ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಈ ಜಗತ್ತನ್ನು ಕಲ್ಪನೆ ಮಾಡಿಕೊಳ್ಳಿ ಎಲ್ಲವೂ ಕೇವಲ ಬಿಳಿ ಇಲ್ಲವೇ ಕೇವಲ ಕಪ್ಪು ಬಣ್ಣವನ್ನು ಹೊಂದಿದ್ದರೆ ಹೇಗಿರುತ್ತದೆ ಎಂದು???. ಬೆಳ್ಳನೆಯ ಮೋಡ, ಬೆಳ್ಳನೆಯ ವಿಶಾಲ ಸಮುದ್ರ, ಬೆಳ್ಳನೆಯ ಗಿಡ ಮರಗಳು, ಬೆಳ್ಳನೆಯ ರಸ್ತೆಗಳು, ಬೆಳ್ಳನೆಯ ದೇಹದ ಆಕೃತಿಗಳು ಅಬ್ಬಬ್ಬಾ ಯಾವುದೂ ಚೆನ್ನಾಗಿರುವುದಿಲ್ಲ. ಅಷ್ಟರಲ್ಲಿಯೇ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಕೂಡಿಸಿದ ಬಣ್ಣ ತುಸು ಹೆಚ್ಚೇ ಮನಮೋಹಕ ಎನಿಸುತ್ತದೆ.
ಆದರೆ ಹಲವಾರು ಬಣ್ಣಗಳನ್ನು ಹೊಂದಿರುವ ಈ ಪ್ರಕೃತಿ ಅತ್ಯಂತ ಸುಂದರ, ನಯನ ಮನೋಹರವಾಗಿರುತ್ತದೆ. ಬಣ್ಣವಿಲ್ಲದ ಬದುಕು ಬರಡು ಎನಿಸುತ್ತದೆ. ಆಕಾಶದಲ್ಲಿ ತಿಳಿ ನೀಲಿ ಮೋಡಗಳು ಮತ್ತು ಕಪ್ಪು ಮೋಡಗಳು, ಹಸಿರು ಹಾಸಿದ ಗಿಡಮರಗಳು, ಆಕಾಶದ ನೀಲಿಯನ್ನೇ ಹೊದ್ದ ತಿಳಿ ನೀಲ ಸಾಗರ, ಕಪ್ಪನೆಯ ಟಾರು ರಸ್ತೆಗಳು, ಬೆಳ್ಳನೆಯ ಬೆಳ್ಳಕ್ಕಿಗಳು, ವಿಧವಿಧ ಬಣ್ಣದ ಪಕ್ಷಿಗಳು, ಪ್ರಾಣಿಗಳು ಹೀಗೆ ಬಣ್ಣಮಯ ಲೋಕ ನಮ್ಮದು. ಈ ಬಣ್ಣ ಬಣ್ಣದ ಲೋಕವನ್ನು ಬಣ್ಣಿಸಲು ಪದಗಳು ಸಾಲದಾಗುತ್ತವೆ ಎಂದರೆ ಅದು ಅತಿಶಯೋಕ್ತಿಯೇನಲ್ಲ!!

