ವೈಚಾರಿಕ ಸಂಗಾತಿ
ಸುಮತಿ ಪಿ
“ಅವಮಾನಗಳ ಗೆದ್ದರಷ್ಟೇ ಸನ್ಮಾನ”

ಸಮ್ಮಾನ,ಅವಮಾನಗಳು ಮನುಷ್ಯ ಜೀವನದಲ್ಲಿ ಸಹಜ.ಜೀವನದಲ್ಲಿ ಸೋಲು ಕಂಡಾಗ ಅವಮಾನವಾಗುವ ಪ್ರಸಂಗಗಳು ಬರಬಹುದು.ಆದರೆ ಅವಮಾನಗಳಿಗೆ ಕುಗ್ಗಬಾರದು,ಸೋಲಬಾರದು.ಸೋಲನ್ನೇ ಸವಾಲಾಗಿ ಸ್ವೀಕರಿಸಿ ಸಡ್ಡೊಡೆದು ನಿಲ್ಲುವ ಛಲ,ಬಲ, ಪ್ರಾಮಾಣಿಕ ಪ್ರಯತ್ನ ನಮ್ಮಲ್ಲಿದ್ದರೆ ಸಾಧಿಸಬೇಕೆಂದಿರುವುದನ್ನು ಸಾಧಿಸಿಯೇ ಬಿಡುತ್ತೇವೆ.ಅವಮಾನ ಮಾಡಿದವರ ಎದುರು ಎದ್ದು ನಿಲ್ಲಬೇಕು.ಗೆದ್ದು ತೋರಿಸಬೇಕು.ಅದಕ್ಕೆ ದೃಢ ಮನಸ್ಸು.ಶ್ರದ್ಧೆಯ ಶ್ರಮ,ಭರವಸೆ, ಆತ್ಮವಿಶ್ವಾಸ ಎಲ್ಲವೂ ಬೇಕಾಗುತ್ತದೆ.
ನಾವು ಪಠ್ಯ ಪುಸ್ತಕಗಳಲ್ಲಿ ಓದಿದ ಕೆಲವು ಮಹನೀಯರ ಜೀವನಗಾಥೆಗಳನ್ನೇ ತೆಗೆದುಕೊಂಡು ನೋಡಿದರೆ ನಮಗೆ ಗೊತ್ತಾಗುತ್ತದೆ. ಏನೇನೋ ಸಾಧನೆ ಮಾಡಿದ ವಿಜ್ಞಾನಿಗಳು, ಸಾಹಿತಿಗಳು ಹೀಗೆ ಮಹಾನ್ ವ್ಯಕ್ತಿಗಳು ಅವರ ಜೀವನದಲ್ಲಿ ಅವಮಾನವನ್ನು ಅನುಭವಿಸಿಯೇ ಅವರು ಸಾಧನೆಯನ್ನು ಮಾಡಿರುತ್ತಾರೆ. ಅವರಿಗಾದ ಕಹಿ ಅನುಭವವೇ ಅವರ ಜೀವನದಲ್ಲಿ ಪಾಠವನ್ನು ಕಲಿಸಿ ಅವರು ಸಾಧನೆಯನ್ನು ಮಾಡಲು ಸಾಧ್ಯವಾಗಿರುವುದನ್ನು ನಾವು ನೋಡಬಹುದು ಉದಾಹರಣೆಗೆ ಮಹಾಭಾರತದಲ್ಲಿ ಬರುವ ಏಕಲವ್ಯ.ಏಕಲವ್ಯನಿಗೆ ದ್ರೋಣರು ಬಿಲ್ವಿದ್ಯೆ ಕಲಿಸಲು ನಿರಾಕರಿಸಿದಾಗ ಅವನು ದ್ರೋಣಾಚಾರ್ಯರ ಪ್ರತಿಮೆಯನ್ನು ಮಾಡಿ,ಅದರೆದುರು ಬಿಲ್ವಿದ್ಯೆ ಕಲಿತು ಅರ್ಜುನನ್ನೂ ಮೀರಿಸಿ,ಇಂದಿಗೂ ಅವನ ಹೆಸರು ಸ್ಥಿರವಾಗಿ ಉಳಿಯಿತಲ್ಲವೇ!! ಅವಮಾನಗಳನ್ನು ಗೆದ್ದರಷ್ಟೇ ಸನ್ಮಾನ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?
