ಕಾವ್ಯ ಸಂಗಾತಿ
ಸುತ (ಸುರೇಶ ತಂಗೋಡ )
“ಗೊಟ್ಟ”

ಅಪ್ಪ ಜಾನುವಾರುಗಳಿಗೆ
ಗುಣವಾಗಲೆಂದು
ಔಷಧಿ ಹಾಕಲು ಬಳಸುತ್ತಿದ್ದ ಸಾಧನವೀಗ
ನನಗೂ ಬೇಕು. ಜಾನುವಾರುಗಳಿಗಲ್ಲ,
ಕೆಲವು ಮತಿಹೀನರಿಗೆ .
ಜಾತಿಯಿಂದ ಬಳಲುವವರಿಗೆ
ಜಾತ್ಯತೀತ ಔಷಧಿ ಹಾಕಲು,
ಭ್ರಷ್ಟಾಚಾರದ ಕಾಮಾಲೆ ಬಂದವರಿಗೆ
ಪ್ರಾಮಾಣಿಕತೆಯ ಗುಳಿಗೆ ನೀಡಲು.
ಗೊಟ್ಟ ಬೇಕೇಬೇಕು
ಮಾನವೀಯತೆಯ ಮರೆತವರಿಗೆ
ನೆನಪಿನ ಮಾತ್ರೆ ನೀಡಲು
ನ್ಯಾಯ, ನೀತಿಗಳ ಪಾಠ ಕಲಿಸಲು.
ಜನರ ಮನಸ್ಥಿತಿಗೆ ಬಡಿದ ರೋಗವ
ವಾಸಿ ಮಾಡಲು,
ಗೊಟ್ಟ ಹಾಕಬೇಕಿದೆ
ಈ ಸಮಾಜಕ್ಕೆ,
ಆಗಲಾದರೂ ಹುಸಾರಾಗಬಹುದು ಈ ಸಮಾಜ.
ಸುತ
