ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್‌ ಅವರಿಂದ

‘ಹಿಮದ ಧೂಳು’

ಹಿಮದ ಧೂಳನ್ನು
ಹೆಮ್ಲಾಕ್ ಮರದಿಂದ
ಕಾಗೆಯೊಂದು ಹೇಗೆ ನನ್ನ
ಮೇಲೆ ಅಲುಗಾಡಿಸಿ ಉದುರಿಸಿತೋ

ನನ್ನ ಹೃದಯಕ್ಕೆ ಬದಲಾದ
ಮನಸ್ಥಿತಿಯನ್ನು ತಂದಿತು
ಹಾಗೂ ನಾನು ವ್ಯಥೆಪಡುತ್ತಿದ್ದ
ದಿನವೊಂದರ ಅಲ್ಪ ಭಾಗವನ್ನು ಉಳಿಸಿತು

ಚಳಿಗಾಲದ ದಿನವೊಂದರಲ್ಲಿ ನಡೆಯುವ ಅತಿ  ಸಾಮಾನ್ಯ ಕ್ರಿಯೆಯೊಂದು ಕವಿಯ ಮನಸ್ಸಿಗೆ ಹೊಳೆಯಿಸಿದ ಅತಿ ಮುಖ್ಯ ವಿಷಯದ ಬಗ್ಗೆ ಅಮೆರಿಕಾದ ಕವಿ ರಾಬರ್ಟ್ ಫ್ರಾಸ್ಟ್ ನ (1874–1963) ‘ಡಸ್ಟ್ ಆಫ್ ಸ್ನೋ’ ಎಂಬ ಕವಿತೆ ಗಮನ ಸೆಳೆಯುತ್ತದೆ.  ಕೇವಲ ಎಂಟು ಸಾಲುಗಳ ಈ ಸರಳ ಕವಿತೆ ಬದುಕಿನ ವಾಸ್ತವವನ್ನು ಹಾಗೂ ಬದುಕಿನ ಬಗ್ಗೆ ಭರವಸೆಯನ್ನು ಜೊತೆಯಾಗಿಯೇ ಮೂಡಿಸುತ್ತದೆ.
    ಚಳಿಗಾಲದ ದಿನವು ಸುಂದರವೆನಿಸಿದರೂ ಶೀತವು ದೈನಂದಿನ ಜೀವನದಲ್ಲಿ ತೊಂದರೆಯುಂಟು ಮಾಡುತ್ತದೆ. ಪ್ರಕೃತಿಯಲ್ಲಿ ಋತುಗಳ ಬದಲಾವಣೆ ಸಹಜ. ಹುಟ್ಟು ಸಾವುಗಳೂ ಸಹ ಅಂತೆಯೇ. ಸಾವೂ ಸಹ ಉಸಿರಾಟದ ಬಿಸುಪು ನಿಂತ ಶೈತ್ಯ. ಆದರೆ ಸಾವು ಅನಿವಾರ್ಯ. ಮಾನವ ಪ್ರಪಂಚದಲ್ಲಿ ಸಾವಿನ ಬಗ್ಗೆ ಇರುವ ಭಯದಷ್ಟು ಮತ್ಯಾವ ಭಯವೂ ಕಾಡುವುದಿಲ್ಲ. ಪ್ರಕೃತಿಯು ಬದಲಾವಣೆಗೆ ಸಹಜವಾಗಿ ಒಡ್ಡಿಕೊಂಡಂತೆ ಮಾನವರು ಸಾವನ್ನು ಒಪ್ಪಿಕೊಳ್ಳುವುದು ಕಷ್ಟ. ಇಲ್ಲಿ ಬೀಳುವ ಅತಿ ಹಗುರ ಹಾಗೂ ಅತ್ಯಲ್ಪವಾದ ಅಷ್ಟೇ ಬೇಗ ಕಣ್ಮರೆಯಾಗುವ ಹಿಮದ ಕಣ ಸಂಕೇತವಾಗಿರುವುದು  ನಶ್ವರ ಬದುಕಿಗೆ.