ಬಣ್ಣಗಳು ಕೂಡ ನಮ್ಮ ಮನಸ್ಸಿನ ಭಾವಗಳನ್ನು ಸೂಚಿಸುತ್ತವೆ. ನಮ್ಮ ಮನಸ್ಸು ಅತ್ಯಂತ ಉದಾಸ ಸ್ಥಿತಿಯಲ್ಲಿದ್ದಾಗ ಊದಾ ಬಣ್ಣದ ಗೋಡೆಗಳು ಇಷ್ಟವಾದರೆ ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣ ಕಣ್ಣಿಗೆ ಮತ್ತು ಮನಸ್ಸಿಗೆ ಹಿತವನ್ನು ನೀಡುತ್ತವೆ. ಕೆಂಪು ಗುಲಾಬಿಯ ಬಣ್ಣ ಪ್ರೀತಿಯ ದೋತಕವಾದರೆ ಬಿಳಿ ಶಾಂತಿಯ ಸೂಚಕ. ಹಳದಿ ಬಣ್ಣ ಸ್ನೇಹವನ್ನು ಸೂಚಿಸಿದರೆ ಹಸಿರು ಸಮೃದ್ಧಿಯ ಸಂಕೇತ. ಹಲವಿಧದ ಬಣ್ಣಗಳನ್ನು ತನ್ನ ಗರಿಗಳಲ್ಲಿ ಅಡಗಿಸಿಕೊಂಡಿರುವ ನವಿಲು ನಮ್ಮ ರಾಷ್ಟ್ರ ಪಕ್ಷಿ. ಬಣ್ಣಗಳು ಭಾವನೆಗಳನ್ನು ಅರಳಿಸುತ್ತವೆ…. ಅಂತೆಯೇ ಬಣ್ಣದ ಹಬ್ಬವು ಕೂಡ. ಕೆಲ ಹಬ್ಬಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರಮುಖ ಪಾತ್ರವನ್ನು ವಹಿಸಿದರೆ ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ.

ಪೌರಾಣಿಕ ಐತಿಹ್ಯಗಳ ಪ್ರಕಾರ ಶಿವನ ಪತ್ನಿಯಾದ ಸತಿ ದೇವಿಯು ತನ್ನ ತಂದೆ ದಕ್ಷ ರಾಜನು ನಡೆಸುತ್ತಿದ್ದ ಯಜ್ಞಕ್ಕೆ ಆಹ್ವಾನವಿಲ್ಲದೆ ಹೋಗುವುದು ಬೇಡ ಎಂಬ ಗಂಡನ ಆಣತಿಯನ್ನು ಮೀರಿ ತವರು ಮನೆಯ ಕಾರ್ಯಕ್ರಮವೆಂದು ಹೋಗಿ ಅಲ್ಲಿ ತನ್ನ ತಂದೆಯಿಂದಲೇ ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಮಹಾದೇವ ರೌದ್ರಾವೇಶದಿಂದ ಆಕೆಯ ದೇಹವನ್ನು ಹೊತ್ತು ತಿರುಗುತ್ತಿದ್ದಾಗ ಆತನ ಆವೇಶಕ್ಕೆ ಇಡೀ ಪ್ರಪಂಚ ನಡುಗುತ್ತಿತ್ತು. ಶಿವನ ಕೋಪವು ವೈಪರೀತ್ಯಕ್ಕೆ ತಿರುಗಬಾರದು ಎಂಬ ಕಾರಣದಿಂದ ಮಹಾವಿಷ್ಣು ತನ್ನ ಸುದರ್ಶನ ಚಕ್ರವನ್ನು ಬಳಸಿ ಸತಿ ದೇವಿಯ ದೇಹವನ್ನುಚಿದ್ರಗೊಳಿಸಿದನು. ಈಗಾಗಲೇ ಸುಟ್ಟು ಹೋದ ಆಕೆಯ ದೇಹದ ಭಾಗಗಳು ಅಖಂಡ ಭಾರತದ 54 ಸ್ಥಳಗಳಲ್ಲಿ ಬೀಳಲ್ಪಟ್ಟು 54 ಶಕ್ತಿ ಪೀಠಗಳು
