ಪುಸ್ತಕ ಸಂಗಾತಿ
ವಾಣಿ ಭಂಡಾರಿ
ಪ್ರೇಮಾ ಯಾಕೊಳ್ಳಿ
ಕೃತಿ “ಯಾತ್ರಿಕ”
ಒಂದುವಿಮರ್ಶಾ ಲೇಖನ


ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬ ಮಾತಿನಂತೆ, ಸಮಕಾಲೀನ ಸಂದರ್ಭದಲ್ಲಿ ಡಾ:ಯಾಕೊಳ್ಳಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿರುವಂತಹ ಸಹೃದಯ ಜೀವಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಜನಿಸಿದ ಇವರು,ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ೩ ನೇ ರ‌್ಯಾಂಕ್ ಪಡೆದು ಡಾ:ಬಿ.ಆರ್. ಹೀರೆಮಠ ಅವರ ಮಾರ್ಗದರ್ಶನದಲ್ಲಿ “ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು” ಎಂಬ ವಿಷಯದ ಮೇಲೆ ಪಿಹೆಚ್‌ಡಿ ಪದವಿ ಪಡೆದಿರುತ್ತಾರೆ. ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ ಇವರು, ಲೇಖಕರು,ವಿಮರ್ಶಕರು, ಚಿಂತಕರು, ಕವಿಗಳು ಇತ್ತೀಚಿನ ದಿನಗಳಲ್ಲಿ ಗಜಲ್ ಸಾಹಿತ್ಯದಲ್ಲಿಯೂ ಸಹ ತಮ್ಮ ಕೃಷಿಯನ್ನು ಮಾಡಿರುವುದನ್ನು ಗಮನಿಸಬಹುದಾದ ಅಂಶ. 50ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿರುವ ಇವರು ಕವನ,ಗಜಲ್ ,ವಿಮರ್ಶೆ,ಕತೆ, ಚುಟುಕು, ಹಾಯ್ಕು,ತನಗ, ಶಾಯರಿ,ಆಧುನಿಕ ವಚನ, ಸಂಶೋಧನೆ,ಪ್ರಬಂಧ,ಸಂಪಾದನೆ, ಹನಿಗವನ, ಮುಂತಾದ ಪ್ರಕಾರಗಳಲ್ಲಿ ತಮ್ಮ ಜಾಣ್ಮೆಯನ್ನು ನೀಡಿರುವ ಇವರು ಬಹುಮುಖ ಪ್ರತಿಭೆ.
ಸದಾ ಹುಡುಕಾಟದಲ್ಲಿ ತಲ್ಲೀನರಾಗಿ ಕಲಿಕಾಸಕ್ತಿಯಲ್ಲಿ ಎಂತಹ ಸಣ್ಣವರನ್ನು ಮೀರಿಸುವಂತಹ ವ್ಯಕ್ತಿತ್ವ ಹೊಂದಿದ ಸ್ನೇಹಜೀವಿ ಇವರು, ನಾ ಕಂಡಂತೆ ನಿಗರ್ವಿಗಳು, ತಮಗೆ ಗೊತ್ತಿರುವುದನ್ನು ಇತರರಿಗೆ ತಿಳಿಸಿ,ತಿಳಿಯಲಾರದನ್ನು ಅರಿತು ಸಾಗುವ ಮನೋಧರ್ಮ. “ಎಲ್ಲರೊಳೊಂದಾಗು ಮಂಕುತಿಮ್ಮ” ಎಂಬಂತೆ ಎಲ್ಲರೊಂದಿಗೆ ವಿನೀತಭಾವದಿಂದ ಬೆರೆತು ಎಳ್ಳಷ್ಟು ಅಗೌರವ ಅಹಂ ತೋರದ ಅಜಾತಶತ್ರುವೆಂದರೆ ತಪ್ಪಾಗದು.ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ,,ಇವರು ಬರೆದ ಕವಿತೆಗಳು ಪಠ್ಯವಾಗಿಯೂ ಸಹ ಬೆಳಕು ಕಂಡಿವೆ. ಆದರೆ ಈ ತರದ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯ್ತು ತಮ್ಮ ಕಾರ್ಯವಾಯ್ತು ಎಂಬಂತೆ ತಲೆಮರೆಕಾಯಿಯಂತೆ ಹಮ್ಮು ಬಿಮ್ಮಿರದೆ ತಲ್ಲೀನತೆಯಲ್ಲಿ ಕೆಲಸಮಾಡುವ ಇವರ ವ್ಯಕ್ತಿತ್ವ ಉದಯೋನ್ಮುಖರಿಗೆ ಮಾರ್ಗದರ್ಶನ ಇದ್ದಂತೆ.
