ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್

ನೀರವ ಏಕಾಂಗಿತನದಲಿ ನನ್ನೆದೆಯ ಹಣತೆಯನು ಬೆಳಗಿದವರು ಯಾರು
ಮಲಗಿದ ಭಾವವನು ಮೆಲ್ಲಗೆ ತಟ್ಟಿ ಎಚ್ಚರಿಸಿದವರು ಯಾರು
ಮಹಾ ಮೌನದಲಿ ಮಧುರ ಗಾನವೊಂದು ಕೇಳುತಿದೆ ಅಲ್ಲವೇ
ಮುಚ್ಚಿದ ಕಣ್ರೆಪ್ಪೆಯ ಕದವನು ಸದ್ದಿಲ್ಲದೆ ತೆರೆದವರು ಯಾರು
ಬಿಗಿದು ಕಟ್ಟಿದ ಕಪ್ಪನೆಯ ಕೇಶರಾಶಿಯು ಬಿಚ್ಚಿ ಜಾರುತಿದೆ
ಕಂಗಳಲಿ ಉಡುಗಿದ ಕಾಂತಿಯನು ಮತ್ತೊಮ್ಮೆ ತುಂಬಿದವರು ಯಾರು
ಮುದುರಿದ ತುಟಿ ಪಕಳೆಗಳು ರಂಗೇರಿ ನಸು ನಗುತಲಿವೆ
ಮನಕೆ ಕವಿದ ಪರದೆಯ ಸರಿಸಿ ಬೆಳಕು ತೂರಿದವರು ಯಾರು
ಹೂತು ಹೋದ ಹೆಜ್ಜೆ ಕಿತ್ತೆದ್ದು ಊರಿದೆ ದೃಢ ವಿಶ್ವಾಸದಲಿ
ಬೇಗಂ ಳ ಹೃದಯ ಬಟ್ಟಲೊಳು ಒಲವನು ಹನಿಸಿದವರು ಯಾರು

ಹಮೀದಾ ಬೇಗಂ ದೇಸಾಯಿ
ನೀರವತೆಯಲ್ಲಿ ನವಿರಾಗಿ ಸದ್ದು ಮಾಡಿದೆ ಗಝಲ್…
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದ..
ಹಮೀದಾಬೇಗಂ ದೇಸಾಯಿ.