ಪುರುಷ ಅಸ್ಮಿತೆಯ ಹುಡುಕಾಟ – ಚಿಂತನಾ ಲಹರಿ- ಡಾ.ಯಲ್ಲಮ್ಮ ಕೆ

ಕಳೆದ ಐದಾರು ವರುಷಗಳ ಹಿಂದೆ ರವಿ ಬೆಳಗೆರೆಯವರು ನಡೆಸಿಕೊಟ್ಟ ʼಎಂದೂ ಮರೆಯದ ಹಾಡುʼ ಕಾರ್ಯಕ್ರಮದ ನಿರೂಪಣೆಯ ಒಂದು ಝಲಕ್ಕಿನೊಂದಿಗೆ ನನ್ನ
ಈ ಲೇಖನದ ವಿಚಾರಗಳಿಗೆ ಮುಂದಡಿಯಿಡುವೆ
 

ʼಹಾಡು ಯಾವುದು ಅಂತ ಹೇಳಿದರೆ ಇಲ್ಲಿರೊ ಹೆಣ್ಣುಮಕ್ಕಳ ಕಣ್ಣಲ್ಲಿ ನೀರು ಬರೋ ಚಾನ್ಸಸ್ ಇದೆ, ಕುಲವಧು ಚಿತ್ರದ್ದು, ವಿ. ಸೀತಾರಾಮಯ್ಯನವರು ಬರದಿರೋದು, ಸಂಗೀತ ಜಿ.ಕೆ. ವೆಂಕಟೇಶರವರು ಮಾಡಿರೋದು, ಎಸ್. ಜಾನಕಿರವರು ಹಾಡಿರೋದು ʼಎಮ್ಮ ಮನೆಯಂಗಳದಿʼ ; ಇದನ್ನು ಹಾಡಿದಾಗ ಒಂದು ಮದುವೆ ಮನೆಯಲ್ಲಿ ಯಾರಾದರೂ ಕಣ್ಣೀರಿಡದೇ ಎದ್ದೋದರೆ ಅವರು ವಾಲಗದವರು ಕೂಡ ಆಗಿರೋದಿಲ್ಲ ಎಂಬ ಮಾತನ್ನು ಹೇಳ್ತಿದ್ದಿನಿʼ  ಎಂದು ಹೇಳುತ್ತಲೇ ಹಾಡು ಶುರುವಿಟ್ಟುಕೊಳ್ಳುತ್ತದೆ – ಯುವಪೀಳಿಗೆಗೆ ಪರಿಚಯ ಇಲ್ಲ ಎನಿಸುತ್ತೆ,  ಆ. ಹಾಡನ್ನೊಮ್ಮೆ
ದಯವಿಟ್ಟು ಕೇಳಿ.

“ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧವು ಒಂದು ಸಾಮಾಜಿಕ ಚೌಕಟ್ಟಿನೊಳಗೆ ಮಾನ್ಯತೆ ಪಡೆಯುವ ಸ್ಥಿತಿಯೇ ವಿವಾಹ” ಎಂಬ ವ್ಯಾಖ್ಯಾನವು ಇಂದು ಔಟ್ ಡೇಟೆಡ್ ಎಂದೆನಿಸುತ್ತದೆ, ಇದಕ್ಕೆ ಬದಲಾಗಿ ಗಂಡು-ಗಂಡು, ಹೆಣ್ಣು-ಹೆಣ್ಣು, ಇನ್ನೂ ಮುಂದುವರೆದು.., ತನ್ನನ್ನು ತಾನೇ ಮದುವೆಯಾಗುವಂತಹ ಸ್ವ-ವಿವಾಹ ಎನ್ನುವ ಪರಿಕಲ್ಪನೆ ಕಾಣುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ, ಗಂಡೂ ಕೂಡ ಹೆಣ್ಣಿನಂತೆ ಮಗುವನ್ನು ಹೆರಬಲ್ಲ, ತಾಯ್ತನದ ಸುಖವನ್ನು ಅನುಭವಿಸಬಲ್ಲ ಎಂಬ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸಿಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ʼಅಂತರಾಷ್ಟ್ರೀಯ ಮಹಿಳಾದಿನದ ಆಚರಣೆʼಯ ಈ ಸಂದರ್ಭದಲ್ಲಿ ʼಅರ್ಧನಾರೀಶ್ವರನಾದ ಶಿವನ ಪರಿಕಲ್ಪನೆʼ ಮುಂದಿಟ್ಟುಕೊಂಡು ನನ್ನೀ ಉಪನ್ಯಾಸದಿ ʼಸ್ತ್ರೀ ಅಸ್ಮಿತೆʼಯ ಪ್ರಶ್ನೆಯ ಬದಲಾಗಿ ʼಪುರುಷ ಅಸ್ಮಿತೆಯ  ಹುಡುಕಾಟʼಕ್ಕಾಗಿ ಮೀಸಲಿರಿಸಿ, ಆ ಬಗೆಗೆ ನನ್ನೆರೆಡು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ,