ಇವರ ಇತ್ತೀಚಿನ “ಯಾತ್ರಿಕ” ಕೃತಿ ಬಾಗಲಕೋಟೆ ಜಿಲ್ಲೆ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೆ ತಯಾರಾದ ಈ ಯಾತ್ರಿಕ ಕೃತಿ ಇವರ ಇವರೆಗಿನ ಒಟ್ಟು ಐವತ್ತು ಕೃತಿಗಳ ಒಟ್ಟು ಸಾರಗಳ ಫಲಿತ ಎಂದೆನ್ನಬಹುದು.ಈ ಕೃತಿಯನ್ನು ಡಾ: ಪ್ರೇಮ ಯಾಕೊಳ್ಳಿ ಅವರು ಬರೆದಿದ್ದು, ಈ ಕೃತಿ ನಿಜಕ್ಕೂ ಒಬ್ಬ ಸಾಹಿತ್ಯ ಯಾತ್ರಿಕನ ಬದುಕಯಾನ ಎಂದೆನ್ನಬಹುದು. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಈ ಸಂದರ್ಭದಲ್ಲಿ, ಇವರ ಸಾಹಿತ್ಯ ಕೃಷಿಯ ಅಗಾಧತೆಯನ್ನು ಈ ಕೃತಿ ಕಟ್ಟಿಕೊಡಬಲ್ಲದು. ಕತೆ,ಕವನ ಗಜಲ್, ಶಾಯರಿ, ಸಂಪಾದನೆ, ವಿಮರ್ಶೆ, ಆಧುನಿಕ ವಚನ,ಸ್ಥಳನಾಮ,ಜೀವನಚರಿತ್ರೆ ಇವೆಲ್ಲದರ ಒಟ್ಟುಗೂಡುವಿಕೆಯ ಒಟ್ಟಾಂದದ ತಿರುಳಾಗಿ ಯಾತ್ರಿಕ ನಮಗೆ ಸವಿಯುಣಿಸಲು ಕಾದು ಕುಳಿತಾಗಿದೆ. “ಏನಾದರೂ ಆಗು ಮೊದಲು ಮಾನವನಾಗು” ಎನ್ನುವಂತೆ,, ಮಾನವೀಯ ಮೌಲ್ಯ ಹೊತ್ತು ನಿಂತ ಯಾಕೊಳ್ಳಿ ಅವರು ಸ್ನೇಹ ವಲಯದಲ್ಲಿ ಯಾಕೊಳ್ಳಿ ಎಂತಲೊ ಅಥವಾ ಆಪ್ತ ಹೃದಯಗಳಿಗೆ ಜಿ,,ಎಂತಲೋ ಕರೆಸಿಕೊಳ್ಳುವ ಗೌರವಾನ್ವಿತ ಸಹೃದಯಿ. ಒಮ್ಮೊಮ್ಮೆ ಸ್ತ್ರೀವಾದಿ ಚಿಂತಕರಾಗಿಯೂ ಕಾಣುವ ಇವರು,ಅವರು ಬರೆದ ಅವಳ ಕವಿತೆ ಮೂಲಕ ಹೀಗೆ ದಾಖಲಿಸುತ್ತಾರೆ.
ಅವಳ ಕವಿತೆ
ಎಷ್ಟೋ ಸಲ ಹೇಳ ಬೇಕೆಂದ
ಮಾತುಗಳು
ಗಂಟಲೊಳಗೆ ನಿಂತು
ಹಿಂಸಿಸುತ್ತವೆ
ಹೇಳಬೇಕೆಂದುದ ಹೇಳದೆ
ತಳಮಳ ಪಡುತ್ತೇನೆ
ಬಾಗಿಲ ಪರದೆಯ ಹಿಂದೆ
ನಿಂತು ಬಂದವನ
ಮುಖಚರ್ಯೆಯ ಅದೆಷ್ಟು
ಸಲ ಓದುವದು?
ಮಹಿಳೆ ಎಷ್ಟೋ ಸಲ ತನಗೆ ಅನಿಸಿದ್ದನ್ನು ಹೇಳದೆ ಹಳವಂಡ ಪಡುತ್ತಲೆ ಇರುತ್ತಾಳೆ,,ಹೌದು ಅಷ್ಟಕ್ಕೂ ಆಕೆ ಹೇಳಿದಾಗ ಸಿಗುವ ಉತ್ತರವಾದರೂ ಎಂತದ್ದು ಎಂಬುದನ್ನು ಮನಸ್ಸು ಜಾಗೃತವಾಸ್ಥೆಯಲ್ಲೆ ಎಚ್ಚರಿಸುವುದರಿಂದ ಆಕೆ ಮೌನ ವಹಿಸುವುದು ಸಹಜ ತಾನೆ?