ಕೆಲವರು ನಮ್ಮನ್ನು ತುಳಿಯಬೇಕು ಸೋಲಿಸಬೇಕೆಂದೇ ಅವಮಾನ ಮಾಡುವವರಿದ್ದಾರೆ. ಅಂತಹ ಸಂದರ್ಭದಲ್ಲಿ ನಾವು ಕುಗ್ಗಿ ಹೋದರೆ ಅವರೇ ಗೆದ್ದು ಬಿಡುತ್ತಾರೆ. ಬದಲಾಗಿ ಎದ್ದು ತೋರಿಸುತ್ತೇನೆ ಎಂದು ಸವಾಲೆಸೆದು ನಮ್ಮನ್ನು ತುಳಿದವರನ್ನು ತಿಳಿದು ಸಾಧನೆ ಮಾಡಿ ಸನ್ಮಾನಿತರಾಗಿ ತೋರಿಸಬೇಕು. ಹೆಚ್ಚು ಟೀಕೆಗಳಿಗೆ ಒಳಗಾದ ವ್ಯಕ್ತಿ ಮಾನಸಿಕವಾಗಿ ದೃಢತೆ ಹೊಂದಿರುತ್ತಾನೆ. ಅಂಥವನು ಸಾಧನೆಯನ್ನು ಮಾಡಲು ಮನಸ್ಸು ಮಾಡಿದರೆ,ಸಾಧಿಸಿಯೇ ತೋರಿಸುತ್ತಾನೆ.

ಇಂದು “ಇನ್ನೊಬ್ಬರನ್ನು ಟೀಕಿಸುವುದು ಮನುಜ ಸಹಜ ಗುಣ” ಎಂಬಂತೆ ಆಗಿ ಹೋಗಿದೆ.”ಕೈಯ್ಯಲ್ಲಾಗದವ ಮೈಪರಚಿಕೊಂಡ”ಎಂಬಂತೆ ಏನೇ ಮಾಡಲಿ ಅದಕ್ಕೆ ಕೆಲವೊಂದು ಟೀಕೆಗಳು ಇದ್ದೆ ಇರುತ್ತವೆ. “ತಾನಾಗಿ ಮಾಡುವುದಿಲ್ಲ,ಇತರರಿಗೆ ಮಾಡಲು ಬಿಡುವುದಿಲ್ಲ “ಎಂಬಂತೆ ಕೆಲವರು ಇರುತ್ತಾರೆ .ಅಂಥವರಿಗೆ ತಾವು ಟೀಕಿಸುವ ವಿಷಯದ ಬಗ್ಗೆ ಜ್ಞಾನವೇ ಇರುವುದಿಲ್ಲ .ಅದರ ಒಳ ಹೊರಗು, ತಲೆ ಬುಡ ಯಾವುದು ಅರ್ಥವಾಗಿರುವುದಿಲ್ಲ. ಟೀಕಿಸುವುದಕ್ಕಾಗಿಯೇ ಟೀಕಿಸುತ್ತಾರೆ. ಅಂಥವರ ಎದುರು ನಾವು ಕುಗ್ಗಬಾರದು. ಟೀಕಿಸಿದವನೇ ಮತ್ತೊಂದು ದಿನ ಹೊಗಳುವ ಹಾಗೆ ಮಾಡಿ ತೋರಿಸಬೇಕು. ಅದು ಬಿಟ್ಟು ಅವರಿವರು ಟೀಕಿಸುತ್ತಾರೆ ಎಂದು ತಾನು ಮಾಡುವುದನ್ನು ಅರ್ಧಕ್ಕೆ ಬಿಟ್ಟು ಪಲಾಯನ ಮಾಡುವುದು ನಮ್ಮ ಹೇಢಿತನವಾಗುತ್ತದೆ. ಹಾಗಾಗಿ ಅವಮಾನಗಳು ನೋಯಿಸಿದಾಗ,ಮನಸ್ಸನ್ನು ಘಾಸಿಗೊಳಿಸಿದಾಗ,ನಾವು ಕುಸಿದು ಹೋಗುತ್ತೇವೆ.