ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ತನಗಗಳು

ಮಾತಿನೊಳು ಎಲ್ಲರೂ
ನೂರಕ್ಕೆ ನೂರು ಸರಿ
ಕೃತಿಯು ಬರೆ ನೋಡಿ
ಹಿಂಜರಿತ ಜರೂರಿ
ದೇವಲೋಕದ ಚಿಕ್ಕೆ
ತರಲೆ ಎಂದೆ ನಾನು
ದೀಪಕ್ಕೆಣ್ಣೆ ಇಲ್ಲವೊ
ತಂದು ಕೊಡು ಎಂದಳು
ಚುನಾವಣೆಗೆ ಮುನ್ನ
ಭರ್ಪೂರ ಆಶ್ವಾಸನೆ
ಮುಂದಿನೈದು ವರುಷ
ಬರೀ ಅವು ಸ್ಮರಣೆ
ಕಾಣುವರು ಎಲ್ಲರೂ
ಸುಂದರ ಕನಸನು
ಧೀರನಾದವ ಮಾತ್ರ
ಮಾಳ್ಪನು ನನಸನು
ಉದಯದಿ ಬಂದರೆ
ಸುಕೋಮಲ ಯೋಚನೆ
ಇಡೀ ದಿನಕದೆ ತಾ
ಸುಂದರ ಮುನ್ಸೂಚನೆ
ಎಲ್ಲಿಯೋ ಸ್ವರ್ಗವೆಂದು
ವ್ಯರ್ಥ ಕೊರಗುವದು
ಮೈಮುರಿದು ದುಡಿಯೆ
ಇಲ್ಲಿಯೆ ಸಾಧ್ಯವದು
ಇಸ್ತ್ರಿಗೈದ ಡ್ರೆಸ್ಸಿನ
ಹಾಗೆ ನೇರವೇ ಬಾಳು
ಸುತ್ತ ನೂರಾರು ಚಕ್ರ
ತಿರುಗಣಿಯ ಗೋಳು
ಕೊನೆಯಲ್ಲಿ ಸುಂಖಾಂತ
ಪರದೆ ಮೇಲೆ ಚಿತ್ರ
ಬಾಳಿನಲಿ ಇಹವು
ಸಾವಿರಾರು ವೈಚಿತ್ರ್ಯ
ಹೂಮುಡಿದು ನಡೆದು
ಸುಂದರಿ ನಡೆದರೆ
ಬೆ್ನ್ಹತ್ತಿ ಹೊರಟರು
ದುಂಬಿಯೋಲ್ ಯುವಕರೆ
ಸುಖಾಸೀನ ಬಶ್ಸಿನ
ಯಾನ ಬಲು ಸುಲಭ
ಮೈಮರೆತು ಮಲಗೆ
ಸೊಳ್ಳೆ ಪುಕ್ಕಟೆ ಲಭ್ಯ
ಬಿಟ್ಟು ನಾ ಮಲಗಿದ್ದೆ
ಮಾಡುವಕಾರ್ಯ ಬಿಟ್ಟು
ಎಚ್ಚರಿಸಿತು ಸೊಳ್ಳೆ
ಸರಿ ಏಟನು ಕೊಟ್ಟು
——————————————————————————————————
ವೈ.ಎಂ.ಯಾಕೊಳ್ಳಿ