“ಅದು ಸೀತೆ ಸಾವಿತ್ರಿಯರಿಗೂ
ತಪ್ಪಿದ್ದಲ್ಲ ಬಿಡಿ..”
ಸಮಾಜದ ಬಹುತೇಕ ಮಹಿಳೆಯರದು ಇದೇ ಪಾಡು,, ಹಾಗಿದ್ದ ಮೇಲೆ ಸೀತೆಯಾದರೇನು ಸಾವಿತ್ರಿಯಾದರೇನು ಹೆಣ್ಣು ಹೆಣ್ಣಷ್ಟೆ ಎಂಬುದು ಕವಿಯ ಆಶಯ.ಆಸೆ ಕನಸುಗಳು ಬೇಕಾದಷ್ಟಿವೆ ಆದರೆ ಈಡೇರಿಸಲು ರಾಮ ಇರಬೇಕಲ್ಲ.ಇಂದು ಹೆಣ್ಣಿನ ಸಂಖ್ಯೆ ತೀರ ಕಡಿಮೆ ಇರುವಂತಹ ಸಮಯದಲ್ಲಿ ಐವರ ಗಂಡಂದಿರನ್ನು ಮದುವೆ ಮಾಡಿಕೊಂಡಂತ ದ್ರೌಪದಿಯಂತೆ ಯಾರಾದರೂ ಬದುಕಲು ಇಚ್ಚಿಸುವುದು ಸಾಧ್ಯವಿದೇಯಾ ಎಂಬಂತಹ ನಿಲುವುಗಳು ಕವಿಯ ಮನದಲ್ಲಿ ಮೂಡಿಮರೆಯಾಗುತ್ತವೆ.
ಎದೆಗೆ ಒತ್ತಿಕೊಂಡು
ಹೊರಟ ಪುಸ್ತಕದ
ಹಾಳೆಯಲ್ಲಿ
ಇಂತಹ ಅದೆಷ್ಟೊ
ಕನಸುಗಳು ಕವಿತೆಗಳಾಗಿ
ನಿತ್ಯ ಹರಿಯುತ್ತವೆ
ಏನೂ ಮಾಡಲಾಗದ ನಾನು..
ಹರಿಯ ಬಿಡುತ್ತೇನೆ..
ನಾಳೆಯೋ..ನಾಡದಿನವರಿಗೊ
ಸತ್ಯವಾದಾವು ಎಂದು.
ಒಮ್ಮೊಮ್ಮೆ ಬದುಕು ಬಂದಂತೆ ಸ್ವೀಕರಿಸಲೇಬೇಕಲ್ಲ ಆಗ ಇರುವ ನೋವು ನಲಿವು ಒಳಗಿನ ಬೇಗುದಿ ನಾಳೆಯ ಚಿಂತೆ ಕನಸು ಎಲ್ಲವನ್ನು ಎದೆಗೊತ್ತಿಕೊಂಡು ಸಾಗಲೇ ಬೇಕಾಗುವುದು ಅನಿವಾರ್ಯ ಬದುಕು ಒಮ್ಮೊಮ್ಮೆ ಅನಿವಾರ್ಯಗಳ ಸಂತೆ ಆದಾಗ ಮನುಷ್ಯವಾಗಿ ಸಹಜವಾಗಿ ಅಸಹಾಯಕನಾಗಿಬಿಡುತ್ತಾನೆ ಇದಕ್ಕೆ ಹೆಣ್ಣು ಅಥವಾ ಗಂಡು ಹೊರತಾಗಿಲ್ಲ ಆದರೂ ಈ ಒಂದು ಕವಿಭಾವದಲಿ ನಾಳಿನ ಕನಸುಗಳಿಗಾಗಿ ಮಹೋನ್ನತ ಚಿಂತನೆಯನ್ನು ಇರಿಸಿ ಕನಸುಗಳು ಕವಿತೆಗಳಾಗಿ ಹರಿಯುತ್ತವೆ ನಾಳೆ ಎಂಬುದು ಇದರ ಫಲದ ರಾಶಿಯಾಗಿ ಸತ್ಯವಾಗಬಹುದು ಎಂಬ ದೂರದ ಆಸೆಯನ್ನು ಹೊತ್ತ ಈ ಕವಿತೆ ಹೆಣ್ಣಿನ ಅಂತರಂಗವನ್ನು ದ್ವನಿಸುತ್ತದೆ.
