ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ”

ಹಸಿರು ಹಳದಿ ಗುಲಾಬಿ ಜಾಂಬಳಿ
ಕೆಂಪು ನೀಲಿ ಬಣ್ಣಗಳ ಸುರಿಮಳಿ
ವಿವಿಧ ಬಣ್ಣಗಳಲಿ ಮನವು ತಿಳಿ
ಮತ್ತೆ ಮರಳಿದೆ ರಂಗಿನ ಹೋಳಿ

ತುಂಬು ಚಂದಿರನ ಹುಣ್ಣಿಮೆ ದಿನ
ಬೊಬ್ಬೆ ಹಾಕಿ ಕಾಮಣ್ಣನ ದಹನ
ದುಃಖ ಚಿಂತೆ ಕೆಡಕುಗಳ ಶಮನ
ಬಣ್ಣವೆರಚಿ ರಂಗಿನಾಟ ಮರುದಿನ

ಪುರುಷ ಮಹಿಳೆ ಮಕ್ಕಳೆಲ್ಲರು ಸೇರಿ
ಹಿಡಿದು ಕೈಯಲ್ಲಿ ಬಣ್ಣದ ಪಿಚಕಾರಿ
ಕುಣಿದು ಕುಪ್ಪಳಿಸಿ ಊದಿ ತುತ್ತೂರಿ
ಸಂತಸದಲಿ ಮಾಡಿ ಬೈಕ್ ಸವಾರಿ

ಜಾತಿ ಮತಗಳ ಬೇಧವನು ಮರೆತು
ನಾವೆಲ್ಲರೂ ಒಂದೇ ಎಂದು ಅರಿತು
ಬಣ್ಣದ ಓಕುಳಿಯ ಆಡುತ ಬೆರೆತು
ಏಕತೆಯ ಸಾರುವ ಹಬ್ಬ ಒಳಿತು

ಮನೆ ಮನೆಯಲ್ಲಿ ಸಿಹಿ ಹೋಳಿಗೆ
ರುಚಿಯಾದ ಭಜಿ ಕುಂಬಳ ಗಾರಿಗೆ
ವಿಧ ವಿಧ ಕರಿದ ಹಪ್ಪಳ ಸಂಡಿಗೆ
ಅರ್ಪಿಸಲು ದೇವರ ನೈವೇದ್ಯೆಗೆ

ಈ ಸಂಭ್ರಮದ ಹೋಳಿ ಹಬ್ಬವು
ಶುಭವನು ತರಲಿ ಎಲ್ಲರ ಬದುಕಲಿ
ಸುಧೀರ್ಘ ಪಯಣದ ಜೀವನವು
ನಗುವೆಂಬ ಬಣ್ಣದಿಂದ ತುಂಬಿರಲಿ

——————

Leave a Reply

Back To Top