ಇಡೀ ಮನುಕುಲ ಹುಟ್ಟಿದ್ದು, ಬೆಳೆದದ್ದು ಮತ್ತು ಅಳಿದದ್ದು ಹೆಣ್ಣಿನಿಂದಲೇ ಎಂದು ಹೇಳಿಕೊಂಡು ಬಂದಿರುವ ಮಾತು ಅಕ್ಷರಶಃ ಸತ್ಯವೆಂತಲು ಒಪ್ಪಿಕೊಳ್ಳೋಣ, ಹಾಗಾದರೆ ಸೃಷ್ಟಿಯ ಮೂಲ ಹೆಣ್ಣೆ ಆಗಿದ್ದು, ಮಾತೃಪ್ರಾಧಾನ್ಯತೆಯನ್ನು ಹೊಂದಿದ್ದ ನೆಲದಲ್ಲಿ ಕಾಲಾಂತರದಿ ಸ್ಥಿತ್ಯಂತರ ಗೊಂಡು ಪುರುಷ ಮೇಲುಗೈಯನ್ನು ಸಾಧಿಸಿದ ಬಳಿಕ – ಪುರುಷನೂ ಕೂಡ ಹೆಣ್ಣಿನಂತೆ ಹೆರಬಲ್ಲ ಎನ್ನುವ ಹಂತಕ್ಕೆ ತಲುಪಿದ ಈ ಸಂದರ್ಭದಿ ರಾಜಕಾರಣಿಗಳು ತಮ್ಮ ಸೀಟ್ ಉಳಿಸಿಕೊಳ್ಳುಲು ಹೆಣಗುವಂತೆ ಇಂದು ಪುರುಷ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕೆ ಹೆಣಗುವಂತ ಪರಿಸ್ಥಿತಿ ಎದುರಾಗಿದ್ದು ವಿಷಾದನೀಯ, ಖೇದಕರ ಸಂಗತಿ.

ನಿಜಕ್ಕೂ ರವಿಬೆಳೆಗೆರೆಯವರು ಮಾತಿನ ಮೋಡಿ ಹಾಡಿನ ಭಾವ-ಜೀವವನ್ನು ಕಲಕುತ್ತಲೇ ಅದೊಂದು ಎಂದೂ ಮರೆಯದ ಹಾಡಾಗಿ ಎದೆಯ ತಟ್ಟಿದೆ, ಹಾಗಾಗಿಯೇ ಕೇಳಿದಕೂಡಲೆ ನಿಸ್ಸಂಶಯವಾಗಿ ಕಣ್ಣಾಲಿಗಳು ತೇವಗೊಳ್ಳುವವು.

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ||
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು

ಹೆಣ್ಣಿನ ಕುರಿತಾಗಿ ಹೆತ್ತ-ತಂದೆ೦ತಾಯಂದಿರುಗಳು ಇಷ್ಟೊಂದು ದೈನ್ಯತೆಯಿಂದ ಬೇಡಿಕೊಳ್ಳುವು ದನ್ನು ಕರುಳು ಹಿಂಡಿದಂತಾಗುತ್ತದೆ. ಹೆಣ್ಣನ್ನು ಮಾರುಕಟ್ಟೆಯ ಸರಕಿನಂತೆ ಭಾವಿಸಿ ಕೊಡು-ಕೊಳ್ಳುವಿಕೆಯನ್ನು ನಡೆಸಿರುವಂತದ್ದು,ಮಂದುವರೆದು ʼಕೊಟ್ಟಹೆಣ್ಣು ಕುಲಕ್ಕೆ ಹೊರಗುʼ ಎನ್ನುವ ಗಾದೆಮಾತಿನಂತೆ ;

ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೆ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಗುವವರು
ಇವರ ದೇವರೆ ನಿನ್ನ ದೇವರುಗಳು.

