“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ

ಹಿಂದೆ ಒಂದು ಕಾಲವಿತ್ತು. ಅಲ್ಲಿ ಯಾವುದೇ ಒಂದು ಸ್ಥಾನ, ಮಾನ, ಗೌರವದ ಹುದ್ದೆ ಸಿಗಬೇಕಾದರೆ ಆ ವ್ಯಕ್ತಿಯ ಸಾಧನೆ, ನಡೆದು ಬಂದ ಹಾದಿ, ಅವನ ವಯಸ್ಸು,  ಸಮಾಜದ ಬಗ್ಗೆ ಅವನು ಹೊಂದಿದ ಕನಸು, ಮತ್ತು ಉದ್ದೇಶಗಳನ್ನು ಪರಿಗಣಿಸಿ ಹುದ್ದೆಯಾಗಲಿ ಸ್ಥಾನ ಮಾನವಾಗಲಿ ನೀಡಲಾಗುತಿತ್ತು. ಇಷ್ಟಲ್ಲದೆ ಆ ವ್ಯಕ್ತಿ ಆ ಹುದ್ದೆಗೆ ಅರ್ಹನೊ ಅನರ್ಹನೊ ಎಂದು ಪೂರ್ವಾಪೂರ್ವ ವಿಚಾರಿಸಿಕೊಳ್ಳುತ್ತಿದ್ದರು. ಆ ಹುದ್ದೆ ಆ ಸ್ಥಾನ ಅವನಿಗೆ ಕೊಟ್ಟರೆ ಸಮಾಜ ಅದನ್ನು ಸ್ವೀಕರಿಸುತ್ತದೆಯೋ! ಅಥವಾ ತಿರಸ್ಕರಿಸುತ್ತದೆಯೋ, ಹಾಗು ಆ ಹುದ್ದೆಯನ್ನು ಅವನು ಸಮಾಜಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವನೋ, ಅಥವಾ ಆ ಹುದ್ದೆಯಿಂದ ತಾನು ಸ್ವಾರ್ಥಿಯಾಗುವನೋ ಎಂಬುವುದೆಲ್ಲವನ್ನು ವಿಚಾರಿಸಿ ಅವನಿಗೆ ಆ ಸ್ಥಾನವನ್ನು ನೀಡುತ್ತಿದ್ದರು.

ಆದರೆ ಕಾಲ ತನ್ನಷ್ಟಕ್ಕೆ ತಾನು ಬದಲಾಗುತ್ತಾ ಬಂದಿತೋ, ಅಥವಾ ವ್ಯಕ್ತಿಯ ವಿಚಾರಧಾರೆಗಳು, ಅವನ ಕನಸುಗಳು ಅವನ ದೇಯೊದ್ದೇಶಗಳು ಆ ಕಾಲವನ್ನೇ ಬದಲಿ ಮಾಡಿತು ತಿಳಿಯದು. ಸಮಾಜದಲ್ಲಿ ಮನುಷ್ಯ ವಿದ್ಯಾವಂತನಾದಂತೆ ಬಹಳಷ್ಟು ಸ್ವಾರ್ಥತನವನು ಬೆಳೆಸಿಕೊಂಡ. ಅವನೊಳಗಡೆ ಜಾತಿ, ಧರ್ಮ, ನಮ್ಮೂರು, ನಮ್ಮವರು, ನಮಗೆ ಬೇಕಾದವರು, ನಮ್ಮ ಕುಟುಂಬದವರು, ನಮ್ಮ ಪಕ್ಷದವರು ಎನ್ನುವ ಹಲವಾರು ಸಣ್ಣತನದ ಮನೋಭಾವನೆಗಳು ಪ್ರತಿಯೊಬ್ಬರಲ್ಲಿಯೂ ಹಾಸು ಹೊಕ್ಕಾಗತೊಡಗಿತು. ಯಾವಾಗ ಈ ಸ್ವಾರ್ಥಗಳು ಮನುಷ್ಯನ ಮೆದುಳಿನೊಳಗೆ ಪ್ರವೇಶಿಸಿತೋ  ಸಮಾಜ ಮೌಲ್ಯಗಳು ಕೆಲಸ್ತರಕ್ಕೆ ತಳ್ಳಲ್ಪಟ್ಟವು.

ಇಂದು ಯಾವುದೇ ಒಂದು ಉನ್ನತವಾದ, ಗೌರವ ಯುತವಾದ, ಪದವಿ ಪುರಸ್ಕಾರ, ಸನ್ಮಾನ, ಮಾನ, ವೇದಿಕೆ ಮೇಲಿನ ಸ್ಥಾನ ಇವೆಲ್ಲವುಗಳು ಇಂದು ಜಾತಿಯ ಮೇಲೆ, ಧರ್ಮದ ಮೇಲೆ, ನಮ್ಮವರು, ನಮ್ಮ ಕುಟುಂಬದವರು, ನಮ್ಮ ಊರಿನವರು, ನಮ್ಮ ಪಕ್ಷದವರು, ನಮಗೆ ಮಾರ್ಗ ತೋರಿದವರು, ನಮ್ಮ ಜಿಲ್ಲೆಯವರು ಎಂಬ ಮನೋಭಾವನೆಯಿಂದ ಅಲ್ಲಿ ಸ್ಥಾನಗಳನ್ನು ಹಂಚಲಾಗುತ್ತಿದೆ. ಅಕಸ್ಮಾತ್ ಈ  ಎಲ್ಲ ಅಸ್ತ್ರಗಳು ಅಲ್ಲಿ ಚಲಾವಣೆಯಾಗದಿದ್ದರೆ! “ಅಭಿಮಾನಿಗಳು” ಎಂಬ ನಕಲಿ ಬ್ರಹ್ಮಾಸ್ತ್ರವನ್ನು ಅಲ್ಲಿ ಗುಡಿಗಿಸಲಾಗುತ್ತಿದೆ.