ಆವಿರ್ಭವಿಸಿದವು. ಮಹಾವಿಷ್ಣು ಶಿವನನ್ನು ಶಾಂತಗೊಳಿಸಿದ ನಂತರ ಇವನು ಉಗ್ರ ತಪಸ್ಸನ್ನು ಆಚರಿಸಲು ಹೊರಟು ಹೋದನು. ಅದಕ್ಕೂ ಮುನ್ನ ತಾರಕಾಸುರನು ಭೋಲಾಶಂಕರನ ಏಳು ದಿನದ ಮಗುವಿನಿಂದ ಮಾತ್ರ ತನಗೆ ಮರಣ ಬರಲಿ ಎಂದು ಬ್ರಹ್ಮದೇವನಿಂದ ವರ ಪಡೆದಿದ್ದನು. ಭಕ್ತ ಪ್ರಿಯ ಬ್ರಹ್ಮನು ತಥಾಸ್ತು ಎಂದು ಹೇಳಿಯೂ ಆಗಿತ್ತು. ನಂತರ ತಾರಕಾಸುರನ ಕೋಟಲೆಗಳು ಒಂದಲ್ಲ ಎರಡಲ್ಲ ಇಡೀ ಪೃಥ್ವಿಯ ಜನರನ್ನು ಆತ ಅತ್ಯಂತ ಕ್ರೂರವಾಗಿ ಕಾಡಲಾರಂಭಿಸಿದನು. ದೇವತೆಗಳಿಗೂ ಆತನ ಕಾಟದ ಬಿಸಿ ತಗುಲಿದಾಗ ಅವರೆಲ್ಲರೂ ಸೇರಿ ಬ್ರಹ್ಮ ಮತ್ತು ವಿಷ್ಣುವನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡರು.ಇದೀಗ ಬ್ರಹ್ಮ ವಿಷ್ಣು ಮತ್ತು ದೇವತೆಗಳು ಸೇರಿ ಭೋಗ ತಪಸ್ಸಿನಲ್ಲಿ ನಿರತನಾದ ಶಿವನ ವಿವಾಹವನ್ನು ಹಿಮವಂತ ಮತ್ತು ಮೇನಾ ದೇವಿಯರ ಪುತ್ರಿ ಗಿರಿಜಾದೇವಿಯೊಂದಿಗೆ ಮಾಡುವ ಆಶಯಕ್ಕೆ ಬೆಂಬಲವಾಗಿ ಶಿವನನ್ನು ಎಚ್ಚರಿಸುವ ಮಹಾ ಕಾರ್ಯಕ್ಕೆ ಕಾಮದ ಅಧಿದೇವತೆಯಾದ ಮನ್ಮಥನಿಗೆ ಒಪ್ಪಿಸಿದರು. ಶಿವನನ್ನು ಎಚ್ಚರಗೊಳಿಸುವ ಈ ಮಹಾಮಣಿಹದಲ್ಲಿ ತನ್ನ ಪ್ರಾಣ ಹೋಗುವದೆಂಬ ಅರಿವಿದ್ದರೂ ಕೂಡ ಲೋಕ ಕಲ್ಯಾಣಕ್ಕಾಗಿ ಈ ಕಾರ್ಯವನ್ನು ಒಪ್ಪಿಕೊಂಡ ಕಾಮದೇವನು ತನ್ನ ಪತ್ನಿ ರತಿದೇವಿಯೊಂದಿಗೆ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲೊಂದು ಸುಂದರ ಲೋಕವನ್ನು ಸೃಷ್ಟಿಸಿ ಪತ್ನಿಯೊಂದಿಗೆ ಮೋಹಕವಾಗಿ ನೃತ್ಯ ಮಾಡಿ ಶಿವನ ಮನಸ್ಸನ್ನು ತಣಿಸಲು ಪ್ರಯತ್ನಿಸಿದನು. ಕಾಮದೇವ ಮತ್ತು ರತಿದೇವಿಯರ ಸಾಕಷ್ಟು ಪ್ರಯತ್ನದ ನಂತರ ಕೂಡ ಶಿವ ಎಚ್ಚರಗೊಳ್ಳದೆ ಹೋದಾಗ ಅಂತಿಮ ಪ್ರಯತ್ನವಾಗಿ ಕಾಮದೇವನು ಪುಷ್ಪ ಬಾಣವನ್ನು ಶಿವನೆಡೆಗೆ ಬಿಟ್ಟನು. ಪುಷ್ಪಬಾಣ ಸೋಕಿದ ಶಿವನು ಎಚ್ಚರಗೊಂಡು ತನ್ನ ತಪಸ್ಸನ್ನು ಕೆಡಿಸಲು ಯತ್ನಿಸಿದ ಕಾಮದೇವನನ್ನು ತನ್ನ ಮೂರನೇ ಕಣ್ಣ ತೆರೆದು ಸುಟ್ಟುಬಿಟ್ಟನು. ಆಗ ಅಲ್ಲಿಯೇ ಇದ್ದ ರತಿ ದೇವಿಯು ಲೋಕ ಕಲ್ಯಾಣಕ್ಕಾಗಿ ದೇವತೆಗಳ ಆಗ್ರಹದ ಮೇರೆಗೆ ತನ್ನ ಪತಿ ಈ ಕಾರ್ಯಕ್ಕೆ ಎಳಸಿದನೆಂದು ತನಗೆ ಪತಿ ಭಿಕ್ಷೆ ನೀಡಬೇಕೆಂದು ಶಿವನನ್ನು ಕೇಳಿಕೊಂಡಳು. ಆಗ ಶಿವನು ಕಾಮದೇವನು  ಆಕೆಯ ಕಣ್ಣಿಗೆ ಮಾತ್ರ ಕಾಣುವಂತೆ ವರ ನೀಡಿ ಇಡೀ ಲೋಕದ ಪಾಲಿಗೆ ಮನ್ಮಥನು ಅನಂಗನಾಗಿ ಇರುವಂತೆ ವರ ನೀಡಿದನು. ಈ ಆನಂಗ ವ್ಯಕ್ತಿತ್ವವೇ ನಮ್ಮ ನಿಮ್ಮೊಳಗಿರುವ ಕಾಮ. ಕಾಮ ಎಂದರೆ ಕೇವಲ ದೈಹಿಕ ಲಾಲಸೆಯಲ್ಲ ಅದು ನಮ್ಮನಿಮ್ಮೊಳಗೆ ಅಡಗಿರುವ ಆಸೆಯ ಮೂರ್ತ ರೂಪ. ಅರಿಷಡ್ವರ್ಗಗಳಲ್ಲಿ ಒಂದಾಗಿರುವ ಈ ಕಾಮ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಅಂತಹ ಕಾಮದ ಕೆಟ್ಟತನವನ್ನು, ಅತಿ ಆಸೆಯನ್ನು  ಪ್ರತಿವರ್ಷ ಶಿಶಿರ ಮಾಸದ ಹುಣ್ಣಿಮೆಯ ದಿನದಂದು ಕಟ್ಟಿಗೆಯ ರೂಪದಲ್ಲಿ ಸುಟ್ಟು ಹಾಕುವ ಮೂಲಕ ಕಾಮದಹನವನ್ನು ನಾವು ಆಚರಿಸುತ್ತೇವೆ. ಈ ಸಮಯದಲ್ಲಿ ಕೆಟ್ಟ ಕೆಟ್ಟ ಬೈಗುಳಗಳು, ಪೋಲಿ ಮಾತುಗಳನ್ನು ಕೂಡ ಆಡಿ ತೀಟೆ ತೀರಿಸಿಕೊಳ್ಳುವ ಸಂಪ್ರದಾಯ ಇದೆ. ಲಬೋ ಎಂದು ಬಾಯಿಗೆ ಕೈಯಿಟ್ಟು ಬಾಯಿ ಬಡೆದುಕೊಳ್ಳುವ ಆ ಮೂಲಕ ಕಾಮದಹನವನ್ನು ಆಚರಿಸುವ ಪ್ರಕ್ರಿಯೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತವಾಗಿದೆ.