ಆ ಕ್ಷಣದಲ್ಲಿ ಕೊಡವಿ ಎದ್ದು ನಿಲ್ಲಬೇಕು.ಬದುಕಿನಲ್ಲಿ ನ್ಯಾಯ,ನಿಯತ್ತಿನ ನಡೆಯಲ್ಲಿ ನಾವಿರುವಾಗ ಹೆದರಿ ಹಿಂಜರಿಯುವ ಮನಸ್ಸು ಮಾಡಬಾರದು.ಪ್ರಾರಂಭದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು .ಆದರೆ ಒಂದಲ್ಲ ಒಂದು ದಿನ ನಾವು ಮಾಡಿದ ಕೆಲಸ ಗುರುತಿಸಲ್ಪಟ್ಟಾಗ,ನಾವು ಎಷ್ಟು ನೊಂದಿರುತ್ತೇವೆಯೋ ಅದರ ಇಮ್ಮಡಿ ಖುಷಿ ನಮ್ಮದಾಗುತ್ತದೆ.ನಮಗೆ ಸಂತೃಪ್ತಿ ಸಿಗುತ್ತದೆ.ಇದಕ್ಕೆ ಜೀವನದಲ್ಲಿ ಧೈರ್ಯ, ಆತ್ಮವಿಶ್ವಾಸ,ಹಠ, ಛಲ,ಬಲ, ಶ್ರಮ ಇವೆಲ್ಲವೂ ಬೇಕಾಗುತ್ತದೆ .ಇಂತಹ ವ್ಯಕ್ತಿತ್ವವನ್ನು ಹೊಂದಿದಂತಹ ವ್ಯಕ್ತಿ ಯಾವುದೇ ಅವಮಾನಗಳು ಎದುರಾದರೂ, ಕುಗ್ಗದೆ ತಾನು ಹಿಡಿದ ಕೆಲಸವನ್ನು ಪೂರ್ಣಗೊಳಿಸುತ್ತಾನೆ. ಅದು ಗುರಿತಿಸಲ್ಪಡಲಿ ಅಥವಾ ಗುರುತಿಸಲ್ಪಡದೇನೆ ಇರಲಿ. ಆತ ಅದರ ಬಗ್ಗೆ ಚಿಂತೆ ಮಾಡದೆ ತನ್ನ ಪಾಡಿಗೆ ತಾನು ಮಾಡಬೇಕಾದುದನ್ನು ಮಾಡಿಕೊಂಡು ಸಾಗುತ್ತಾನೆ. ಅಂಥವನು ಒಂದಲ್ಲ ಒಂದು ದಿನ ಗುರುತಿಸಲ್ಪಟ್ಟೇ ಪಡುತ್ತಾನೆ. ಅದಕ್ಕೆ ಹಿರಿಯರು ಹೇಳಿದ್ದು” ಪ್ರತಿಭೆ ಇದ್ದರೆ ಅದು ಕೊಚ್ಚೆಯಲ್ಲಿಯೂ ಗುರುತಿಸಲ್ಪಡುತ್ತದೆ” ಎಂದು.ಕೆಸರಿನಲ್ಲಿ ಹುಟ್ಟಿದ ತಾವರೆ ದೇವರ ಮುಡಿಯೇರುವುದಿಲ್ಲವೇ?. ಹಾಗಾಗಿ ಇತರರ ಟೀಕೆಗಳಿಗೆ ಅವಮಾನಗಳಿಗೆ ಹೆದರಿ ಹಿಂಜರಿಯುವುದು ಸಾಧಕರ ಲಕ್ಷಣವಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು.