ಅವನು ಸಾಧನೆ, ಶ್ರಮ ಸ್ವಲ್ಪವೇ ಇದ್ದರೆ ಸಾಕು! ಅದನ್ನು ಅತ್ಯಂತ ವಿಜೃಂಭಿಸಿ, ಪ್ರಚಾರ ಮಾಡಿ ಆ ವ್ಯಕ್ತಿಯನ್ನು ಮುನ್ನಲೆಗೆ ತಂದು ನಿಲ್ಲಿಸಲಾಗುತ್ತದೆ. ಹೀಗೆ ಆ ಸ್ಥಾನಕ್ಕೆ ಅವನನ್ನು ಕೂಡಿಸಲಾಗುತ್ತದೆ. ಅವನಿಗಿಂತ ಹೆಚ್ಚು ಪ್ರತಿಭೆಗಳಿದ್ದರೂ ಕೂಡ ಅವರಿಗೆ ಯಾವುದೇ ಜಾತಿಯ ಬೆಂಬಲವಾಗಲಿ, ಧರ್ಮದ ಬೆಂಬಲವಾಗಲಿ, ಹುಸಿ ಅಭಿಮಾನಿಗಳ ಬೆಂಬಲವಾಗಲಿ ಇರದಿದ್ದರೆ, ಅವನು ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನನ್ನು ಅಲ್ಲಿ ಕೆಳಸ್ತರಕ್ಕೆ ತಳ್ಳಲ್ಪಡುತ್ತಾನೆ.

ಇದಕ್ಕೆ ಇಂದು ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು. ನಮ್ಮ ಕಣ್ಮುಂದೆ ಎಂತೆಂತಹ ಪ್ರತಿಭೆಗಳು ಇಂತಹ ಸ್ವಾರ್ಥಿಗಳ ಸಂಕೋಲೆಗೆ ಸಿಕ್ಕು  ಅರಳದೆ ಕಮರಿ ಹೋಗಿರುವುದನ್ನು ನಾವು ನೋಡಬಹುದು.
ಈ ಸ್ವಾರ್ಥಗಳ ಪಟ್ಟಿಗೆ ಇತ್ತಿತ್ತಲಾಗಿ ಇನ್ನೊಂದು ಸೇರ್ಪಡೆಯಾಗುತ್ತದೆ. ಋಣ ಸಂದಾಯ! ಅಥವಾ ಋಣವನ್ನು ತೀರಿಸುವುದು… ಅವರು ನಮ್ಮ ಆಯ್ಕೆಯಲ್ಲಿ ಹೆಚ್ಚು ಶ್ರಮ ಹಾಕಿದ್ದಾರೆ, ಅಥವಾ ಅವರು ನಮಗೆ ದಾರಿದೀಪವಾಗಿದ್ದಾರೆ, ಹಾಗಾಗಿ ನಾವು ಅವರಿಗೆ ಏನನ್ನಾದರೂ ಗೌರವ ಸೂಚಿಸಲೇಬೇಕು. ಅವರು ನಮಗೆ ಹಾಕಿದ ಶ್ರಮಕ್ಕೆ ನಾವು ಪ್ರತಿಫಲ ನೀಡಲೇಬೇಕು. ಅವನು ಆ ಸ್ಥಾನಕ್ಕೆ ಯೋಗ್ಯನಿರಲಿ ಇಲ್ಲದಿರಲಿ ಅವನಿಗೆ ಆ ಉನ್ನತವಾದ ಸ್ಥಾನವನ್ನು ನೀಡಿ ನಾವು ಋಣಮುಕ್ತರಾಗಬೇಕು. ಎಂಬ ಇನ್ನೊಂದು ಸಣ್ಣತನದ ಕೀಳು ಮನೋಭಾವನೆ ಈಗ ಅವಕಾಶ ನೀಡುವವರ ಪಟ್ಟಿಯಲ್ಲಿದೆ.