ಹೀಗೊಂದು ಕವಿತೆ ಇಲ್ಲಿ ವ್ಯಕ್ತಗೊಳ್ಳುವುದು
“ಎದೆಯಲಿ ತುಂಬಿದೆ
ಸಾಗರದಷ್ಟು ಪ್ರೀತಿ
ಹೊರಹಾಕಲು ಇದೆ
ಸುತ್ತ ಸಾಕಷ್ಟು ಭೀತಿ”. ಎದೆಯೊಳಗಿನ ಪ್ರೀತಿಗೂ ಕೂಡ ಬೇಲಿಯಿದೆ, ಹೊರಹಾಕಿದರೆ,,ಏನಾಗುವುದೊ ಎಂಬ ಆತಂಕ,ಅಂದರೆ ಬದುಕು ಅಸಹನೀಯ ಅಸಹಜವಾದ,, ವೇಗದಲ್ಲಿ ಸಾಗುವಾಗ ಈ ಜಗದಲ್ಲಿ ಎಲ್ಲರು ನಮ್ಮವರೆ ಆದರೆ ಎಲ್ಲರೂ ಪರಕೀಯರೆ ಎಂಬಂತೆ ಭಾಸವಾಗುತ್ತದೆ ಒಮ್ಮೊಮ್ಮೆ.
ಅವರ ಗಜಲ್ ಬರವಣಿಗೆಯಲ್ಲಿ ಒಂದು ಲಯವುಂಟು, ಇತ್ತೀಚೆಗೆ ಕಲಿತಾದರೂ ಕಲಿಕೆಗೆ ಒಂದು ತಾದ್ಯಾತ್ಮ ಇದೆ.ಆ ಕಾರಣದಿಂದಾಗಿ ಈ
ಗಜಲ್
“ಎಲ್ಲಾನು ಐತಿ ಮನಸ ತುಂಬ ಆದರ ಹೇಳದಂಗಾಗೈತಿ
ಊರ ತುಂಬ ಜಾತ್ರಿನಡದೆತಿ ಆದರೆ ಹೋಗದಂಗಾಗೈತಿ”
ಈ ಬದುಕಿನ ಜಾತ್ರೆಯು ಕೂಡ ಅಷ್ಟೆ ಅಲ್ವಾ? ನಮಗೆ ಬೇಕಾದವರು ಇಲ್ಲದಿದ್ದರೆ, ಬೇಕಾದ್ದು ಇದ್ದರು ಸಹ ಎಲ್ಲವೂ ತೃಣಕ್ಕೆ ಸಮಾನ ಅನಿಸಿಬಿಡುವ ಈ ಬದುಕಿನ ತಲ್ಲಣಗಳಿಗೆ ದನಿಯಾಗುತ್ತಾರೆ ಯಾಕೊಳ್ಳಿಯವರು.ಈ ಗಜಲ್ ನಲ್ಲಿ ಜಾತ್ರೆ ಎಂಬ ಆ ಪದ ಹಲವಾರು ಅರ್ಥಗಳಿಗೆ ವ್ಯಾಪ್ತಿಯನ್ನು ನೀಡುತ್ತದೆ.ಈ ಗಜಲ್ ಅನ್ನು ಇನ್ನಷ್ಟು ವೈನಾಗಿ ಮೂಡಿಸಬಹುದಿತ್ತು. ಒಮ್ಮೆ ಭಾವಗೇಯತೆ ಹೊಂದಿದೆ ಎನಿಸುತ್ತದೆ.
ಇವರ ಈ “ಶಾಯಿರಿ”
“ನಿನ್ನ ಕಣ್ಣ್ಯಾಕ ಹೀಗ ಕೆಂಪಗ ಅದಾವು
ಅಂತ ಅವರ ಕೇಳತಾರ ?
ಹೌದು ನಾ ಅವಳ ಪ್ರೀತಿಯ ನಿಶೆದಾಗ
ಅದಿನಿ ಅಂತ ಹೆಂಗ ಹೇಳಲಿ?”
ಬಹಳ ಸೊಗಸಾಗಿ ಪ್ರೀತಿಯ ನಶೆಯನ್ನು ಕವಿ ಕೇವಲ ಎರಡು ಸಾಲಿನಲ್ಲಿ ಕಟ್ಟಿಕೊಟ್ಟಿರುವುದು ಬಹಳ ರೋಚಕ ಅನಿಸುತ್ತದೆ. ಬಹುಶಃ ಪ್ರೀತಿಯ ಕರಾಮತ್ತು ಅಷ್ಟಿದೆ, ಪ್ರೀತಿಗೆ ಯಾವುದು ಸಾಧ್ಯವಿಲ್ಲವೆಂದು ಹೇಳಲಾಗದು ಎಲ್ಲವೂ ಸಾಧ್ಯ,, ಆ ಪ್ರೇಮದಮಲನ್ನು ಕುಡಿದಾತರು ಎಂದಿಗೂ ಅಮಲಿನಲ್ಲೆ ವಿಹರಿಸುತ್ತಾರೆ.
