಡುಕಿದರೂ ಸಿಗದಂತೆ
    ಸಿಕ್ಕರೂ ದಕ್ಕದಂತೆ
    ಎಮ್ಮ ಅರಿವಿಗೆ ನಿಲುಕದಂತೆ
    ಈ ಅಂತೆ ಕಂತೆ ಮರೆತು
    ಇರಬೇಕಂತೆ ನಿಶ್ಚಿಂತನಂತೆ!

    ಗಿರಿ ಗವ್ಹರದೋಳಿಲ್ಲ
    ಕದಳಿ ಕಾನನದೋಳಿಲ್ಲ
    ಹಿಮ ಬೆಟ್ಟದಲ್ಲಿಲ್ಲ
    ಕಣಿವೆ ಕಂದರದಲ್ಲಿಲ್ಲ
    ದಣಿವು ಮರೆತು, ತೃಣವೂ ನಿಲ್ಲದೆ
    ಅರಸಿದರು ಸಿಗದು !

    ಅಳಿಸಂಕುಳವೆ, ಮಾಮರವೆ
    ಬೆಳದಿಂಗಳೆ ಕೋಗಿಲೆಯೇ
    ನಿಮ್ಮ ನಿಮ್ಮರೆಲ್ಲರಲ್ಲಿ
    ಒಂದು ಬೇಡುವೆ ಎನ್ನೊಡೆಯ
    ಚೆನ್ನಮಲ್ಲಿಕಾರ್ಜುನ ಕಂಡೊಡೆ
    ಕರೆದು ತೋರಿರೆ ಅಕ್ಕ ಹಲುಬಿದಳಲ್ಲವೆ?

    ಒಲಿಸಲೂ ಬೇಕಂತೆ ಅಳವು
    ಹೊರಗೆ ಹುಡುಕಿ
    ಒಳಗೆ ಮರೆತು
    ತನ್ನ ತಾನರಿಯದೆ
    ತನ್ನಂತೆ ಪರರ ಬಗೆಯದೆ
    ಇರಬೇಕಂತೆ ಆಸೆ ಹೊಸೆಯದೆ!

    -ಶಾಂತಲಿಂಗ ಪಾಟೀಲ
    21.03.2025

Leave a Reply

Back To Top