ಇಂತಹ ಸ್ವಾರ್ಥ ಸಮಾಜದಿಂದ ಪ್ರತಿಭೆಗಳು ತಮ್ಮಷ್ಟಕ್ಕೆ ತಾವೇ ದೂರ ಸರಿಯುತ್ತಿವೆ. ಕಾರಣ ಅಲ್ಲಿ ತಮಗೆ ಗೌರವ ಮತ್ತು ಬೆಲೆ ಇಲ್ಲ.. ಎಲ್ಲೆಲ್ಲೂ ಜೈಕಾರ ಹಾಕುವ ಹಿಂಬಾಲಕರೇ ಇಂದು ತುಂಬಿ ತುಳುಕುತ್ತಿದ್ದಾರೆ. ಹಾಗಾಗಿ ಅರ್ಹತೆ ಇದ್ದರೂ ಅಲ್ಲಿ ಅವರು ನಿಲ್ಲಲಾಗುತ್ತಿಲ್ಲ. ಹೀಗಾದರೆ ಸಮಾಜ ಇಂತಹ ಅನರ್ಹರಿಂದ ತುಂಬಿ ಅನರ್ಹರ ಬೋಧನೆಗಳಿಗೆ ಕಿವಿಗೊಟ್ಟಾಗ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗಬಹುದು. ನಶಿಸಿ ಹೋಗುತ್ತಿವೆ ಎಂಬ ಸೂಕ್ಷ್ಮ ಸಂದೇಶ ಇಂತಹ ವ್ಯಕ್ತಿಗಳು ಸಾರಿ ನಿಲ್ಲುತ್ತಾರೆ.

ಮುಂದಿನ ಪೀಳಿಗೆ ತಾವು ಸಾಧಿಸುವುದಕ್ಕಿಂತ, ಸಾಧಕರನ್ನು ಅನುಸರಿಸುವುದಕ್ಕಿಂತ, ಕೇವಲ ಅವಕಾಶಕ್ಕಾಗಿ, ಸ್ಥಾನಕ್ಕಾಗಿ, ವೇದಿಕೆಯ ಮಾನಕ್ಕಾಗಿ, ಕಲಹಗಳ ಎಬ್ಬಿಸುತ್ತಾ ವಸೂಲಿ ಹಚ್ಚಿ ಅಂತಹ ಸ್ಥಾನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಸಮಾಜದ ದಿಕ್ಕು ದಾರಿ ತಪ್ಪಿ ಮೌಲ್ಯಗಳೇ ಇಲ್ಲದಂತೆ ಸಮಾಜ ಸಾಗಬೇಕಾಗುತ್ತದೆ.

ಹೀಗಾಗದಿರಲು ಇಂದಿನ ಅವಕಾಶ ನೀಡುವ, ಅಥವಾ ಹುದ್ದೆಯಲ್ಲಿರುವ ಮಾನ್ಯರೆನಿಸಿಕೊಂಡವರು ಅರ್ಹತೆ ನೋಡಿ, ಅವನು ಆ ಸ್ಥಾನಕ್ಕೆ ಯೋಗ್ಯನೋ ಇಲ್ಲವೋ ಎಂಬುವುದನ್ನು ಅವನ ಸಾಧನ ಹಾದಿಯನ್ನು ನೋಡಿ, ಅವನಿಗೆ ಅವಕಾಶ ಕೊಟ್ಟಾಗ, ಆ ವೇದಿಕೆಗೆ ಹಾಗೂ ಅವಕಾಶ ಕೊಟ್ಟ ತಮಗೂ ಹಾಗೂ ಅಲ್ಲಿರುವ ಆ ಒಂದು ಪರಿಸರಕ್ಕೆ ಗೌರವ ನೀಡಿದಂತಾಗುವುದು. ಹಾಗೂ ಅದರ ಒಂದು ಘನತೆಯನ್ನು ಕಾಪಾಡಿಕೊಂಡಂತಾಗುತ್ತದೆ.

 ಎಲ್ಲರಿಗೂ ಅವಕಾಶ ಸಿಗಬೇಕು ನಿಜ! ಆದರೆ ಅವಕಾಶವನ್ನು ಪಡೆಯುವ ಯೋಗ್ಯತೆಯನ್ನು ಗಳಿಸಿಕೊಳ್ಳುವವರೆಗೂ ಅವರು ಶ್ರಮ ವಹಿಸುತ್ತಲೇ ಇರಬೇಕು. ಎಲ್ಲರಿಗೂ ನಾನು ಬೇಕಾಗಬೇಕು. ಎಲ್ಲರೂ ನನ್ನನ್ನು ಜೈಕಾರ ಹಾಕಬೇಕು. ಎಂಬ ಕೆಲವೊಂದಿಷ್ಟು ಸಣ್ಣ ವಿಚಾರಗಳನ್ನು ಬಿಟ್ಟು, ನಿಷ್ಟುರವಾಗಿ ಆ ಹುದ್ದೆಗೆ ತಕ್ಕಂತೆ ನಡೆದುಕೊಂಡರೆ ಹುದ್ದೆಯ ಘನತೆ, ಆ ಸ್ಥಾನದ ಘನತೆ ಹೆಚ್ಚುತ್ತದೆ. ಇಂತಹ ಮನೋಭಾವನೆಯನ್ನು ಹೊಂದಿದರೆ ಮಾತ್ರ ಸಮಾಜ ಸುಭದ್ರ ಸುಸ್ಥಿರವಾಗಿ ಸರಾಗವಾಗಿ ಸಾಗುತ್ತದೆ.


Leave a Reply

Back To Top