ಅರ್ಜೆಂಟೀನಾದ ಒಬ್ಬ ಕವಿ ಹೋರ್ಹೆ ಲೂಯಿಸ್ ಬೊರ್ಹೆಸ್ ಎನ್ನುವ ಕುರುಡ ಹೇಳುತ್ತಾನೆ. “ಅವಮಾನ ಮತ್ತು ಟೀಕೆಗಳು ಮನುಜನ ಬದುಕಿಗೆ ಕಚ್ಛಾ ವಸ್ತು ಇದ್ದ ಹಾಗೆ” ಎಂದು.ಅವಮಾನ ಮತ್ತು ಟೀಕೆಗಳಿಗೆ ಉತ್ತರವಾಗಿ ನಾವು ಜೀವನ ರೂಪಿಸಿಕೊಳ್ಳಬೇಕು.’ಅವಮಾನ ಎಂಬುವುದು “ರಿಸೋರ್ಸ್” ಅಂದರೆ “ಸಂಪನ್ಮೂಲ”ಇದ್ದ ಹಾಗೆ ಎನ್ನುತ್ತಾನೆ.ದೇವರು ನಮಗೆ ಏನನ್ನೇ ಕೊಡುವಾಗಲೂ ಅದರ ಹಿಂದೆ ಒಂದು ಉದ್ದೇಶವನ್ನು ಇಟ್ಟುಕೊಂಡೇ ಕೊಡುತ್ತಾನೆ”ಇಂದು ನಾವು ತಿಳಿಯಬೇಕು. ಹಾಗಾಗಿ ನಾವು ಎದುರಿಸುವ ಪ್ರತಿ ಅವಮಾನದಲ್ಲೂ ಸಾಧನೆಯ ನೆರಳು ಇದ್ದೇ ಇರುತ್ತದೆ. ಅಂತೆಯೇ ಅವನು ಅವಮಾನ,ಟೀಕೆಗಳೆಂಬ ಸಂಪನ್ಮೂಲಗಳನ್ನು ನಾವು ನಮ್ಮ ಜೀವನದ ಸಾಧನೆಗೆ ಬಳಸಿಕೊಳ್ಳಬೇಕು ಎನ್ನುತ್ತಾನೆ.
ಇಲ್ಲಿ ನಾನು ಕಂಡಂತಹ ಒಂದು ಕುಟುಂಬದ ಚಿತ್ರಣ ನನ್ನ ಕಣ್ಣೆದುರಿಗೆ ಬರುತ್ತದೆ. ಅವಿಭಕ್ತ ಕುಟುಂಬವೊಂದರಲ್ಲಿನ ತಂದೆ ತಾಯಿಗೆ ಆರು ಜನ ಗಂಡು ಮಕ್ಕಳಿರುತ್ತಾರೆ. ಅವರಲ್ಲಿ ಒಬ್ಬ ರಾಜೇಶ.ರಾಜೇಶನಿಗೆ ನಾಲ್ಕು ಜನ ಹಿರಿಯ ಸಹೋದರರು ಮತ್ತು ಒಬ್ಬ ಕಿರಿಯ ಸಹೋದರ.ಅವರೆಲ್ಲ ಮನೆಯಿಂದ ಹೊರಗಡೆ ಇದ್ದು,ವ್ಯಾಪಾರವನ್ನು ಮಾಡಿ ಹಣ ಸಂಪಾದನೆ ಮಾಡಿದ್ದರು. ಆದರೆ ರಾಜೇಶ ಮನೆಯಲ್ಲಿ ಇದ್ದುಕೊಂಡು,ತಂದೆ ತಾಯಿಯರನ್ನು ನೋಡಿಕೊಂಡು, ಕೃಷಿ ಕೆಲಸವನ್ನು ಮಾಡಿಕೊಂಡು ಇದ್ದನು.