ಪ್ರೀತಿ, ಪ್ರೇಮ,ವಿರಹ, ಮೌಡ್ಯ, ಬಡತನ,ಕಾಮ, ಕ್ರೌರ್ಯ,ಕೊಲೆ,ಸುಲಿಗೆ ಧರ್ಮ ಆಚಾರ, ಸಂಸ್ಕ್ರತಿ, ಆದ್ಯಾತ್ಮ, ವೈರಾಗ್ಯ ,ಮುಂತಾದ ವಿಚಾರಗಳ ಸುತ್ತ ಇವರ ಎಲ್ಲ ಬರಹದ ಪ್ರಕಾರಗಳು ಸುಳಿಯುತ್ತವೆ.
ಆಧುನಿಕ ವಚನ
“ಮೇಲು ಕೀಳೆನಿಸದೆ ನಾನು ನೀನೆನ್ನದೆ ಬಾಳು ಸಮಭಾವದಲಿ ಎಲ್ಲರೊಂದಾಗಿ ಬದುಕಲು ಬಂದಿರುವ ಭೂಮಿಯಿದು ಬೆಳಕು ನೀಡೊ ಸೂರ್ಯ ನೀರುಣಿಸುವ ಮಳೆ ಮಾಡಿಲ್ಲ ಅಂತರವ, ನಿನಗೇಕೆ ಮತ್ತೆ ಈ ಬಿರುಕು? ಸೌಗಂಧೀಪುರಾಧೀಶ್ವರಾ!”
ಮನುಷ್ಯನ ನೀಚತ್ವದ ವಿರುದ್ದ ದನಿ ಎತ್ತುವ ಯಾಕೊಳ್ಳಿ ಅವರು ಭೂಮಿ ಭಾನು ಮಳೆ ಮೋಡ, ಇವೆಲ್ಲದರ ವಸ್ತುಸ್ಥಿತಿಯನ್ನು ಬಹಳ ತಾಳ್ಮೆಯಿಂದ ಪ್ರಶ್ನಿಸುತ್ತಾರೆ, ಯಾವುದಕ್ಕಿರದ ಅಂತರ ಮನುಷ್ಯ ನಿನಗೇಕೆ ಎಂಬುದೇ ಇವರು ಎತ್ತಿರುವ ಪ್ರಶ್ನೆ. ಇಂತಹ ಪ್ರಶ್ನೆ ಪ್ರತಿಯೊಬ್ಬ ಮನುಷ್ಯ ತನ್ನೊಳಗೆ ತಾನು ಮಾಡಿಕೊಳ್ಳುವುದಾದಲ್ಲಿ ಬಹುಶಃ ಬಹುತೇಕ ಕ್ರೌರ್ಯಗಳು ಜರಗುವುದಿಲ್ಲ ಎಂಬ ಭಾವನೆ ನನ್ನದು.
ಯಾಕೊಳ್ಳಿ ಅವರು ಯಾವೊಂದು ಪಂಥಕ್ಕೆ ಅಂಟಿ ಕೊಳ್ಳದೆ ಅದರಾಚಿಗಿನ ಬದುಕಿಗೆ ಪ್ರೇರಣಾದಾಯಕವಾದ ನಡಾವಳಿಗಳನ್ನು ಹೊಂದಿದ ಇವರ ಬದುಕು ಬರಹ ಅನನ್ಯ. ಮನುಷ್ಯ ಧರ್ಮವೊಂದೆ ಶ್ರೇಷ್ಠ ಎಂದು, ಮನುಷ್ಯತ್ವ ಮರೆತು ಸಾಗಬಾರದೆಂಬ ನಿಲುವಿಗೆ ಬದ್ಧರಾದವರು. ಇವರ ಸಾಹಿತ್ಯ ಕೃಷಿ ಮತ್ತಷ್ಟು ಪ್ರಬುದ್ಧ ಬರಹಗಳ ಮೂಲಕ ಮೂಡಲಿ ಇವರ ಲೇಖನಿಯಲ್ಲಿ ಎಂದು ಈ ಮೂಲಕ ಹಾರೈಸುವೆ.
ವಾಣಿ ಭಂಡಾರಿ