ನಾವು ಚಿಕ್ಕವರಿದ್ದಾಗ ನನ್ನ ಅಣ್ಣಂದಿರು ತಮ್ಮದೇ ಒಂದು ತಂಡ ಕಟ್ಟಿಕೊಂಡು ಮನೆ ಮನೆಯಲ್ಲಿ ಕಾಮಣ್ಣನ ಪಟ್ಟಿಯನ್ನು ಸಂಗ್ರಹಿಸಿ ಅದರ ಜೊತೆಗೆ ಉರುವಲುಗಳನ್ನು ಕೂಡ ಮನೆ ಮನೆಗಳಿಂದ ಪಡೆಯುತ್ತಿದ್ದರು. ಅವರೊಂದಿಗೆ ನಾವು ಚಿಕ್ಕ ಹೆಣ್ಣು ಮಕ್ಕಳು ಕೂಡ ಜೊತೆಗೂಡುತ್ತಿದ್ದೆವು. ಇದರ ಜೊತೆಗೆ  ಮನೆಯ ಹಿತ್ತಲಿನಲ್ಲಿ ಇರುತ್ತಿದ್ದ ಸಣ್ಣ ಪುಟ್ಟ ಮರದ ನಿರುಪಯುಕ್ತ ಪೀಠೋಪಕರಣಗಳ ತುಂಡುಗಳನ್ನು, ರಟ್ಟಿನ ಡಬ್ಬಿಗಳನ್ನು ಮತ್ತಿತರ ಉರುವಲು ಸಾಮಗ್ರಿಗಳನ್ನು ಕದ್ದು ಈ ಕಾಮ ದಹನದ ಕಾರ್ಯಕ್ಕೆ ಬಳಸುತ್ತಿದ್ದೆವು. ಹೀಗೆ ತಂದ ವಸ್ತುಗಳನ್ನು ಕಾಮದಹನಕ್ಕೆ ಸಜ್ಜಾಗಿದ ಅಂಗಳದಲ್ಲಿ ಸೇರಿಸಿ ಅದರ ಮೇಲೆ ತೆಂಗಿನ ಗರಿಗಳನ್ನು ಉದ್ದಕ್ಕೆ ಸೇರಿಸಿ ಮುಚ್ಚಿ ಬಿಡುತ್ತಿದ್ದೆವು. ಹುಣ್ಣಿಮೆಯ ದಿನ ರಾತ್ರಿ ಕಾಮನ ಪೂಜೆಯನ್ನು ಮಕ್ಕಳಲ್ಲಿ ಒಬ್ಬರು ಶಾಸ್ತ್ರೋಕ್ತವಾಗಿ ಮಾಡಿ ತಮಟೆಯ ಸದ್ದಿನ ನಡುವೆ ಕಾಮಣ್ಣನನ್ನು ಸುಡುವ ಮೂಲಕ ಆಚರಿಸುತ್ತಿದ್ದೆವು.

ಮರುದಿನ ಮುಂಜಾನೆ ಈ ಕಾಮನನ್ನು ಸುಟ್ಟ ಕೆಂಡದಿಂದಲೇ ಪ್ರತಿ ಮನೆಯಲ್ಲಿಯೂ ಒಲೆ ಹಚ್ಚಿ ಅಡುಗೆ ಮಾಡುತ್ತಾರೆ ಹಾಗೆ ಒಲೆ ಇಲ್ಲದವರು ಕಾಮಣ್ಣನನ್ನು ಸುಡಲು ಬಳಸಿದ ಕಟ್ಟಿಗೆಯ ಕೆಂಡವನ್ನು ತಂದು ನೀರು ಕಾಯಿಸುವ ಒಲೆಗೆ ಹಾಕಿ ನೀರು ಕಾಯಿಸಿ ಆ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಕೆಲಸವನ್ನು ಮನೆಯ ಅಮ್ಮ,ಅಜ್ಜಿಯಂದಿರು ಮಾಡಿದರೆ… ಅಪ್ಪ ಹಿಂದಿನ ದಿನವೇ ಅಂಗಡಿಯಿಂದ ತಂದ ಬೇರೆ ಬೇರೆ ಬಣ್ಣಗಳನ್ನು ಬೇರೆ ಬೇರೆಯಾಗಿಯೇ ಬಕೀಟುಗಳಲ್ಲಿ ಕಲಸಿ ವಿವಿಧ ಬಾಟಲಿಗಳಿಗೆ ತುಂಬಿ ಕೊಡುತ್ತಿದ್ದರು. ತುಸು ಹಳೆಯದಾದ ಬಟ್ಟೆಗಳನ್ನು ತೊಟ್ಟ ಮಕ್ಕಳು ಬಣ್ಣದ ಬಾಟಲಿಗಳನ್ನು,ಪಿಚಕಾರಿಗಳನ್ನು ಹಿಡಿದುಕೊಂಡು ಬೇರೆಯವರ ಮೇಲೆ ಬಣ್ಣವನ್ನು ಎರಚುತ್ತಾ ಖುಷಿಯಿಂದ ಕೇಕೆ ಹಾಕುತ್ತಾ ಮನೆಯ ಸುತ್ತ ಬೇರೆ ಬೇರೆ ಓಣಿಗಳಲ್ಲಿ ಓಡಾಡಿ ಬಣ್ಣ ಎರಚಿ ಸಂಭ್ರಮಿಸುತಿದ್ದರು. ಇನ್ನು ತುಸು ದೊಡ್ಡವರು ಬಣ್ಣದ ಒಣ ಪುಡಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಸ್ನೇಹಿತರಿಗೆ ಮತ್ತು ಪರಿಚಿತರಿಗೆ ಬಣ್ಣವನ್ನು ಹಚ್ಚಿ ಖುಷಿಪಡುತ್ತಿದ್ದರು ಕೆಲವೊಮ್ಮೆ ಜಗಳವಾಡಿ ಮಾತು ಬಿಟ್ಟ ಸ್ನೇಹಿತರು ಕೂಡ ಹೋಳಿ ಹಬ್ಬದ ಈ ಸಮಯದಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಮತ್ತೆ ಒಂದಾಗುತ್ತಿದ್ದರು. ಮಧ್ಯಾಹ್ನದವರಿಗೂ ಬಣ್ಣದ ಆಟವನ್ನು ಆಡಿ ಮನೆಗೆ ಬರುತ್ತಿದ್ದ ಮಕ್ಕಳಿಗೆ ಎಣ್ಣೆ ಹಚ್ಚಿ ಬಣ್ಣ ಹೋಗುವಂತೆ ತಿಕ್ಕಿ ಸ್ನಾನ ಮಾಡಲು ಹೇಳಿದರೆ ದೊಡ್ಡ ಮಕ್ಕಳು ಹತ್ತಿರದ ಹೊಳೆ ಹಳ್ಳಗಳಿಗೆ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋಗುತ್ತಾರೆ. ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ ಎಂಬಂತೆ ತಾಯಂದಿರು ಹೋಳಿಗೆಯನ್ನು ಮಾಡಿ ಮಿಂದು ಬಂದ ಮಕ್ಕಳಿಗೆ ಉಣಬಡಿಸುತ್ತಾರೆ.

ಬದಲಾದ ಇಂದಿನ ಕಾಲಘಟ್ಟದಲ್ಲಿ ಹೋಳಿ ಹುಣ್ಣಿಮೆಯ ಸಂಭ್ರಮ ಮರೆಯಾಗಿದ್ದರೂ ಬಣ್ಣದ ಹಬ್ಬ ತನ್ನ ರಂಗನ್ನು ಉಳಿಸಿಕೊಂಡಿದೆ. ಆಧುನಿಕ ಯುಗದಲ್ಲಿ ಅನೇಕ ರೀತಿಯ ಬಣ್ಣದ ಪಿಚಕಾರಿಗಳು ಬಂದಿದ್ದು ಮಕ್ಕಳು ವಿವಿಧ ರಂಗುಗಳನ್ನು ಪರಸ್ಪರ ಎರಚಿ ಸಂತಸ ಪಡುತ್ತಾರೆ.

ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಹೋಲಿಕಾದಹನ ಮಾಡುವ ಮೂಲಕ ಆಚರಿಸುತ್ತಾರೆ ಅವರ ಪ್ರಕಾರ ರಾಕ್ಷಸ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಹರಿಯೇ ಸರ್ವೋತ್ತಮ, ಹರಿಯೇ ಜಗದೋದ್ಧಾರಕ ಎಂದು ತನ್ನ ತಂದೆಯ ಆಜನ್ಮ ವೈರಿ ಹರಿಯನ್ನು ಪೂಜಿಸುವುದನ್ನು ಕಂಡು ಕೋಪದಿಂದ ತನ್ನ ಮಗನನ್ನು ಸಾಯಿಸಲು ಹಲವಾರು ಬಾರಿ ಪ್ರಯತ್ನಿಸಿದನು. ಅಂತಹ ಒಂದು ಪ್ರಯತ್ನದ ಅಂಗವಾಗಿ ತನ್ನ ಸೋದರಿ ಹೋಲಿಕಾಳಿಗೆ ವರವಾಗಿ ದೊರೆತ ಸುಡದ ಅಂಗವಸ್ತ್ರವನ್ನು ಧರಿಸಿ ಪ್ರಹ್ಲಾದನನ್ನು ಬೆಂಕಿಯ ಬಾಯಿಯಲ್ಲಿ ದೂಡಲು ಆಕೆಗೆ ಕೇಳಿಕೊಂಡನು. ಅಣ್ಣನ ಮಾತನ್ನು ಮೀರದ ಹೋಲಿಕ ತನ್ನ ಅಂಗವಸ್ತ್ರವನ್ನು ಧರಿಸಿ ಪುಟ್ಟ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಯಲ್ಲಿ ಪ್ರವೇಶಿಸಿದಳು. ಆದರೆ ಯಾವ ಮಾಯದಲ್ಲಿಯೋ ಆಕೆಯ ಅಂಗವಸ್ತ್ರವು ಆಕೆಯ ದೇಹದಿಂದ ಬಿದ್ದು ಹೋಗಿ ಆಕೆ ಸಜೀವವಾಗಿ ದಹನಗೊಂಡಳು, ಆದರೆ ಪುಟ್ಟ ಮಗು ಪ್ರಹ್ಲಾದ ಸೋಜಿಗವೆಂಬಂತೆ ಪಾರಾದನು. ಈ ದಿನ ಹೋಲಿಕ ಎಂಬ ಕಾಮನೆಯನ್ನು ಸುಟ್ಟು ಹಾಕುವ ಆಚರಣೆಯನ್ನು ಉತ್ತರ ಭಾರತೀಯರು ಮಾಡುತ್ತಾರೆ. ಹೋಲಿ ಹಬ್ಬ ಉತ್ತರ ಭಾರತೀಯರ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದ್ದು ಹಾಡು, ಕುಣಿತ, ನೃತ್ಯ ಸಂಗೀತಗಳ ಜೊತೆ ಜೊತೆಗೆ ಭಾಂಗ್ ಎಂಬ ನಶೆಯ ಪೇಯವನ್ನು ಕೂಡ ಅವರು ಸೇವಿಸಿ ಮತ್ತರಾಗುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಹೋಲಿ ಪಾರ್ಟಿ ಎಂದು ಚಿತ್ರರಂಗದ ಎಲ್ಲರನ್ನೂ ಆಮಂತ್ರಿಸಿ ದೊಡ್ಡ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

ಇನ್ನು  ನರಸಿಂಹದೇವರ ದೇವಸ್ಥಾನವಿರುವ ಕಡೆಗಳಲ್ಲಿ ಹೋಳಿಹಬ್ಬವನ್ನು ಆಚರಿಸುವುದಿಲ್ಲ. ನರಸಿಂಹದೇವರ ದೇವಸ್ಥಾನವಿರುವ ಸುತ್ತಲ ಏಳು ಹಳ್ಳಿಗಳಲ್ಲಿ ಕಾಮದಹನ,ಬಾಯಿ ಬಡಿದುಕೊಳ್ಳುವ, ಕೆಟ್ಟ ಮಾತುಗಳನ್ನು ಹೇಳುವ ಯಾವುದೇ ಆಚರಣೆಗಳು ಇಲ್ಲ. ಜೊತೆಗೆ ಬಣ್ಣದ ಹಬ್ಬವು ಇಲ್ಲ. ಅದೆಷ್ಟೇ ಆಕರ್ಷಣೀಯವಾದರೂ ಬಣ್ಣದ ಈ ಹಬ್ಬವನ್ನು ಈ ಭಾಗಗಳಲ್ಲಿ ಆಚರಿಸುವುದಿಲ್ಲ. ಅಷ್ಟಾಗಿಯೂ ಆಚರಿಸಬೇಕೆಂಬ ಆಸಕ್ತಿಯುಳ್ಳವರು ತಮ್ಮ ಊರನ್ನು ಬಿಟ್ಟು ಬೇರೆ ಊರುಗಳಿಗೆ ಬಣ್ಣದ ಆಟ ಆಡಲು ತೆರಳುತ್ತಾರೆ.