ಸಹೋದರರೆಲ್ಲ “ನೀನು ಮನೆಯಲ್ಲಿರು.ನಿನಗೆ ಖರ್ಚಿಗೆ ಹಣ ನಾವು ಕೊಡುತ್ತೇವೆ”. ಎನ್ನುತ್ತಿದ್ದರಷ್ಟೇ.ಒಂದು ಪೈಸೆ ಕೂಡ ಕೊಡುತ್ತಿರಲಿಲ್ಲ. ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದಾಗ ಎಲ್ಲ ಅಣ್ಣ ತಮ್ಮಂದಿರು ಒಟ್ಟಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವವನೆಂಬ ಕಾರಣಕ್ಕೆ ರಾಜೇಶ ಬಂದವರಿಗೆಲ್ಲ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಡಬೇಕಿತ್ತು. ಜೊತೆಗೆ ಐದು ಮಂದಿ ಸಹೋದರರ ಅವಮಾನದ ಮಾತುಗಳನ್ನೂ ಆತ ಸದಾ ಕೆಳ ಬೇಕಿತ್ತು,ಕೇಳಿ ಸಹಿಸಿಕೊಳ್ಳಬೇಕಿತ್ತು . ಏಕೆಂದರೆ ಅವರೆಲ್ಲರೂ ಬೇಕಾದಷ್ಟು ಹಣ ಸಂಪಾದನೆಯನ್ನು ಮಾಡಿದ್ದರು.ಮನೆಯಲ್ಲಿ ಇದ್ದುಕೊಂಡು ಕೃಷಿ ಕೆಲಸವನ್ನು ಮಾಡುತ್ತಿದ್ದ ರಾಜೇಶ ತೋಟವನ್ನು ಮಾಡಿ,ಫಸಲು ಬರುತ್ತಿದ್ದರೂ, ಸಂಪಾದನೆ ಮಾಡುತ್ತಿದ್ದರೂ, “ಅಪ್ಪ-ಅಮ್ಮನ ಆಸ್ತಿ “ಎನ್ನುವ ಕಾರಣಕ್ಕೆ ಅಣ್ಣಂದಿರ ಆಜ್ಞೆಯಂತೆ ಸಿಗುವ ಸಂಪಾದನೆ ಎಲ್ಲಾ ತಂದೆ ತಾಯಿಗಳ ಖಾತೆಗೆ ಜಮಾ ಆಗುತ್ತಿತ್ತು.ಹೀಗಿರುವಾಗ ಅವನಿಗೆ ಮದುವೆಯಾಯಿತು. ಮದುವೆಯಾದ ನಂತರವೂ ಅವಮಾನದ ಮಾತುಗಳು ಮನಸ್ಸನ್ನು ಘಾಸಿಗೊಳಿಸಲು ಪ್ರಾರಂಭಿಸಿದವು. ಈಗ ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಕೈಚಾಚುವುದು ಅವನ ಸ್ವಾಭಿಮಾನ ವನ್ನು ಕೆರಳಿಸಿತು. ಏಕಾಂಗಿಯಾಗಿದ್ದಾಗ ಸಹಿಸಿಕೊಂಡಿದ್ದವನಿಗೆ,ಹೆಂಡತಿಯ ಎದುರು ಅದನ್ನೆಲ್ಲಾ ಸಹಿಸಿಕೊಳ್ಳುವುದಕ್ಕೂ ಕಷ್ಟವಾಗತೊಡಗಿತು.
“ಸಂಬಂಧಗಳು ಯಾವುದೇ ಇರಲಿ ,ಅಲ್ಲಿ ನಮಗೆ ಬೆಲೆ ಇಲ್ಲವೆಂದಾದ ಮೇಲೆ ಅಲ್ಲಿಂದ ದೂರ ಸರಿಯಬೇಕು”. ಎಂಬುದನ್ನರಿತ ರಾಜೇಶ “ಜೀವನವನ್ನು ಸವಾಲಾಗಿ ಸ್ವೀಕರಿಸಿ,ಸಾಧನೆಯನ್ನು ಮಾಡಿ ತೋರಿಸಬೇಕು” ಎಂಬ ಹಠದಿಂದ
ಮನೆ ಬಿಟ್ಟು, ಹೊರಗೆ ಬಂದು ದುಡಿಯಲಾರಂಬಿಸಿದನು.ಎರಡು ವರ್ಷ ಬಹಳ ಕಷ್ಟ ಎದುರಿಸಿದನು.ಅವನ ಅದೃಷ್ಟದಲ್ಲಿ ಮುಂದೆ ಸರಕಾರಿ ತರಬೇತಿಯೊಂದನ್ನು ಪಡೆಯುವ ಅವಕಾಶ ಸಿಕ್ಕಿತು. ಸರಕಾರಿ ಉದ್ಯೋಗವನ್ನೂ ಗಳಿಸಿದ.ಮುಂದೆ ಕೆಲವೇ ವರ್ಷಗಳಲ್ಲಿ ತನಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಆತ ಮಾಡಿಕೊಂಡನು.ಇರಲು ಮನೆ,ತಿರುಗಾಡಲು ಕಾರು ಹೀಗೆ ಸ್ಥಿತಿವಂತನಾಗುತ್ತಲೇ ಅವನ ಬಗ್ಗೆ ಮನೆಯವರ, ಸಮಾಜದವರ ದೃಷ್ಟಿಕೋನವೇ ಬದಲಾಯಿತು.ಅವನ ಮನೆಯಲ್ಲಿ ಅಲ್ಲದೇ ಊರಿನ ಜನರೂ ಅವನನ್ನು ಹೊಗಳಲು ಪ್ರಾರಂಭಿಸಿದರು. ಊರಿನಲ್ಲಿ ಯಾವುದೇ ಕಾರ್ಯಕ್ರಮ ಆಗುವುದಿದ್ದರೂ ಅವನಿಗೆ ಮೊದಲ ಹೇಳಿಕೆ ಹೋಗುತ್ತಿತ್ತು. ಜನರೆಲ್ಲರೂ “ಹೇಗಿದ್ದವ ಹೇಗಾದ”ಎಂದು ಮಾತನಾಡಿಕೊಳ್ಳುತ್ತಿದ್ದರು.
ರಾಜೇಶನ ಮನೆಯಲ್ಲಿ ಈಗೀಗ ರಾಜೇಶ ಇಲ್ಲದೇ ಯಾವ ಕೆಲಸವೂ ನಡೆಯದು.ಇದು ನಾನು ನೋಡಿ ತಿಳಿದ ಘಟನೆ. ಇಂತಹ ಅನೇಕ ನಿದರ್ಶನಗಳನ್ನು ನಾವು ನಮ್ಮ ಸುತ್ತಮುತ್ತಲೂ ಕಾಣಬಹುದು. ನಮ್ಮಲ್ಲಿ ಏನೋ ಒಂದು ಕೊರತೆ ಇದ್ದಾಗ ಎಲ್ಲರೂ ಅವಮಾನ ಮಾಡುತ್ತಾರೆ.ಅಂತಹ ಅವಮಾನಗಳನ್ನು ಸಹಿಸಿ, ಆ ಕೊರತೆಯನ್ನು ನೀಗಿಸಲು ಶ್ರಮಪಟ್ಟು ದುಡಿದರೆ ನಮಗೆ ಅದೃಷ್ಟ ಒಲಿದೇ ಒಲಿಯುತ್ತದೆ .”ಅವಮಾನ ಗೆದ್ದರಷ್ಟೇ ಸನ್ಮಾನ “ಎಂಬುದು ಎಷ್ಟು ಅರ್ಥಪೂರ್ಣವಾದ, ಜೀವನ ಸಹಜವಾದ, ಅನುಭವ ಜನ್ಯವಾದ ಮಾತಲ್ಲವೇ !!!. ಹಾಗಾಗಿ ನಮ್ಮ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ,ಯಾವುದೇ ರೀತಿಯ ಅವಮಾನವಾದರೂ ಸಹ ನಾವು ಕುಗ್ಗದೆ ಅದನ್ನು ಗೆಲ್ಲುವ ಛಲ, ಬಲ, ಧೈರ್ಯ ವಹಿಸಿದಾಗ ಮಾತ್ರ ನಮಗೆ ಸನ್ಮಾನ ಸಿಗುತ್ತದೆ.ಅವಮಾನದ ಬದುಕನ್ನು ಸವಾಲಾಗಿ ಸ್ವೀಕರಿಸಿ,ಗೆದ್ದು ತೋರಿಸುವಲ್ಲಿ ಮನುಜನ ಬದುಕಿನ ಸಾರ್ಥಕತೆ ಅಡಗಿದೆ.
ಡಾ.ಸುಮತಿ ಪಿ