   ಹೆಮ್ಲಾಕ್ ಮರದ ಕೆಳಗೆ ನಿಂತ ಕವಿಯ ಮೇಲೆ ಕಾಗೆಯೊಂದು ಉದುರಿಸಿದ ಹಿಮದ ಕಣವೊಂದು ನಶ್ವರ ಬದುಕಿನಲ್ಲಿ ಸಾವಿಗೆ ಹೆದರುತ್ತಾ ಇರುವ ಅಲ್ಪ ಸಮಯವನ್ನು ವ್ಯರ್ಥಗೊಳಿಸಿಕೊಳ್ಳಬಾರದೆಂಬ ಅರಿವನ್ನು ಕವಿಯಲ್ಲಿ ಮೂಡಿಸುತ್ತದೆ. ಈ ಒಂದು ಸಾಧಾರಣ ಕ್ರಿಯೆಯು ಇಡೀ ದಿನ ಖಿನ್ನಗೊಂಡಿದ್ದ ಕವಿಯ ಹೃದಯದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿ ಹೊಸ ಉಲ್ಲಾಸದ ಮನೋಭಾವವನ್ನು ಹುಟ್ಟು ಹಾಕಲು ಕಾರಣವಾಯಿತು. ಅದುವರೆಗೂ ವ್ಯಥೆಯಲ್ಲಿ ದಿನ ಕಳೆಯುತ್ತಿದ್ದ ಕವಿ ಕ್ಷಣಾರ್ಧದಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಕ್ಷಣದಲ್ಲಿ ವ್ಯಥೆಯೂ ಅಲ್ವವಾಗಿ ಬದುಕಿನ ಬಗ್ಗೆ ನಿರೀಕ್ಷೆ ಮೊಳೆಯುತ್ತದೆ.
  ಯಾವುದೇ ಬದಲಾವಣೆಯು ಕ್ಷಣಾರ್ಧದಲ್ಲಿ ಆಗಬಹುದು ಹಾಗು ಅದಕ್ಕೆ ಕಾರಣವೂ ಸಹ ಎಷ್ಟೇ ಕ್ಷುಲ್ಲಕವಾಗಿಯೂ ಇರಬಹುದು ಎಂಬ ಸತ್ಯವನ್ನು ಈ ಕವಿತೆಯು ತೋರಿಸುತ್ತದೆ. ಎಷ್ಟೋ ಬಾರಿ ನಡೆವ ನಕಾರಾತ್ಮಕ ಅನುಭವಗಳು, ಕ್ರಿಯೆಗಳು ಬದುಕಿನಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಮೆಟ್ಟಿಲಾಗುವ ವಿಶೇಷವನ್ನು ತೋರಿಸುವುದು ಇಲ್ಲಿ ಕಾಗೆ ಹಾಗೂ ಹೆಮ್ಲಾಕ್ ಮರಗಳ ರೂಪಕದ ಮೂಲಕ.  ವಿಷ ಹಾಗೂ ಸಾವಿಗೆ ಹೆಮ್ಲಾಕ್ ಮರ ಹಾಗೂ ಋಣಾತ್ಮಕ ಮತ್ತು ಅಪಶಕುನಕ್ಕೆ ಕಾರಣವೆಂದು ದೂಷಿಸಲ್ಪಟ್ಟ ಕಾಗೆ ಇಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣಕರ್ತರಾಗಿದ್ದಾರೆ. ಹಾಗಾಗಿ ಕಾಗೆಯ ಕಪ್ಪು ಹಿಮದ ಬಿಳುಪಿನಲ್ಲಿ ಬದುಕಿನ ಪಾಠವನ್ನು ಹೇಳಿಕೊಡುತ್ತದೆ. ಸೃಷ್ಟಿಯ ಭಾಗವಾಗಿರುವ ಮನುಕುಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುವುದು ಪ್ರಕೃತಿಯ ಮಡಿಲಲ್ಲಿ ಎಂಬ‌ ಅಂತಿಮ ಸತ್ಯವನ್ನು ಈ ಕವಿತೆಯು ಎತ್ತಿ ಹಿಡಿಯುತ್ತದೆ. ಸರಳವಾದ ಹಾಗು ಲಘು ಧಾಟಿಯಲ್ಲಿರುವ ಈ ಕವಿತೆ ಸಾರುವ  ತತ್ವ ಹಾಗೂ ದರ್ಶನ  ಅಮೂಲ್ಯವಾದದ್ದು.


Leave a Reply

Back To Top