ಒತ್ತರಿಸಿಕೊಂಡು ಬರುವ ದುಃಖವನ್ನು ತಡೆತಡೆದು, ಕಣ್ಣೀರುಗರೆವ ಮಗಳನ್ನು ಸಂತೈಸುತ್ತಾ..,

ನಿಲ್ಲು ಕಣ್ಣೋರಿಸಿಕೊ ನಿಲ್ಲು ತಾಯ್ ಹೋಗುವೆವು
ತಾಯಿದಿರ ತಂದೆಯಿರ ಕೊಳಿರಿ ಇವಳಾ
ಎರಡು ಮನೆಗಳ ಹೆಸರು ಖ್ಯಾತಿಯನು ಪಡೆವಂತೆ
ತುಂಬಿದಾಯುಷ್ಯದಲಿ ಬಾಳಿ ಬದುಕು

ಹುಟ್ಟಿದ ಮನೆ – ಕೊಟ್ಟ ಮನೆ ಎರಡೂ ಮನೆಗೆ ಅಪಕೀರ್ತಿಯ ತರದೇ, ಕೀರ್ತಿಯ ತರಬೇಕೆಂಬ ಗುರುತರವಾದ ಜವಾಬ್ದಾರಿಯನ್ನು ತಾಯಿ ತಲೆಮೇಲಿರಿಸಿ ತುಂಬಿದಾಯುಷ್ಯದಲಿ ಬಾಳಿ ಬದುಕೆಂದು ಹರಸಿಹೋಗುತ್ತಾರೆ. ಈ ಹಾಡು ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆಯೇ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಉಳಿಸಿಕೊಂಡಿದೆ ಎನ್ನುವುದಾದರೆ ನಾವು ಅಂದ್ರೆ ಹೆಣ್ಣಿನ ಕುರಿತಾಗಿ ಹೆಣ್ಣೆತ್ತ ತಾಯ್ ತಂದೆಯರು ಹಾಗೂ ಸ್ವತಃ ಹೆಣ್ಣು ಚಿತ್ತ ದಾಸ್ಯದಿಂದ ಹೊರಬರಬೇಕಿದೆ.

ಮೊನ್ನೆಮೊನ್ನೆ ನನ್ನಪ್ಪನ ಸ್ನೇಹಿತರೊಬ್ಬರು ಮುಖತಃ ಭೇಟಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು ಅದನ್ನು ಯಥಾವತ್ತಾಗಿ ದಾಖಲಿಸುವುದಾದರೆ.., ನನ್ನ ಮಗನಿಗೆ ವಯಸ್ಸು ಹತ್ತಹತ್ತರ ಮೂವತ್ತೈದು ದಾಟಿತು ಇನ್ನು ಕನ್ಯಾ ಹತ್ತತಾ ಇಲ್ಲ ಎಂದು,  ಒಂದು ಕಾಲದಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅಂತ ಇತ್ತು ಆದರೆ  ಅದೆಷ್ಟೋ ಸಮುದಾಯಗಳಲ್ಲಿ ತಂದೆ-ತಾಯಂದಿರುಗಳು ಗೋಳಿಡುವುದನ್ನು ಕಾಣುತ್ತೇವೆ. ಹೆಣ್ಣೆತ್ತವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ! ಎನ್ನುವ ಹಂತಕ್ಕೆ ತಲುಪಿದೆ, ಅದರಲ್ಲಿ ಮುಖ್ಯವಾದುದೊಂದು ಡಿಮ್ಯಾಂಡ್ ಏನಂದರೆ? ಹೆಣ್ಣು ಕೊಡಬೇಕಂದರೆ.., ಒಬ್ಬನೇ ಮಗನಿರಬೇಕು, ಗಂಡಿನ ಮನೆಯಲ್ಲಿ ರಾಹು-ಕೇತು ಇರಬಾರದಂತೆ ಅಂತ ಹೇಳಿದರು ; ರಾಹು-ಕೇತು ಅಂದರೆ ಯಾರು? ಅಂಕಲ್ ಎಂದು ಕೇಳಿದೆ ; ಅತ್ತೆ-ಮಾವ ಇರಬಾರದಂತೆಮ್ಮಾ! ಅಂದರು, ಇವರಿಗೆ ಅಳಿಯಬೇಕು ಅತ್ತೆ-ಮಾವ ಬೇಡ ಇದ್ಯಾವ ನ್ಯಾಯ?

ಕಳೆದ ಐದಾರು ತಿಂಗಳ ಹಿಂದೆ ಇರಬಹುದು ಪತ್ರಿಕೆಯಲ್ಲಿ ವರದಿ ನೋಡಿದ್ದೆ, ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡಿತ್ತು, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡೋಕೆ ಯಾರು ಮುಂದೆ ಬರ್ತಾ ಇಲ್ಲ, ಹೆಣ್ಣು ಸಿಗ್ತಾ ಇಲ್ಲ, ಹೆಣ್ಣು ಮದುವೆ ಮಾಡಿಸಿ ಎಂದು ಒಬ್ಬ ಯುವಕ ಹಿರಿಯ ಅಧಿಕಾರಿಗಳಲ್ಲಿ ಮನವಿಯನ್ನು ಸಲ್ಲಿಸಿದ್ದ, ಇದು ತಮಾಷೆ ಎನಿಸಿದರೂ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ!

ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಬಾನುಮುಷ್ತಾಕ್ ರವರು  ಸಣ್ಣಕಥನವೊಂದರಲ್ಲಿ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಎಂದು ದೇವರಿಗೆ ಸವಾಲನ್ನು ಹಾಕುತ್ತಾಳೆ, ಆದರೆ ಇಂದು ಗಂಡಾಗಿ ಯಾಕೆ ಹುಟ್ಟಿದೆನೋ ಎಂದು ಹಣೆಹಣೆ ಗಟ್ಟಿಸಿಕೊಳ್ಳುವ ದೈನ್ಯೇಸಿ ಸ್ಥಿತಿ ಗಂಡಿಗೆ ಒದಗಿಬಂದಿದೆ ಏನೋ ಎಂದು ನನಗನಿಸುತ್ತಿದೆ..,  

ನಾವು ದುಡ್ಡು ಕೊಟ್ಟು ಬಸ್ ನಲ್ಲಿ ನಿಂತು ಕೊಂಡು ಹೋಗೋ ಪರಿಸ್ಥಿತಿ ಬಂದಿದೆ ಎಂದು ಪುರುಷರು ಗೋಳಿಡುವುದು ಇಲ್ಲವೆ ಗೋಗರೆಯುವುದನ್ನು ತುಂಬಾ ಸರಿ ಕೇಳಿದ್ದೇನೆ ಶ್ರೀ ಶಕ್ತಿಮಹಿಮೆ ಇರಬಹುದೇನೋ?

ಓಡಾಡುವ ಹೆಣ್ಣುಮಕ್ಕಳ ಸಾಲಿನಲ್ಲಿ ನಮ್ಮ ತಾಯಿ, ಹೆಂಡತಿ, ಮಗಳು, ಅಕ್ಕ ತಂಗಿಯರು ಇದ್ದಾರೆ  ಎಂದು ಯೋಚಿಸುವ ಮನೋಭಾವ ಗಂಡಿನಲ್ಲಿ  ಕಾಣುವುದಿಲ್ಲ.

ಅಸ್ಮಿತೆಯ ಕುರಿತಾಗಿ ಸ್ತ್ರೀ-ಪುರುಷರ ನಡುವೆ ಪೈಪೋಟಿ ನಡೆಯುತ್ತಿದೆ, ಇದು ನಿಲ್ಲಬೇಕಿದೆ. ‘ಮಾತ್ಮಾತಿಗೆ ಅಳೋನು ಗಂಡಸ್ಸಲ್ಲ, ನಗೋಳು ಹೆಂಗಸ್ಸಲ್ಲ’ ಎಂಬ ಮಾತಿಗೆ ಮಣೆ ಹಾಕದೇ ಎಲ್ಲರ ಬದುಕಿನಲ್ಲೂ ನಗು ಮತ್ತು ಅಳು ಇದ್ದದ್ದೇ ತಾನೇ? ಇಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ, ಪರಸ್ಪರರು ಒಬ್ಬರನ್ನೊಬ್ಬರು ಗೌರವಿಸುತ್ತಾ ಸಾಗಿದಾಗ ಸಾಮಾಜಿಕ, ಕೌಟುಂಬಿಕ ವಿಘಟನೆಯನ್ನು ತಡೆಯಬಹುದಾಗಿದೆ.

ಮೊದಲಿಲ್ಲದ ಕೊನೆಯಲ್ಲಿ ; ‘ಹೆಣ್ಣನ್ನು ದೇವಿ ಅಥವಾ ದೆವ್ವ ಅಂತ ನೋಡೋದು ಬಿಟ್ಟು, ಮನುಷ್ಯಳನ್ನಾಗಿ ನೋಡಿ ಸಾಕು’ ಎಂದು ಭಿನ್ನವಿಸಿಕೊಳ್ಳುವ ವಿಮರ್ಶಕಿ – ಎಂ.ಎಸ್. ಆಶಾದೇವಿಯವರ ಮಾತನ್ನು ಉದ್ದರಿಸುತ್ತಾ..,

‘ಹೆಣ್ಣನ್ನು ಹೆಣ್ಣಿನಂತೆ, ಗಂಡನ್ನು ಗಂಡಂತೆ ಗೌರವಿಸಿ’ ಎಂದು ಮನವಿ ಮಾಡಿಕೊಳ್ಳುತ್ತೇನೆ,


One thought on “ಪುರುಷ ಅಸ್ಮಿತೆಯ ಹುಡುಕಾಟ – ಚಿಂತನಾ ಲಹರಿ- ಡಾ.ಯಲ್ಲಮ್ಮ ಕೆ

Leave a Reply

Back To Top