ಇನ್ನು ಕೆಲ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆಯ ದಿನ ಕಾಮ ಮತ್ತು ರತಿದೇವಿಯರನ್ನು ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ನಾಲ್ಕು ದಿನಗಳ ಕಾಲ ಕಾಮ ರತಿದೇವಿಯರನ್ನು ಪೂಜಿಸಿ 4ನೇ ದಿನ ರಾತ್ರಿ ಕಾಮದಹನವನ್ನು ಮಾಡುತ್ತಾರೆ. ಐದನೆಯ ದಿನ ಬಣ್ಣದ ಹಬ್ಬವನ್ನು ರಂಗ ಪಂಚಮಿ ಎಂದು ಆಚರಿಸುತ್ತಾರೆ.

ಜೀವಂತ ಕಾಮದೇವ ಮತ್ತು ರತಿದೇವಿಯರನ್ನು ಕೂಡ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನೋಡಬಹುದು. ಕಣ್ಣು ಪಿಳುಕಿಸದೆ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದೆ ಅಲಂಕಾರಗೊಂಡ ಕಲಾವಿದರು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ನೋಡಬಹುದು. ತಮ್ಮ ಮನೆಯ ಸೀರೆ ವಸ್ತ್ರಗಳನ್ನು ಕಾಮದೇವ ಮತ್ತು ರತಿದೇವಿಯರಿಗೆ ಹಾಕಿ ಸಂತೋಷ ಪಡುವ ಜನರು ಕೂಡ ಇದ್ದಾರೆ. ಇನ್ನು ಕೆಲವರು ತಮ್ಮ ಮನೆಯ ಚಿನ್ನದ ಆಭರಣಗಳನ್ನು ಕೂಡ ಕಾಮದೇವ ಮತ್ತು ರತಿ ದೇವಿಯರಿಗೆ ಅಲಂಕರಿಸಲು ಕೊಡುತ್ತಾರೆ. ಕಾಮದಹನದ ನಂತರ ತಮ್ಮ ವಸ್ತುಗಳನ್ನು ಮರಳಿ ಪಡೆಯುತ್ತಾರೆ.  ಮದುವೆಯಾಗದ ಯುವಕ ಯುವತಿಯರು, ಮಕ್ಕಳಾಗದ ದಂಪತಿಗಳು ಕಾಮದೇವ ರತಿದೇವಿಯರಲ್ಲಿ ಪ್ರಾರ್ಥಿಸಿ ಹರಕೆ ಕಟ್ಟಿಕೊಳ್ಳುತ್ತಾರೆ. ಮುಂದೆ ಮದುವೆಯಾದ ನಂತರ,ಮಕ್ಕಳಾದ ನಂತರ ತಮ್ಮ ಹರಕೆಯನ್ನು ತೀರಿಸುತ್ತಾರೆ.

ಹಳೆಯ ಆಚರಣೆಗಳು ಮತ್ತು ಹೊಸ ಸಂಭ್ರಮಗಳ ಸಂಗಮದ ಈ ಹೋಲಿ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಸುಖ ಸಮೃದ್ಧಿ ನೆಮ್ಮದಿಯನ್ನು ತರಲಿ ಎಂದು ಹಾರೈಸುವ


One thought on “

  1. ತುಂಬಾ ವಿಸ್ತೃತವಾಗಿ ಹಾಗೂ ಮನೋಹರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಮೇಡಂ.

Leave a Reply

Back To Top