ವಿಶೇಷ ಸಂಗಾತಿ
ನಾಗಪ್ಪ ಸಿ. ಬಡ್ಡಿ
“ಇದ್ದಂಗ ಇರಬೇಕು”

ಮನುಷ್ಯರಾದ ನಾವು ಒಂದು ವ್ಯವಸ್ಥೆಯೊಳಗೆ ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕಾರ್ಯನಿರ್ವಹಿಸಿ ಜೀವನ ಮಾಡಬೇಕು. ಅಂದಾಗ ಅದು ಸಾರ್ಥಕ ಜೀವನ ಅನಿಸಿಕೊಳ್ಳುತ್ತದೆ. ಆದರೆ ಯಾಕೊ ಸಮಾಜದ ಕೆಲವೊಂದು ಕಡೆಗಳಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶಗಳಿರುವುದನ್ನು ದಿನಪತ್ರಿಕೆಗಳಲಿ, ಟಿವಿ ಮಾಧ್ಯಮಗಳಲ್ಲಿ ಹಾಗೂ ನಮ್ಮ ಸುತ್ತಮುತ್ತ ನೋಡತಾ ಇದ್ದೇವೆ. ಅಂದರೆ ಏನು ಮಾಡಬೇಕಾಗಿತ್ತೊ ಅದನ್ನು ಮಾಡದೇ ಎಲ್ಲಾ ನನಗೆ ಗೊತ್ತು, ಎಲ್ಲಾ ನಾನೇ ಮಾಡಿದ್ದು, ನನ್ನಿಂದಲೇ ಎಲ್ಲಾ ನಾನಿಲ್ಲ ಅಂದರೆ ಇವರ ಕಡೆಯಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಅಹಂ ಭಾವನೆಯಿಂದ ವರ್ತಿಸುವುದನ್ನು ಕಾಣುತ್ತೇವೆ. ಆದರೆ ಇಂತ ನಡುವಳಿಕೆಯಿಂದ ನಮ್ಮ ವ್ಯಕ್ತಿತ್ವಕ್ಕೆ ನಾವೇ ಕೊಳ್ಳೆ ಇಟ್ಟಂತಾಗುವುದಲ್ಲವೇ?
“ಅಕ್ಕ ಸತ್ತರೆ ಅಮವಾಸೆ ನಿಲ್ಲುವುದೆ?” ಇಲ್ಲಾ ತಾನೆ? ಹಾಗೆನೇ ನಾವು ಇಲ್ಲ ಅಂದರೂ ಕೆಲಸ ನಡೆಯುತ್ತೆ ಇದ್ದರೂ ನಡೆಯುತ್ತೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಏನೇ ಸಮಸ್ಯಗಳಿದ್ದರೂ “ಕಾಯಕವೇ ಕೈಲಾಸ”ವೆಂದು ಕಾರ್ಯ ನಿರ್ವಹಿಸಿದಾಗ ಯಾರಾದರೂ ನಮಗೆ ಸಹಾಯ ಮಾಡೇ ಮಾಡುತ್ತಾರೆ ಅನ್ನೋದನ್ನು ತಿಳಕೊಬೇಕು. ನಾವು ಒಬ್ಬರಿಗೆ ಮೋಸ, ಅಪಪ್ರಚಾರ, ಸುಳ್ಳು ಹೇಳುವುದನ್ನು ಮಾಡಿದರೆ ಮುಂದೊಂದು ದಿನ ಅದರ ಪರಿಣಮವನ್ನು ನಾವು ಎದುರಿಸಬೇಕಾಗುತ್ತದೆ. ನಮಗೂ ಸಹ ಆ ಪರಿಸ್ಥಿತಿ ಬರಬಹುದು. ನಮನ್ನು ಯಾರಾದರೂ ಮೋಸ, ವಂಚನೆ, ಸುಳ್ಳುಗಳಿಂದ ಯಾಮಾರಿಸಬಹುದು. ಕಾರಣ ನಮ್ಮ ಸ್ವಾರ್ಥಕ್ಕಾಗಿ ಇತರರನ್ನು ಹೋಗಳುವುದು, ತೆಗಳುವುದನ್ನು ಮಾಡುವುದು ಎಷ್ಟು ಸರಿ?
ಹಾಗಾಗಿ ನಮ್ಮ ಸ್ವಾರ್ಥ, ಅಹಂ, ಸಿಟ್ಟು, ಕೋಪ, ಹೊಟ್ಟೆಕಿಚ್ಚು ಎಲ್ಲವನ್ನು ಬಿಟ್ಟು ಇದ್ದಂಗ ಇರಬೇಕು. ಮುಂದೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು. ಇದನ್ನೇ ಬಸವಣ್ಣನವರು ತಮ್ಮ ವಚನವೊಂದರಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ ಎಂದು ಹೇಳುವ ಮೂಲಕ ಮನುಷ್ಯನನ್ನು ಸರಿ ದಾರಿಗೆ ತರುವ ಕೆಲಸ ಮಾಡಿದ್ದಾರೆ.
ಭೂಮಿ ಮೇಲೆ ಬಂದಿದ್ದೇವೆ ಎಂದ ಮೇಲೆ ಎಲ್ಲರೂ ಪರಿಪೂರ್ಣರಲ್ಲ. ಹಾಗಾಗಿ ಒಂದು ಮಾತು ಹೆಚ್ಚು ಕಮ್ಮಿ ಆಗಿರಬಹುದು. ಅದನ್ನು ದೊಡ್ಡದು ಮಾಡದೇ ನಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆದಾಗ ಬದುಕು ಸುಂದರವಾಗುವದರಲ್ಲಿ ಎರಡು ಮಾತಿಲ್ಲ. ಬೇಂದ್ರೆ ಅವರು ಹೇಳುವ ಹಾಗೆ;
“ಹುಸಿ ನಗುತ ಬಂದೇವ,
ನಸು ನಗುತಾ ಬಾಳೋಣ,
ತುಸು ನಗುತ ತೆರಳೋಣ,
ಬಡನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರ ಕೇರಳೊಣ”
ಎಂಬಂತೆ ಬದುಕು ಕಟ್ಟಿಕೊಂಡು ಬಾಳಿದರೆ ನಮ್ಮ ಬಾಳು ಸುಂದರವಾಗುವುದರಲ್ಲಿ ಸಂಶಯವೇ ಇಲ್ಲಾ ಅಲ್ವ
ನಾಗಪ್ಪ ಸಿ. ಬಡ್ಡಿ

ಸುಪರ್ ಲೇಖನ ಸರ್. ಲೇಖನದ ಮೂಲಕ
ಸಮಾಜಕ್ಕೆ ಒಳ್ಳೆಯ ಸಂದೇಶ ಹೇಳಿದ್ದೀರಿ ಸರ್.